ಕನ್ನಡಪ್ರಭ ವಾರ್ತೆ ಮಂಗಳೂರುಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರ ಭಾರತರತ್ನ ಘೋಷಣೆಯಾಗಿದ್ದು, ಕರಾವಳಿಯಲ್ಲಿ ಬಿಜೆಪಿ ಪಾಳಯ ಮಾತ್ರವಲ್ಲ ಆಡ್ವಾಣಿಯ ಸಮೀಪವರ್ತಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ನನ್ನ ಬೆಳವಣಿಗೆಗೆ ಆಡ್ವಾಣಿ ಪ್ರಭಾವ: ನಿಟ್ಟೆ ವಿನಯ ಹೆಗ್ಡೆ
ನನ್ನ ತಂದೆ ದಿ.ಕೆ.ಎಸ್.ಹೆಗ್ಡೆ ಅವರಿಗೆ ಆಡ್ವಾಣಿ ಆತ್ಮೀಯರಾಗಿದ್ದರು. ಅದೇ ನನ್ನಲ್ಲೂ ಮುಂದುವರಿಯಿತು. ಅವರ ವ್ಯಕ್ತಿತ್ವ ನನ್ನ ಬೆಳವಣಿಗೆಯನ್ನು ಸಾಕಾರಗೊಳಿಸಿದೆ. ನಾನು ಕಂಡ ರಾಜಕೀಯ ವ್ಯಕ್ತಿಗಳಲ್ಲಿ ಅಪರೂಪದ ವ್ಯಕ್ತಿ. ತುಂಬಾ ಆತ್ಮೀಯತೆಯಿಂದ ಮಾತನಾಡುವ ವ್ಯಕ್ತಿತ್ವ. ಮಂಗಳೂರಿಗೆ ಅನೇಕ ಬಾರಿ ಬಂದಿದ್ದರು. ನನ್ನ ಸಹೋದರನ ಜತೆಯೂ ಉತ್ತಮ ಸಂಪರ್ಕ ಹೊಂದಿದ್ದಾರೆ. ನನ್ನ ತಂದೆಯ ಉತ್ತರ ಕ್ರಿಯೆ ಕಾರ್ಯಕ್ಕೂ ಆಡ್ವಾಣಿ ಮಂಗಳೂರಿಗೆ ಆಗಮಿಸಿದ್ದರು. ನಾವು ಕೂಡ ಆಡ್ವಾಣಿ ಅವರ ಪತ್ನಿ ನಿಧನರಾದಾಗ ದೆಹಲಿಗೆ ತೆರಳಿ ಭೇಟಿ ನೀಡಿ ಅವರನ್ನು ಸಂತೈಸಿದ್ದೆವು ಎಂದು ನಿಟ್ಟೆ ವಿವಿ ಕುಲಪತಿ ನಿಟ್ಟೆ ಡಾ.ವಿನಯ ಹೆಗ್ಡೆ ಹೇಳಿದ್ದಾರೆ. ಆಡ್ವಾಣಿ ಸೂಕ್ತ ಆಯ್ಕೆ: ಜ.ಸಂತೋಷ್ ಹೆಗ್ಡೆಭಾರತರತ್ನ ಗೌರವಕ್ಕೆ ಆಡ್ವಾಣಿ ಅವರು ಸೂಕ್ತವೇ ಅರ್ಹರಾಗಿದ್ದಾರೆ. ಅವರಿಗೆ ಬಹಳ ಹಿಂದೆಯೇ ಭಾರತರತ್ನ ಪುರಸ್ಕಾರ ಸಿಗಬೇಕಿತ್ತು. ನನಗೆ ತುರ್ತು ಪರಿಸ್ಥಿತಿ ವೇಳೆ ಬೆಂಗಳೂರಿನ ಕಾರಾಗೃಹದಲ್ಲಿದ್ದಾಗ ಆಡ್ವಾಣಿ ಜತೆ ನಿಕಟ ಸಂಪರ್ಕ ಉಂಟಾಯಿತು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.
