ಕನ್ನಡಪ್ರಭ ವಾರ್ತೆ, ಚಾಮರಾಜನಗರ
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಮತ್ತು ಹನೂರು ತಾಲೂಕಿನ ಹೊಗೇನಕಲ್ ಜಲಪಾತದಲ್ಲಿ ಕಾವೇರಿ ಧುಮ್ಮಿಕ್ಕುವ ರುದ್ರ ರಮಣೀಯ ದೃಶ್ಯ ಕಣ್ಮರೆಯಾಗಿದೆ.
ಮುಂಗಾರು ಮಳೆ ಸಮರ್ಪಕವಾಗಿದ್ದರೆ ಈ ಎರಡೂ ಜಲಪಾತಗಳಲ್ಲಿ ಮನಮೋಹಕ ದೃಶ್ಯ ಉಂಟಾಗುತ್ತಿತ್ತು. ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಕಾವೇರಿ ರುದ್ರ ನರ್ತನದ ಸೊಬಗು ಕಾಣಲು ಸಹಸ್ರಾರು ಮಂದಿ ಭಕ್ತರು ದಾಂಗುಡಿ ಇಡುತ್ತಿದ್ದರು. ಈಗ ಬೆರಳಣಿಕೆ ಮಂದಿ ಪ್ರವಾಸಿಗರು ಬಂದರೂ ಕೂಡ ಬಂಡೆಕಲ್ಲುಗಳನ್ನು ಕಂಡು ನಿರಾಸೆ ಪಡುವಂತಾಗಿದೆ.ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾದರೆ ಭರಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತದೆ. ಈ ಬಾರಿ ಎರಡೂ ಜಲಾಶಯಗಳು ಭರ್ತಿಯಾಗದೆ ಭರಚುಕ್ಕಿ ನೀರಿನ ಬರ ಎದುರಿಸುತ್ತಿದೆ. ಹರಿಯುವ ಕಾವೇರಿ ನದಿಯಲ್ಲೂ ನೀರಿನ ಹರಿವು ಕಾಣದ ಪರಿಣಾಮ ಭರಚುಕ್ಕಿ ಭಣಭಣ ಅನ್ನುತ್ತಿದೆ.
ಇನ್ನು, ಕಾವೇರಿಯ ವಿಶಾಲ ಹರಿವು ಮತ್ತು ಭೋರ್ಗರೆತವನ್ನು ಕಣ್ತುಂಬಿಕೊಳ್ಳಬಹುದಾಗಿದ್ದ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನೀರಿಲ್ಲದೇ ಖಾಲಿ ಬಂಡೆಗಳ ದರ್ಶನ ಆಗುತ್ತಿದೆ.
ಕೈ ಕೊಟ್ಟ ವರುಣನಿಂದ ಬೆಳೆಗಳು ಒಣಗಿದ್ದರೆ ಮತ್ತೊಂದೆಡೆ ಜಲಪಾತಗಳು ಸೊಬಗು ಕಳೆದುಕೊಂಡಿವೆ. ಪ್ರವಾಸೋದ್ಯಮಕ್ಕೂ ಹೊಡೆತ ನೀಡಿವೆ.
ಪ್ರತಿ ವರ್ಷ ಮುಂಗಾರು ಆರಂಭದಲ್ಲಿ ಭರಚುಕ್ಕಿ ಮತ್ತು ಹೊಗೇನಕಲ್ ಜಲಪಾತದಲ್ಲಿ ಕಾವೇರಿ ನರ್ತನ ಕಾಣಬಹುದಾಗಿತ್ತು. ಈ ಬಾರಿ ನಿರಂತರ ಮಳೆಯಿಲ್ಲದೆ. ಎರಡು ಪ್ರವಾಸಿತಾಣಗಳು ಭಣಗುಡುತ್ತಿವೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಹೊಡೆದ ಬಿದ್ದಿದೆ.