ಕನ್ನಡಪ್ರಭ ವಾರ್ತೆ ತುರುವೇಕೆರೆ
ಭರಣಿ ಮಳೆ ಆಗಿದ್ದರಿಂದ ಧರಣಿ ತಂಪಾಗಿದೆ. ಅಲ್ಲದೇ ಬಿಸಿಲಿನ ಝಳದಿಂದ ಕಂಗಾಲಾಗಿ ಹೋಗಿದ್ದ ಜನರಿಗೆ ಮಳೆಯ ಸಿಂಚನ ಹರ್ಷವನ್ನು ತಂದಿದೆ.
ತಾಲೂಕಿನ ಹಲವೆಡೆ ಸೋಮವಾರ ತಡರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಭರಣಿ ಮಳೆ ರೈತರ ಮುಖದಲ್ಲಿ ಸಂತಸವನ್ನು ತಂದಿದೆ.ಈ ವರ್ಷದ ಮೊದಲ ಮಳೆ ಭರಣಿಯು ಏ.೨೭ರಿಂದ ಹುಟ್ಟಿದ್ದರೂ ಸರಿಯಾಗಿ ಮಳೆಯಾಗಿರಲಿಲ್ಲ, ಸೋಮವಾರ ಮಧ್ಯರಾತ್ರಿ ಮಿಂಚು-ಗುಡುಗಿನ ಸಹಿತ ಬಂದ ಭಾರೀ ಮಳೆ ಒಂದು ತಾಸಿಗೂ ಹೆಚ್ಚು ಹೊತ್ತು ಸುರಿಯಿತು.
ಮಾಯಸಂದ್ರ, ಜನಾರ್ಧನಪುರ, ಆನಡಗು, ಕಲ್ಲನಾಗತಿಹಳ್ಳಿ, ಚಿಕ್ಕಬೀರನಕೆರೆ, ಜಡೆಯ, ಕಸಬಾ ವ್ಯಾಪ್ತಿಯ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು, ದಂಡಿನಶಿವರ, ಹುಲ್ಲೇಕೆರೆ, ಸಾರಿಗೇಹಳ್ಳಿ ಸೇರಿ ಹಲವೆಡೆ ಸಾಧಾರಣ ಮಳೆಯಾಗಿದೆ.
ಬೇಸಿಗೆ ಬೆಳೆಯಾದ ಭತ್ತವನ್ನು ತುರುವೇಕೆರೆ ಕೆರೆ ಮತ್ತು ಮಲ್ಲಾಘಟ್ಟ ಕೆರೆ ಆಶ್ರಯದಲ್ಲಿ ಮುನಿಯೂರು ಮತ್ತು ಮಲ್ಲಾಘಟ್ಟ ಬಯಲಿನಲ್ಲಿ ರೈತರು ಬೆಳೆದಿದ್ದು, ಭತ್ತದ ತೆನೆ ಬರುವ ಸಮಯಕ್ಕೆ ಸರಿಯಾಗಿ ಕೆರೆಗಳಲ್ಲಿ ನೀರು ಖಾಲಿಯಾಗಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಭರಣಿ ಮಳೆಯಿಂದ ಭತ್ತದ ಕಾಳು ಬಲಿಯಲು ಅನುಕೂಲವಾಗಿದೆ ಎನ್ನುತ್ತಾರೆ ರೈತ ಬಸವರಾಜು.
ತಾಲೂಕಿನ ಸಂಪಿಗೆಯಲ್ಲಿ ೩೯.೨ ಮಿಮಿ, ತುರುವೇಕೆರೆ ಪಟ್ಟಣ ೩.೬ ಮಿಮೀ, ಮಾಯಸಂದ್ರ ೧೧.೪ಮಿಮೀ, ದಂಡಿನಶಿವರ ೭.೨ ಮಿಮೀ ಮಳೆಯಾಗಿದೆ. ಆದರೆ ದಬ್ಬೇಘಟ್ಟ ಹೋಬಳಿಯಲ್ಲಿ ಯಾವುದೇ ಮಳೆಯಾಗಿಲ್ಲ ಎಂದು ಹವಾಮಾನ ಇಲಾಖಾ ಮೂಲಗಳಿಂದ ತಿಳಿದು ಬಂದಿದೆ.