ಪಕ್ಷ ಸಂಘಟನೆಗೆ ಭಾರತ್ ಜೋಡೋ ಸಂಘ ಸಹಕಾರಿ: ಪಿ.ರವಿಕುಮಾರ್

KannadaprabhaNewsNetwork |  
Published : Aug 26, 2026, 01:30 AM IST
೨೫ಕೆಎಂಎನ್‌ಡಿ-೩ಮಂಡ್ಯದ ಹೊಸಹಳ್ಳಿ ಬಡಾವಣೆಯಲ್ಲಿ ವಾರ್ಡ್ ನಂ.೧೨ ರಿಂದ ೨೪ರವರೆಗೆ ಭಾರತ್ ಜೋಡೋ ಸಂಘಕ್ಕೆ ನೋಂದಣಿ ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್ ಅವರನ್ನು ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಮಂಜು ಅಭಿನಂದಿಸಿದರು. | Kannada Prabha

ಸಾರಾಂಶ

ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ್ ಜೋಡೋ ಸಂಘಟನೆಗೆ ಸದಸ್ಯತ್ವ ಮಾಡದಿದ್ದರೆ ವಿರೋಧ ಪಕ್ಷದವರು ಅದರ ಲಾಭ ಪಡೆದು ಸಂಘದ ಅಧ್ಯಕ್ಷರಾಗಬಹುದು. ಇದು ಸರ್ಕಾರದ ಯೋಜನೆಯಾಗಿರುವುದರಿಂದ ಯಾರು ಏನು ಬೇಕಾದರೂ ಆಗಬಹುದು. ಆ ಅವಕಾಶವನ್ನು ಕಾರ್ಯಕರ್ತರೇ ಪಡೆಯಬೇಕು ಎನ್ನುವುದು ನನ್ನ ಆಸೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಸರ್ಕಾರ ಆರಂಭಿಸಿರುವ ಭಾರತ್ ಜೋಡೋ ಯುವಕ ಸಂಘಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹವನ್ನು ನೋಂದಾಯಿಸುವುದರಿಂದ ಪಕ್ಷ ಸಂಘಟನೆಯೂ ಆಗಲಿದೆ. ಕಾರ್ಯಕರ್ತರು ಸಂಘಗಳಿಗೆ ನಾಯಕರಾಗಿ ಬೆಳವಣಿಗೆ ಕಾಣಬಹುದು ಎಂದು ಶಾಸಕ ಪಿ.ರವಿಕುಮಾರ್ ಸಲಹೆ ನೀಡಿದರು.

ನಗರದ ಹೊಸಹಳ್ಳಿ ಬಡಾವಣೆಯಲ್ಲಿ ವಾರ್ಡ್ ನಂ.೧೨ರಿಂದ ೨೪ರವರೆಗೆ ಭಾರತ್ ಜೋಡೋ ಸಂಘಕ್ಕೆ ನೋಂದಣಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈಗಿನ ಯುವಕ-ಯುವತಿಯರನ್ನು ಪಕ್ಷದತ್ತ ಸೆಳೆಯುವುದಕ್ಕೆ ಇದೊಂದು ಸದಾವಕಾಶ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಣಿ ಮಾಡಿದಷ್ಟು ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಬಹುದು. ಹತ್ತು ಲಕ್ಷ ರು. ಸಂಘಗಳಿಗೆ ಸಿಗುತ್ತದೆ. ಜೊತೆಗೆ ವೇತನವನ್ನೂ ಪಡೆಯಬಹುದು. ಹೆಚ್ಚು ಸಂಖ್ಯೆಯಲ್ಲಿ ಯುವ ಸಮೂಹವನ್ನು ನೋಂದಣಿ ಮಾಡಿದರೆ ಕಾರ್ಯಕರ್ತರು ರಾಜಕೀಯವಾಗಿಯೂ ಬೆಳವಣಿಗೆ ಕಾಣಬಹುದು ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾರತ್ ಜೋಡೋ ಸಂಘಟನೆಗೆ ಸದಸ್ಯತ್ವ ಮಾಡದಿದ್ದರೆ ವಿರೋಧ ಪಕ್ಷದವರು ಅದರ ಲಾಭ ಪಡೆದು ಸಂಘದ ಅಧ್ಯಕ್ಷರಾಗಬಹುದು. ಇದು ಸರ್ಕಾರದ ಯೋಜನೆಯಾಗಿರುವುದರಿಂದ ಯಾರು ಏನು ಬೇಕಾದರೂ ಆಗಬಹುದು. ಆ ಅವಕಾಶವನ್ನು ಕಾರ್ಯಕರ್ತರೇ ಪಡೆಯಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದರು.

