ಹಾವೇರಿ: ಸೌಮ್ಯ ಮತ್ತು ಉಗ್ರ ಭಕ್ತಿಗಳಾಚೆ ಇರುವ ಜೀವನ ಶ್ರದ್ಧೆ, ಸಹಬಾಳ್ವೆ ಸಂದೇಶ ಸಾರುವ ಭಕ್ತಿ ಮಂಜಿಲ್ ಎಂಬ ಕಿರುನಾಟಕ ನಗರದ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಪ್ರದರ್ಶನವಾಯಿತು.ಸಂತ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಇವರು ಆಯೋಜಿಸಿದ್ದ ಭಾರತೀಯ ಪರಂಪರೆ ಮತ್ತು ಕರ್ನಾಟಕ ಎಂಬ ರಾಷ್ಟ್ರೀಯ ವಿಚಾರಸಂಕಿರಣದ ಸಮಾರೋಪದಲ್ಲಿ ನಾಟಕವನ್ನು ಜಿಲ್ಲಾ ಕಲಾ ಬಳಗದವರು ಅಭಿನಯಿಸಿದರು.ರಾಮನನ್ನ ಹುಡ್ಕೋಂತ ಹೊಂಟಿದ್ದೆ, ಆದರ ನನಗ ಅಲ್ಲಾ ಸಿಕ್ಕ ಎಂಬ ಮಾತು ಹೇಳಿದಾಗ ಇಡೀ ಸಭಾಂಗಣ ಚಪ್ಪಾಳೆಯಲ್ಲಿ ಮುಳುಗಿತು. ಕಾರಣ ಈ ಮಾತು ಹೇಳಿದ ಅಜ್ಜಿಯ ಮಗ ಮುಸ್ಲಿಂ ಒಡೆತನದ ಮನೆಯೊಂದರಲ್ಲಿ ಬಾಡಿಗೆಗೆ ಬಂದಾಗ ಕಾಲಿಟ್ಟ ತಕ್ಷಣವೇ ಅಲ್ಲಾ ಹೋ, ಅಕ್ಬರ್ ಎಂಬ ಆಜಾನಿನ ದನಿ ಕೇಳುತ್ತಲೇ ರಾಮನ ಪರಮ ಭಕ್ತಳಾದ ಅಜ್ಜಿ ಹೇಳಿದ ಮಾತಿದು.
ಹಾವೇರಿ: ದುಡಿಯುವ ವರ್ಗದ ಮಹಿಳೆಯರು ಹಾಗೂ ಸಾರ್ವಜನಿಕರು ಆರೋಗ್ಯವಾಗಿ ಇರಬೇಕೆಂಬ ಉದ್ದೇಶದಿಂದ ಸರ್ಕಾರ ದುಡಿಯುವಂತಹ ಸ್ಥಳದಲ್ಲೇ ಜನರಿಗೆ ಆರೋಗ್ಯ ತಪಾಸಣೆ ನಡೆಸುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಾಪಂ ಸಹಾಯಕ ನಿರ್ದೆಶಕ ಗುಡ್ಡಪ್ಪ ನಾಯಕ ತಿಳಿಸಿದರು.
ತಾಲೂಕಿನ ಸಂಗೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆಯೋಜಿಸಿದ್ದ ನರೇಗಾ ಕೂಲಿಕಾರರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಬಡ ಜನರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಜನತೆ ಆರೋಗ್ಯವಾಗಿದ್ದರೆ ಗ್ರಾಮ, ರಾಜ್ಯ ಹಾಗೂ ದೇಶ ಆರೋಗ್ಯವಾಗಿರುತ್ತದೆ ಎಂದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಾನಂದ ಬಾರ್ಕಿ ಮಾತನಾಡಿ, ಸಂಗೂರ ಗ್ರಾಮದ ಕೆರೆ ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರರು ಬಿಪಿ, ಶುಗರ್ ಸೇರಿದಂತೆ ಇತರೆ ಸಾಮಾನ್ಯ ಸಮಸ್ಯೆಗಳ ಬಗ್ಗೆ ಕಡ್ಡಾಯವಾಗಿ ಚೆಕ್ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.ಗ್ರಾಪಂ ಕಾರ್ಯದರ್ಶಿ ಶಂಕರ ಹೊನ್ನತ್ತಿ, ಮಾಹಿತಿ ಶಿಕ್ಷಣ ಸಂಯೋಜಕ ಗಿರೀಶ್ ಬೆನ್ನೂರ, ಟಿ.ಸಿ. ಅಕ್ಷಯ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.