ಗದಗ: ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆಗಾರಿಕೆ, ಕ್ರೀಡಾ ಮನೋಭಾವ ಹಾಗೂ ಸಮುದಾಯ ಸೇವೆ ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.
ಯುವ ಸಂಘಗಳ ರಚನೆ ಪ್ರಕ್ರಿಯೆ ಸಂಪೂರ್ಣ ನಿಯಮಾನುಸಾರ, ಪಾರದರ್ಶಕ ಹಾಗೂ ಯಶಸ್ವಿಯಾಗಿ ನಡೆಯಬೇಕು. ಯುವಜನತೆಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಪ್ರತಿ 4,000 ಜನಸಂಖ್ಯೆಗೆ ಒಂದರಂತೆ ಭಾರತ್ ಜೋಡೋ ಯುವ ಸಂಘ ರಚಿಸಲಾಗುವುದು. 16ರಿಂದ 35 ವರ್ಷದೊಳಗಿನ ಯುವಕ-ಯುವತಿಯರು ಈ ಸಂಘದ ಸದಸ್ಯರಾಗಲು ಅರ್ಹರಿರುತ್ತಾರೆ. ಪ್ರತಿಯೊಂದು ಸಂಘದಲ್ಲಿ 15 ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಪಾರದರ್ಶಕತೆಗಾಗಿ ಲಾಟರಿ (ಚೀಟಿ ಎತ್ತುವ) ಪದ್ಧತಿಯ ಮೂಲಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ 3 ಸದಸ್ಯರು (1 ಮಹಿಳೆ), ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು 4 ಸದಸ್ಯರು (1 ಮಹಿಳೆ), ಸಾಮಾನ್ಯ 8 ಸದಸ್ಯರು (3 ಮಹಿಳೆಯರು) ಹೀಗೆ ಮೀಸಲಾತಿ ಕಲ್ಪಿಸಲಾಗುವುದು. ಯಾವುದೇ ಸದಸ್ಯರು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾವರ್ತನೆಯಾಗಲು ಅವಕಾಶವಿರುವುದಿಲ್ಲ. ಸಂಘದ ಕಾರ್ಯಕಾರಿ ಸಮಿತಿಯು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳನ್ನು ಸಮವಾಗಿ ಪ್ರತಿನಿಧಿಸುವುದು ಎಂದು ತಿಳಿಸಿದರು.ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಮಾತನಾಡಿ, ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯ ಉತ್ತೇಜಿಸಲು ಗ್ರಾಪಂ ವ್ಯಾಪ್ತಿಯಲ್ಲಿ ಸರಾಸರಿ 6000 ಸಂಘಗಳನ್ನು ಹಾಗೂ ನಗರ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಸರಾಸರಿ 4000 ಸಂಘಗಳನ್ನು ಹೀಗೆ ಒಟ್ಟು 10,000 ಭಾರತ್ ಜೋಡೋ ಯುವ ಸಂಘಗಳನ್ನು ಪ್ರತಿ ಸಂಘಕ್ಕೆ ಪ್ರತಿ ವರ್ಷ ತಲಾ ₹10 ಲಕ್ಷ ಅನುದಾನದ ನೀಡಲಾಗುತ್ತದೆ ಎಂದ ಅವರು, ಘಟಕದ ರಚನೆ, ನೋಂದಣಿ ಕುರಿತು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಸಭೆ ಪೌರಾಯುಕ್ತ ರಾಜಾರಾಮ ಪವಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು ಇದ್ದರು.