ಕನ್ನಡಪ್ರಭ ವಾರ್ತೆ ಭಾಲ್ಕಿ
ಭಾಲ್ಕಿ ಪಟ್ಟಣವನ್ನು ಸ್ವಚ್ಛ ಮತ್ತು ಸುಂದರ ಪಟ್ಟಣವನ್ನಾಗಿಸುವ ಗುರಿ ಹೊಂದಲಾಗಿದೆ. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ತ್ವರಿತಗತಿಯಲ್ಲಿ ಸಿಗುವಂತಾಗಲು ಪೌರಾಡಳಿತ ಇಲಾಖೆಯಿಂದ ಈ ಹಿಂದಿನ ನನ್ನ ಅವಧಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದ ವಿನೂತನ ತಂತ್ರಜ್ಞಾನದ ಸಾಫ್ಟವೇರ್ ತಯಾರಿಕೆಗೆ ಈಗ ಆಧ್ಯತೆ ಮೇರೆಗೆ ಜನರಿಗೆ ಅರ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಹೇಳಿದರು.ಪಟ್ಟಣದ ಹೊರ ವಲಯದ ಖಂಡ್ರೆ ತಾಂಡಾ ಸಮೀಪದಲ್ಲಿ ಶುಕ್ರವಾರ 2.26ಕೋಟಿ ರು.ವೆಚ್ಚದ ಮಲತ್ಯಾಜ್ಯ ಸಂಸ್ಕರಣ ಘಟಕ (ಎಫ್‌ಎಸ್‌ಟಿಪಿ) ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ವಾಸ ಮಾಡುವ ಜನರಿಗೆ ವಿವಿಧ ರೀತಿಯ ಪರವಾನಿಗೆ ಕೊಡಲು ವಿಳಂಬವಾಗುತ್ತಿದೆ. ಜನರ ಅನಗತ್ಯ ತೊಂದರೆ ತಪ್ಪಿಸಲು ನಾನು ಪೌರಡಳಿತ ಸಚಿವನಾಗಿದ್ದ ಸಂದರ್ಭದಲ್ಲಿ ಶೀಘ್ರ ಪರವಾನಿಗೆ ಒದಗಿಸಲು ಸಾಫ್ಟವೇರ್ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿತ್ತು ತಿಳಿಸಿದರು.
ಪುರಸಭೆ ವ್ಯಾಪ್ತಿಯಲ್ಲಿ ಮನೆ, ನೀರು ಮತ್ತು ವಾಣಿಜ್ಯ ಕಟ್ಟಡ ಮಾಲೀಕರಿಗೆ ತ್ವರಿತ ಗತಿಯಲ್ಲಿ ಪರವಾನಿಗೆ ಒದಗಿಸಲು ಹೊಸದಾಗಿ ವಿನೂತನ ತಂತ್ರಜ್ಞಾನದ ಸಾಫ್ಟವೇರ್ ಅಭಿವೃದ್ಧಿಪಡಿಸಲು ಈ ಹಿಂದಿನ ನನ್ನ ಅವಧಿಯಲ್ಲಿ ಯೋಜನೆ ರೂಪಿಸಲಾಗಿತ್ತು ಆದರೆ ನಂತರದ ದಿನಗಳಲ್ಲಿ ಸರ್ಕಾರ ಬದಲಾವಣೆಯಿಂದ ಪರವಾನಿಗೆ ಸಾಫ್ಟವೇರ್ ಅಭಿವೃದ್ಧಿಪಡಿಸುವ ಕೆಲಸ ನನೆಗುದಿಗೆ ಬಿದ್ದಿತು. ಶೀಘ್ರ ಸಾಫ್ಟವೇರ್ ಅಭಿವೃದ್ಧಿಪಡಿಸಲು ಸಂಬಂಧಿತರಿಗೆ ಸೂಚಿಸುವುದಾಗಿ ತಿಳಿಸಿದರು.ಹಿಂದಿನ ನನ್ನ ಅವಧಿಯಲ್ಲಿ ಸ್ವಚ್ಛತೆಯ ಮಹತ್ವ ಅರಿಯಲು ಸುಮಾರು ಒಂದು ಸಾವಿರ ಪೌರಕಾರ್ಮಿಕರಿಗೆ ಸಿಂಗಾಪುರ ಪ್ರವಾಸ ಕಳುಹಿಸಿಕೊಟ್ಟಿದ್ದೇನೆ. ವೇತನ ಹೆಚ್ಚಳ, ಪೌರ ಕಾರ್ಮಿಕರ ಕಾಯಂ, ಗೃಹಭಾಗ್ಯ ಯೋಜನೆಯಡಿ 7.5ಲಕ್ಷ ರು. ಅನುದಾನ ಕೊಡಿಸುವ ಪ್ರಯತ್ನ ಮಾಡಿದ್ದೇನೆ ಎಂದು ವಿವರಿಸಿದರು.
ಪಟ್ಟಣದಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣಕ್ಕಾಗಿ 2016ರಲ್ಲಿ ಪೌರಡಳಿತ ಸಚಿವನಿದ್ದ ಸಂದರ್ಭದಲ್ಲಿ ಪರಿಣಿತರಿಂದ ಡಿಸೈನ್ ಸಿದ್ಧಪಡಿಸಿ 2.26ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದೆ. ಆದರೆ ನಂತರ ಸರ್ಕಾರ ಬದಲಾಗಿದ್ದರಿಂದ ಈ ಯೋಜನೆ ಅರ್ಧಕ್ಕೆ ನಿಂತಿತು. ವಿಳಂಬವಾದರೂ ಇದೀಗ ಈ ಯೋಜನೆ ಪೂರ್ಣಗೊಳಿಸಲಾಗಿದೆ. ಪಟ್ಟಣ ಸ್ವಚ್ಛವಾಗಿರಿಸಲು ಈ ಮಲತ್ಯಾಜ್ಯ ಘಟಕ ಸಹಕಾರಿ ಆಗಲಿದೆ ಎಂದರು.ನೂರಾರೂ ಕೋಟಿ ರು. ಅನುದಾನ ಒದಗಿಸಿ ಪಟ್ಟಣದಲ್ಲಿ ಎಲ್ಲ ಬಡಾವಣೆಗಳಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಪಡಿಸಲಾಗಿದೆ. ಬೀದಿ ದೀಪ ಅಳವಡಿಕೆ ಸೇರಿ ಸ್ವಚ್ಛತೆಗೆ ಆಧ್ಯತೆ ನೀಡಲಾಗಿದೆ. ವಿವಿಧ ಕಟ್ಟಡ, ಕೆರೆ ಅಭಿವೃದ್ಧಿ ಪಡಿಸಲಾಗಿದೆ. ಅವುಗಳ ನಿರ್ವಹಣೆ ಸರಿಯಾದ ರೀತಿಯಲ್ಲಿ ಆಗಬೇಕು ಎಂದು ತಿಳಿಸಿದರು.
ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮೋತಿಲಾಲ್ ಲಂಬಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ, ಬಸವಕಲ್ಯಾಣ ಸಹಾಯಕ ಆಯುಕ್ತ ಪ್ರಕಾಶ ಕುದರೆ, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಅರುಣ, ಅಭಿಷೇಕ ಪೋಲಾ, ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಯೋಗೇಶ ಹಾಗೂ ಪಲ್ಲವಿ ಬೆಳಕೇರೆ ಸೇರಿದಂತೆ ಹಲವರು ಇದ್ದರು.