ತರಳಬಾಳು ಹುಣ್ಣಿಮೆ ಆಚರಣೆಗೆ ಸಿದ್ಧಗೊಂಡ ಭರಮಸಾಗರ

KannadaprabhaNewsNetwork |  
Published : Feb 04, 2025, 12:32 AM IST
ಭರಮಸಾಗರದಲ್ಲಿ ನಿರ್ಮಾಣಗೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಮಹಾಮಂಟಪ | Kannada Prabha

ಸಾರಾಂಶ

ಭರಮಸಾಗರದಲ್ಲಿ ನಿರ್ಮಾಣಗೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಮಹಾಮಂಟಪ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಚಲಿಸುವ ವಿಶ್ವವಿದ್ಯಾನಿಲಯವೆಂದೇ ಖ್ಯಾತಿ ಪಡೆದಿರುವ ಸಿರಿಗೆರೆಯ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆಗೆ ಹೋಬಳಿ ಕೇಂದ್ರವಾದ ಭರಮಸಾಗರ ಇದೀಗ ಸರ್ವಸನ್ನದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಸುಮಾರು 200 ಎಕರೆಯಷ್ಟು ವಿಸ್ತೀರ್ಣದದಲ್ಲಿ ಹುಣ್ಣಿಮೆಯ ಆಚರಣೆಯ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಮಂಟಪ ನಿರ್ಮಾಣ, ವಿದ್ಯುತ್‌ ಅಲಂಕಾರ, ಧ್ವನಿ ವಿನ್ಯಾಸ, ಸಾಂಸ್ಕೃತಿಕ ಚಟುವಟಿಕೆಗಳ ತಂಡದವರು ಬಿರುಸಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ಮಹೋತ್ಸವದ ದಿವ್ಯ ಸಾನ್ನಿಧ್ಯ ವಹಿಸಲು ಸಿರಿಗೆರೆಯಿಂದ ಆಗಮಿಸಲಿರುವ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರನ್ನು ಬರಮಾಡಿಕೊಳ್ಳಲು ಭಕ್ತರು ತುದಿಗಾಲ ಮೇಲೆ ನಿಂತಿದ್ದಾರೆ.

ಮಂಟಪದ ಸಮೀಪದ ಹೆದ್ದಾರಿಯನ್ನು ಬಳಸಿಕೊಂಡು ಪಟ್ಟಣದ ಮುಖ್ಯ ರಸ್ತೆ, ಬಿಳಿಚೋಡು ರಸ್ತೆ, ದೊಡ್ಡಪೇಟೆ ಮುಂತಾದ ಕಡೆ ವಿದ್ಯುತ್‌ ಅಲಂಕಾರವನ್ನು ಮಾಡಲಾಗಿದೆ. ಭರಮಸಾಗರವನ್ನು ಮುಖ್ಯವಾಗಿ ಕಾಡುತ್ತಿದ್ದ ಕಸವನ್ನೆಲ್ಲಾ ಸಾಗಿಸಿ ಪಟ್ಟಣಕ್ಕೆ ಒಂದು ವಿಶೇಷ ಆಕರ್ಷಣೆಯನ್ನು ನೀಡಲಾಗಿದೆ.

9 ದಿನಗಳ ಕಾಲದ ಈ ಭವ್ಯ ಉತ್ಸವದಲ್ಲಿ ಭಕ್ತರು ಸಂಭ್ರಮದಿಂದ ಪಾಲ್ಗೊಳ್ಳಲಿದ್ದು, ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಯಾವುದೇ ಬ್ಯಾನರ್‌ ಹಾಕಬಾರದು ಎಂಬ ಶ್ರೀಗಳ ಆದೇಶಕ್ಕೆ ಜನರು ಬಾಗಿದ್ದಾರೆ. ಇಡಿ ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲೂ ಬ್ಯಾನರ್‌ಗಳೇ ಇಲ್ಲದಿದ್ದರೂ ಜನರ ಉತ್ಸಾಹಕ್ಕೇನೂ ಕಡಿಮೆಯಾಗಿಲ್ಲ.

ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆ ಸಂದರ್ಭದಲ್ಲಿ ಹಲವು ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು, ಕುಸ್ತಿ ಪಂದ್ಯಾವಳಿಗಳೂ ನಡೆಯುವುದು ಈ ಬಾರಿಯ ಮತ್ತೊಂದು ವಿಶೇಷವಾಗಿದೆ. ಅದಕ್ಕಾಗಿ ಮಂಟಪದ ಆವರಣದಲ್ಲಿಯೇ ವಿಶೇಷವಾಗಿ ಸಿದ್ಧತೆಗಳನ್ನು ಮಾಡಲಾಗಿದೆ. ಕುಸ್ತಿ ಅಖಾಡಕ್ಕೆ ವಿಶೇಷ ಮಣ್ಣು ತರಿಸಿ ವ್ಯವಸ್ಥೆ ಮಾಡಿದ್ದಾರೆ. ಭಾನುವಾರ ರಾತ್ರಿಯಿಂದಲೇ ಮಹಾಮಂಟಪದ ವಿದ್ಯುತ್‌ ಅಲಂಕಾರದ ಪ್ರಾಯೋಗಿಕ ಪರೀಕ್ಷೆ ನಡೆದಿದೆ.

---

*ಬದಲಾದ ಸ್ವರೂಪ: ವೇದಿಕೆಯ ಕಾರ್ಯಕ್ರಮಗಳಲ್ಲಿ ಈ ಬಾರಿ ಅದರ ಸ್ವರೂಪವನ್ನು ಬದಲಾಯಿಸಲಾಗಿದೆ. ಶಿಕ್ಷಣ-ಕಲೆ-ಸಂಸ್ಕೃತಿ, ಮಹಿಳೆ ಮತ್ತು ಸಮಾಜ, ರಾಜಕಾರಣ ಮತ್ತು ಸಮಾಜ, ಶರಣ ಸಾಹಿತ್ಯ ಮತ್ತು ಸಮಾಜ, ನ್ಯಾಯಾಲಯ ಮತ್ತು ಸಮಾಜ, ಆರೋಗ್ಯ ಮತ್ತು ಸಮಾಜ, ಸಮೂಹ ಮಾಧ್ಯಮ ಮತ್ತು ಸಮಾಜ, ಕೃಷಿ ಮತ್ತು ಜಲಸಂರಕ್ಷಣೆ, ಧರ್ಮ-ವಿಜ್ಞಾನ-ಸಮಾಜ ಕುರಿತು 9 ದಿನಗಳ ಕಾಲ ಚಿಂತನ ನಡೆಯಲಿದೆ. ಈ ಬಾರಿಯ ಆಹ್ವಾನಿತರ ಪಟ್ಟಿಯಲ್ಲಿ ಹೊಸ ಮುಖಗಳೇ ಗೋಚರವಾಗುತ್ತಿರುವುದೊಂದು ವಿಶೇಷ.

ನ್ಯಾಯಮೂರ್ತಿ ಎನ್.‌ಸಂತೋಷ್‌ ಹೆಗ್ಡೆ, ನ್ಯಾ.ವೇದವ್ಯಾಸಾಚಾರ್‌ ಶ್ರೀಶಾನಂದ, ಮಾಧ್ಯಮ ಲೋಕದ ಎಚ್.‌ಆರ್‌.ರಂಗನಾಥ್‌, ಸುದರ್ಶನ್‌ ಚನ್ನಂಗಿಹಳ್ಳಿ, ರಂಗನಾಥ್‌ ಭಾರಧ್ವಾಜ್‌, ಮೈಸೂರು ಅರಸು ಮನೆತನದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ರಾಜಕೀಯ ವಲಯದಿಂದ ಡಿಸಿಎಂ ಡಿ.ಕೆ.ಶಿವಕುಮಾರ್‌ ಇದೇ ಮೊದಲ ಬಾರಿಗೆ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗಿಯಾಗಲಿದ್ದಾರೆ. ಬಿ.ಎಸ್.‌ಯಡಿಯೂರಪ್ಪ, ಎಂ.ಬಿ.ಪಾಟೀಲ್‌, ಎಸ್.ಎಸ್.‌ಮಲ್ಲಿಕಾರ್ಜುನ್‌, ಮಧು ಬಂಗಾರಪ್ಪ, ಡಿ. ಸುಧಾಕರ್‌, ಬಿ.ವೈ.ವಿಜಯೇಂದ್ರ, ಶರಣಪ್ರಕಾಶ್‌ ಪಾಟೀಲ್‌, ಎನ್.‌ಚೆಲುವರಾಯಸ್ವಾಮಿ ಮತ್ತಿತರರು ಭಾಗವಹಿಸುವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