ಭರಮಸಾಗರ ಬಸ್‌ ನಿಲ್ದಾಣ ಕೊಳಚೆ ನೀರಿಗೆ ಕಡೆಗೂ ಮುಕ್ತಿ!

KannadaprabhaNewsNetwork | Published : May 16, 2024 12:48 AM

ಸಾರಾಂಶ

ದುರ್ವಾಸನೆಯ ಆಗರವಾಗಿದ್ದ ಭರಮಸಾಗರ ನಿಲ್ದಾಣದ ಸಬ್‌ ಟ್ಯಾಂಕಿನಲ್ಲಿ ಶೇಖರಣೆಗೊಂಡ ಕೊಳಚೆ ನೀರನ್ನು ಹೊರ ತೆಗೆದು ಸ್ವಚ್ಛಗೊಳಿಸಲಾಗಿ, ಸಾರ್ವಜನಿಕರು ಇದೀಗ ನಿಟ್ಟುಸಿರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಸಮಸ್ಯೆಗಳ ಆಗರವಾಗಿರುವ ಭರಮಸಾಗರದ ರಸ್ತೆ ಸಾರಿಗೆ ನಿಲ್ದಾಣದ ಸಬ್‌ ಟ್ಯಾಂಕಿನಲ್ಲಿ ಶೇಖರಣೆಗೊಂಡು ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಕೊಳಚೆ ನೀರಿಗೆ ಕೊನೆಗೂ ಮುಕ್ತಿ ದೊರಕಿದೆ.

ಕಳೆದ ಆರು ತಿಂಗಳಿನಿಂದ ಸ್ವಚ್ಛಗೊಳಿಸದ ಸಂಪಿಗೆ ನೀರು ತುಂಬಿಕೊಳ್ಳುತ್ತಲೇ ಇತ್ತು. ಟ್ಯಾಂಕ್‌ ತುಂಬಿಕೊಡು ನೀರು ಹೊರಬರುತ್ತಿದ್ದಂತೆ ಸುತ್ತಲಿನ ಪ್ರದೇಶದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗುತ್ತಿತ್ತು. ಇದು ಕ್ರಮೇಣ ದುರ್ವಾಸನೆಯ ಆಗರವಾಗಿ ರೂಪುಗೊಂಡಿತ್ತು. ಪಕ್ಕದಲ್ಲಿಯೇ ಇರುವ ನಿಲ್ದಾಣದ ಹೋಟೆಲ್‌ನಲ್ಲಿ ಉಪಹಾರ ಸೇವಿಸುವ ಜನರು ಈ ಕಿರಿಕಿರಿಯಿಂದ ರೋಸಿ ಹೋಗಿದ್ದರು. ಪ್ರಯಾಣಿಕರು ಈ ಟ್ಯಾಂಕ್‌ನಿಂದ ಆನತಿ ದೂರದಲ್ಲಿ ನಿಂತು ಬಸ್‌ಗಳಿಗೆ ಕಾಯುವ ಪರಿಸ್ಥಿತಿ ಇತ್ತು.

ಸಮಸ್ಯೆಯನ್ನು ಜನರು ಚಿತ್ರದುರ್ಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಬಿ.ಟಿ.ನಿರಂಜನ್ ಮೂರ್ತಿ ಅವರ ಗಮನಕ್ಕೆ ತಂದು ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಮನವಿ ಮಾಡಿದ್ದರು. ತಕ್ಷಣ ಸಮಸ್ಯೆಗೆ ಸ್ಪಂದಿಸಿದ ನಿರಂಜನ ಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಕೆಎಸ್ಸಾರ್ಟಿಸಿಯ ಸಂಬಂಧಪಟ್ಟ ಜಿಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಸಿದ್ದೇಶ್ ಹೆಬ್ಬಾಳ್ಕರ್ ಅವರಿಗೆ ಕರೆ ಮಾಡಿ ಇಲ್ಲಿನ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟು ತಕ್ಷಣವೇ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.

ಜೊತೆಗೆ ಬಸ್‌ಗಳು ಭರಮಸಾಗರ ಬಸ್ ನಿಲ್ದಾಣಕ್ಕೆ ಬರದೆ ಬೈಪಾಸ್ ಮೂಲಕ ಸಂಚರಿಸುವುದರಿಂದ ಪ್ರತಿದಿನ ನೂರಾರು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದ್ದು, ಪ್ರತಿ ದಿನ ಬೆಳಿಗ್ಗೆ 10 ಗಂಟೆಯವರೆಗೂ ಬಸ್‌ಗಳು ಊರ ಒಳಗಡೆ ಬರುವಂತೆ ವ್ಯವಸ್ಥೆ ಮಾಡಲು ತಿಳಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎಂ.ದುರ್ಗೇಶ್ ಪೂಜಾರ್ , ಪ್ರದೀಪ್ , ಶಣ್ಮುಖಪ್ಪ , ರವಿ , ಸ್ಥಳೀಯ ಕಂಟ್ರೋಲರ್ ಇನ್ನು ಮುಂತಾದವರು ಉಪಸ್ಥಿತರಿದ್ದರು.

Share this article