ಎಂಡಿಎ ಎಲ್ಲಾ ಹಗರಣ ಸಿಬಿಐ ತನಿಖೆಗೆ ವಹಿಸಿ

KannadaprabhaNewsNetwork |  
Published : Jul 19, 2024, 12:51 AM IST
40 | Kannada Prabha

ಸಾರಾಂಶ

50:50 ಅನುಪಾತದ ಹಂಚಿಕೆ ಹಗರಣ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತ್ರ ಗುರಿಯಾಗಿಸಿಕೊಂಡು ಟೀಕಿಸುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಎಂಡಿಎ) ಕೇವಲ 50:50 ಅನುಪಾತ ನಿವೇಶನಗಳಲ್ಲಿನ ಅವ್ಯವಹಾರ ಮಾತ್ರವಲ್ಲ, ಹಲವಾರು ವರ್ಷಗಳಿಂದ ಇದುವರೆಗೆ ನಡೆದಿರುವ ಎಲ್ಲಾ ರೀತಿಯ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಮೈಸೂರು ಗ್ರಾಹಕರ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಭಾಮಿ ವಿ. ಶೆಣೈ ಆಗ್ರಹಿಸಿದರು.

ಎಂಡಿಎ ಹಗರಣವನ್ನು ಸಿಬಿಐ ತನಿಖೆಗೆ ವಹಿಸದಿದ್ದರೇ ಮೈಸೂರು ಗ್ರಾಹಕರ ಪರಿಷತ್ ಹಾಗೂ ಕ್ಲೀನ್ ಮೈಸೂರು ಫೌಂಡೇಷನ್ ವತಿಯಿಂದ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆ ದಾಖಲಿಸುವ ಚಿಂತನೆ ನಡೆಸಲಾಗುವುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

50:50 ಅನುಪಾತದ ಹಂಚಿಕೆ ಹಗರಣ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾತ್ರ ಗುರಿಯಾಗಿಸಿಕೊಂಡು ಟೀಕಿಸುವುದು ಸರಿಯಲ್ಲ. ಎಂಡಿಎಯಲ್ಲಿ ಇತರೆ ಹಗರಣಗಳ ವಿಷಯದಲ್ಲೂ ರಾಜ್ಯದ ರಾಜಕೀಯ ನಾಯಕರು ಧ್ವನಿಯೆತ್ತದೇ ಕೇವಲ ಮುಖ್ಯಮಂತ್ರಿ ವಿರುದ್ಧ ಮಾತ್ರವೇ ಟೀಕಿಸುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಹಿಂದಿನ ಬಿಜೆಪಿ ಸರ್ಕಾರ ರಚಿಸಿದ ತಾಂತ್ರಿಕ ಸಮಿತಿ ವರದಿ ಸಹ ಇದೆ. ಆದರೂ ಅದನ್ನು ಈಗಿನ ಸರ್ಕಾರ ಸಂಪೂರ್ಣವಾಗಿ ಪ್ರಕಟಿಸಲು ಏಕೆ ಹಿಂಜರಿಯುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಅಲ್ಲದೆ, ಎಂಡಿಎ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸುವ ಬದಲು ಕೇವಲ ವರ್ಗಾವಣೆ ಮಾಡಿರುವುದು ಸಹ ಸರಿಯಲ್ಲ. ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರನ್ನು ವರ್ಗಾವಣೆಗೊಳಿಸಿರುವುದು ಸಹ ಅಚ್ಚರಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದರು.

ಈ ಹಿಂದಿನ ಜಿಲ್ಲಾಧಿಕಾರಿ ಮಣಿವಣ್ಣನ್ ಅವರ ಕಾಲದಲ್ಲೇ ಸುಮಾರು 200 ನಿವೇಶನಗಳನ್ನು ನಾಗರಿಕ ಬಳಕೆಗೆಂದು ನಿಗದಿಪಡಿಸಿದ್ದರೂ ಅವುಗಳಲ್ಲಿ ಎಷ್ಟೋ ದುರ್ಬಳಕೆ ಆಗಿವೆ. ಇದೇ ವೇಳೆ ಸಾಮಾನ್ಯ ಜನರಿಗೆ ನಿವೇಶನ ನೀಡುವ ನಿಟ್ಟಿನಲ್ಲಿ ಎಂಡಿಎ ಸೋತಿದೆ. ಹೀಗಾಗಿ, ಅದನ್ನು ಮುಚ್ಚಿ ಉಪಯುಕ್ತವಾದ ಬೇರೊಂದು ಸಂಸ್ಥೆ ಸ್ಥಾಪಿಸುವುದು ಸೂಕ್ತ ಎನಿಸುತ್ತದೆ ಎಂದರು.

ಮೈಗ್ರಾಪ ಪದಾಧಿಕಾರಿಗಳಾದ ವೆಂಕಟೇಶ್, ಭಾನುಪ್ರಶಾಂತ್, ಬಿ.ಎಸ್. ನಟರಾಜು, ಶೋಭನಾ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