ಕಳೆದ ಮೂರೂವರೆ ವರ್ಷದಲ್ಲಿ ಯಾರೂ ಬೆರಳು ತೋರಿಸದ ರೀತಿಯಲ್ಲಿ ಅಭಿವೃದ್ಧಿ ಮಾಡಿ ತೋರಿಸಿದ್ದೇನೆ. ಅದರ ಉಪಯೋಗ ಪಡೆದುಕೊಳ್ಳುವುದು ನಿಮಗೆ ಬಿಟ್ಟ ವಿಚಾರ. ನಗರದ ಅಭಿವೃದ್ಧಿಗೆ ಹಲವು ಇಲಾಖೆಗಳಿಂದ ೧೫೦ ಕೋಟಿ ರು. ಬಿಡುಗಡೆಗೊಳಿಸಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಇನ್ನೂ ೧೦೦ ಕೋಟಿ ರು. ಬಿಡುಗಡೆಗೊಳಿಸುವುದಕ್ಕೂ ಸಿದ್ಧನಿದ್ದೇನೆ. ಯಾವುದೇ ಮುಖಮುನಿಸು, ಭಿನ್ನಾಭಿಪ್ರಾಯಗಳಿಗೆ ಅವಕಾಶವಾಗದಂತೆ ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿ ಬೆಳವಣಿಗೆ ಕಾಣಬೇಕು ಎಂದರು.

ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕರಡು ಪಟ್ಟಿ ಬಿಡುಗಡೆಯಾಗಿದೆ. ಮಂಡ್ಯ ತಾಲೂಕು ಒಂದರಲ್ಲೇ ೩೭,೯೮೧ ಜನರನ್ನು ಕೈಬಿಡಲಾಗಿದೆ. ಇನ್ನೂ ೨೫ ಸಾವಿರ ಜನರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈಗ ನಮಗೆ ನಿಜವಾದ ಸವಾಲು ಎದುರಾಗಿದೆ. ಈ ೨೫ ಸಾವಿರ ಜನರು ಕೈಬಿಟ್ಟು ಹೋಗದಂತೆ ಉಳಿಸಿಕೊಳ್ಳುವುದಕ್ಕೆ ನಾವೆಲ್ಲರೂ ಪಣ ತೊಡಬೇಕು. ಅವರಿಗೆ ಅಗತ್ಯವಿರುವ ದಾಖಲೆ ಒದಗಿಸಿಕೊಡಲು ಸಹಕಾರ ನೀಡಬೇಕು. ಇದನ್ನು ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸಬೇಕು. ನಿಮ್ಮ ನಿಮ್ಮ ವಾರ್ಡ್‌ನ ಮತದಾರರನ್ನು ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಮಂಡ್ಯ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕ ಪಿ.ರವಿಕುಮಾರ್ ಹೊಸ ಬದಲಾವಣೆಯನ್ನೇ ತಂದಿದ್ದಾರೆ. ನಗರದ ಬಹುತೇಕ ರಸ್ತೆಗಳನ್ನು ಸುಂದರವಾಗಿ ಕಾಣುವಂತೆ ಮಾಡಿದ್ದಾರೆ. ಇನ್ನೂ ಒಂದೂವರೆ ವರ್ಷದಲ್ಲಿ ಪ್ರಗತಿಯಲ್ಲಿ ಮತ್ತಷ್ಟು ಬದಲಾವಣೆ ಕಾಣಲು ಶಾಸಕರಿಗೆ ಎಲ್ಲರೂ ಬೆಂಬಲವಾಗಿ ನಿಂತು ಶಕ್ತಿ ತುಂಬಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಮುಡಾ ಅಧ್ಯಕ್ಷ ಬಿ.ಪಿ.ಪ್ರಕಾಶ್, ಪ್ರಚಾರ ಸಮಿತಿ ಅಧ್ಯಕ್ಷ ಕೀಲಾರ ರಾಧಾಕೃಷ್ಣ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ನಗರಸಭೆ ಮಾಜಿ ಅಧ್ಯಕ್ಷೆ ಹನ್ಸಿಯಾಬಾನು, ಮಾಜಿ ಸದಸ್ಯರಾದ ರವಿ, ಶ್ರೀಧರ್, ಹರೀಶ್‌ಕುಮಾರ್, ಜಿಲ್ಲಾ ಕಾಂಗ್ರೆಸ್ ಮಹಿಳಾಧ್ಯಕ್ಷೆ ಎಚ್.ಬಿ.ಶುಭದಾಯಿನಿ, ಮುಖಂಡರಾದ ರುದ್ರಪ್ಪ, ಪಲ್ಲವಿ, ಎಚ್.ಪಿ.ರುದ್ರಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಿವಲಿಂಗೇಗೌಡ, ಕಮಲಾರಾಜು, ಹೊಸಹಳ್ಳಿ ನಾಗೇಶ್ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ಜಲ ಮಂಡಳಿ ಅಧಿಕಾರಿಗಳ ಕಳ್ಳಾಟ...!
ಲಂಚಕ್ಕೆ ಬೇಡಿಕೆ: ವಿಎ ಲೋಕಾಯುಕ್ತ ಬಲೆಗೆ