ಭರಮ್ಯಾನಟ್ಟಿ ಮನೆ ಧ್ವಂಸ: ಮೂವರ ಬಂಧನ

KannadaprabhaNewsNetwork |  
Published : Jul 01, 2026, 03:45 AM IST
ಭದ್ರತೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತೆಯೊಬ್ಬಳು ಯುವಕನೊಂದಿಗೆ ಪರಾರಿಯಾದ ಘಟನೆ ಹಿನ್ನೆಲೆಯಲ್ಲಿ ಯುವಕನ ಮನೆ ಮೇಲೆ ದಾಳಿ ನಡೆಸಿ ಮನೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಿಹಾಳ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಈ ಘಟನೆ ಜಿಲ್ಲಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ವಿವಾಹಿತೆಯೊಬ್ಬಳು ಯುವಕನೊಂದಿಗೆ ಪರಾರಿಯಾದ ಘಟನೆ ಹಿನ್ನೆಲೆಯಲ್ಲಿ ಯುವಕನ ಮನೆ ಮೇಲೆ ದಾಳಿ ನಡೆಸಿ ಮನೆ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರಿಹಾಳ ಪೊಲೀಸರು ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಈ ಘಟನೆ ಜಿಲ್ಲಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ನಾಗವ್ವ ಎಂಬ ವಿವಾಹಿತ ಮಹಿಳೆಯು ಯಲ್ಲಪ್ಪ ನಾಯಕನೊಂದಿಗೆ ಪರಾರಿಯಾಗಿದ್ದಾಳೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳೆಯ ಕುಟುಂಬಸ್ಥರು ಹಾಗೂ ಆಕೆಯ ಪತಿಯ ಸಂಬಂಧಿಕರು ಯಲ್ಲಪ್ಪನ ಮನೆ ಮೇಲೆ ಏಕಾಏಕಿ ದಾಳಿ ನಡೆಸಿದ್ದರು. ದಾಳಿ ವೇಳೆ ಮನೆ ಹಂಚುಗಳನ್ನು ಒಡೆದು, ಅಲ್ಮೇರಾ, ಟೀವಿ, ಮನೆಯಲ್ಲಿದ್ದ ಪೀಠೋಪಕರಣಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳನ್ನು ಧ್ವಂಸಗೊಳಿಸಿದ್ದರು. ಅಲ್ಲದೆ, ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಕುರಿಗಳನ್ನು ದೋಚಿಕೊಂಡು ಹೋಗಿರುವ ಆರೋಪವೂ ದಾಖಲಾಗಿದೆ. ದಾಳಿಯ ವೇಳೆ ಮನೆಯಲ್ಲಿದ್ದ ಕುಟುಂಬಸ್ಥರ ಮೇಲೆಯೂ ಹಲ್ಲೆಗೆ ಯತ್ನ ನಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಯಲ್ಲಪ್ಪನ ತಂದೆ ನೀಡಿದ ದೂರಿನ ಮೇರೆಗೆ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ನಾಗರಾಜ ನಾಯಕ, ರವಿ ಬೀಜಗತ್ತಿ, ಈಶ್ವರ ಮುಚ್ಚಂಡಿ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ಗಂಭೀರತೆ ಅರಿತು ತನಿಖೆ ಆರಂಭಿಸಿದ ಮಾರಿಹಾಳ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಪ್ರಮುಖ ಆರೋಪಿಗಳಾದ ನಾಗರಾಜ ನಾಯಕ, ರವಿ ಬೀಜಗತ್ತಿ ಹಾಗೂ ಈಶ್ವರ ಮುಚ್ಚಂಡಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಮೂವರು ಆರೋಪಿಗಳು ವಿವಾಹಿತೆ ನಾಗವ್ವ ಹಾಗೂ ಆಕೆಯ ಪತಿ ಬಸಪ್ಪ ಅವರ ಸಂಬಂಧಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ದಾಳಿಯಲ್ಲಿ ಭಾಗವಹಿಸಿದ್ದ ಉಳಿದ ಆರೋಪಿಗಳ ಗುರುತು ಪತ್ತೆ ಕಾರ್ಯವೂ ಮುಂದುವರಿದಿದೆ. ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆಗಳ ಮಾಹಿತಿ ಹಾಗೂ ಸ್ಥಳೀಯರಿಂದ ಸಂಗ್ರಹಿಸಿರುವ ಮಾಹಿತಿಯ ಆಧಾರದ ಮೇಲೆ ಉಳಿದ ಆರೋಪಿಗಳ ಬಂಧನಕ್ಕೆ ಮಾರಿಹಾಳ ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

60368 ಎಸ್‌ಐಆರ್‌ ಗಣತಿ ನಮೂನೆ ವಿತರಣೆ
ವಿದ್ಯುತ್ ಟ್ರಾನ್ಸಫಾರ್ಮರ್ ಶಾರ್ಟ್: ಇಲೇಕ್ಟ್ರಿಕ್‌ ವಸ್ತುಗಳಿಗೆ ಹಾನಿ