ನಾನು ವಕೀಲನಾಗಿ ಪ್ರತಿದಿನ ಜೈಲಿಗೆ ತೆರಳಿ ಆಡ್ವಾಣಿ ಅವರನ್ನು ಭೇಟಿ ಮಾಡಿ ಮಾತನಾಡುತ್ತಿದ್ದೆ. ಅದು ಅವರಿಗೂ ಧೈರ್ಯ ತುಂಬಿತ್ತು. ಲೋಕಾಯುಕ್ತನಾಗಿದ್ದಾಗ ಅಧಿಕಾರಿಯೊಬ್ಬರನ್ನು ರಾಜ್ಯ ಸರ್ಕಾರ ವಿನಾ ಕಾರಣ ಅಮಾನತು ಮಾಡಿದಾಗ ರಾಜಿನಾಮೆ ನೀಡಿದ್ದೆ. ಆಗ ಗೃಹ ಮಂತ್ರಿಯಾಗಿದ್ದ ಆಡ್ವಾಣಿ ಅವರೇ ನನಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿದುಕೊಂಡಿದ್ದರು. ಅಲ್ಲದೆ ನಿನ್ನಂಥವರು ಲೋಕಾಯುಕ್ತದಲ್ಲಿ ಕಾರ್ಯನಿರ್ವಹಿಸಬೇಕು ಎಂದಿದ್ದರು. ಪ್ರಾಮಾಣಿಕ ಅಧಿಕಾರಿಗೆ ನ್ಯಾಯಕೊಡಲು ಅಸಾಧ್ಯವಾದ ಕಾರಣ ರಾಜಿನಾಮೆ ನೀಡಿದ್ದಾಗಿ ತಿಳಿಸಿದ್ದೆ. ಕೊನೆಗೆ ಸರ್ಕಾರವೇ ಅಧಿಕಾರಿಯ ಅಮಾನತು ವಾಪಸ್ ಪಡೆದಾಗ, ನಾನು ಕೂಡ ರಾಜಿನಾಮೆ ವಾಪಸ್ ಮಾಡಿದ್ದೆ. ಈಗ ನಾನು ದೆಹಲಿಯಲ್ಲಿದ್ದು, ಆಡ್ವಾಣಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು. ಸರಿಯಾದ ವ್ಯಕ್ತಿಗೆ ಲಭಿಸಿದ ಪುರಸ್ಕಾರ: ಡಾ.ಪ್ರಭಾಕರ ಭಟ್ ಕಲ್ಲಡ್ಕಆಡ್ವಾಣಿ ಅವರಿಗೆ ಭಾರತರತ್ನ ಸಿಕ್ಕಿದ್ದು ಅದ್ಭುತ, ಅದು ರಾಜಕೀಯ ಪ್ರೇರಿತ ಅಲ್ಲ, ಸರಿಯಾದ ವ್ಯಕ್ತಿಗೆ ಪುರಸ್ಕಾರ ಲಭಿಸಿದೆ ಎಂದು ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ. ಅವರು 2003ರ ಡಿ.20ರಂದು ಕಲ್ಲಡ್ಕ ಕ್ರೀಡೋತ್ಸವಕ್ಕೆ ಆಗಮಿಸಿದ್ದರು. ಆಗ ಉಪಪ್ರಧಾನಿ ಆಗಿದ್ದರು. ಆಡ್ವಾಣಿ ಅವರೊಬ್ಬ ರಾಷ್ಟ್ರೀಯ ಚಿಂತನೆಯ ವ್ಯಕ್ತಿ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಜನಿಸಿದರೂ ಅವರು ಚಿಕ್ಕಂದಿನಿಂದಲೇ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡವರು. ಅವರಿಗೆ ಪ್ರಧಾನಿ ಹುದ್ದೆ ತಪ್ಪಿ ಉಪಪ್ರಧಾನಿ ಪಟ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದರೂ ಅವರ ಚಿಂತನೆಯಲ್ಲಿ ವ್ಯತ್ಯಾಸ ಆಗಲಿಲ್ಲ. ಪಕ್ಷ ಹಾಗೂ ದೇಶ ನಿಷ್ಠೆ ಬದಲಾಗಲಿಲ್ಲ. ಅಂತಹ ಎತ್ತರದ ವ್ಯಕ್ತಿತ್ವ ಅವರದಾಗಿದೆ. ಅಯೋಧ್ಯೆಯ ರಾಮಜನ್ಮಭೂಮಿ ಹೋರಾಟಕ್ಕೆ ಹೊಸ ರೂಪ ಕೊಟ್ಟು, ವೇಗ, ಅಲೆ ಎಬ್ಬಿಸಿದ್ದು ಆಡ್ವಾಣಿ ಎಂದರು. ಭಾರತರತ್ನಕ್ಕೆ ಯೋಗ್ಯ: ಅಣ್ಣಾ ವಿನಯಚಂದ್ರ
ಆಡ್ವಾಣಿ ಅವರು ನಿಜವಾಗಿಯೂ ಭಾರತರತ್ನಕ್ಕೆ ಯೋಗ್ಯರೇ. ಅವರ ಜೊತೆ ಮುರಳಿ ಮನೋಹರ ಜೋಶಿ ಅವರಿಗೂ ಭಾರತರತ್ನ ಸಿಗಬೇಕಿತ್ತು. ಇದು ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಅವರ ಅಭಿಮಾನದ ಮಾತು.ಮಾನವ ಸಂಪನ್ಮೂಲ ಸಚಿವರಾಗಿ ದೇಶದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಸೂಚಿ ಹಾಕಿದವರು ಜೋಶಿ. ಅದೇ ರೀತಿ ಬಿಜೆಪಿಯನ್ನು ಸಂಘಟನಾತ್ಮಕವಾಗಿ ಕಟ್ಟಿಬೆಳೆಸಿದ್ದು ಆಡ್ವಾಣಿ. ಪಕ್ಷದ ಶಿಸ್ತಿನ ಸಿಪಾಯಿ ಆಗಿ ಇಡೀ ದೇಶದಲ್ಲಿ ಬಿಜೆಪಿಯನ್ನು ವಿಸ್ತರಿಸುವಲ್ಲಿ ಆಡ್ವಾಣಿ ಪಾತ್ರ ಹಿರಿದು. ಆಡ್ವಾಣಿ ಅವರ ತ್ರಿಶೂಲ್ ಯಾತ್ರೆ ಸೇರಿದಂತೆ ಅವರ ಚುನಾವಣಾ ಪ್ರವಾಸದಲ್ಲಿ ಪಕ್ಷದ ವಿವಿಧ ಜವಾಬ್ದಾರಿ ವಹಿಸಿದ್ದ ನಾನು ಕೂಡ ಜತೆಯಲ್ಲೇ ಇದ್ದೆ ಎಂಬುದು ಹೆಮ್ಮೆ ತರಿಸುತ್ತದೆ ಎನ್ನುತ್ತಾರೆ.