ಕನ್ನಡಪ್ರಭ ವಾರ್ತೆ ಹಾಸನ
ಭಾರತ್ ಸ್ಕೌಟ್ಸ್- ಗೈಡ್ಸ್ ಇರುವುದೇ ಸಮುದಾಯದ ಸೇವೆಗಾಗಿ. ಜಗತ್ತಿನ ನೂರಾರು ದೇಶಗಳಲ್ಲಿ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ನಮ್ಮ ಸಂಸ್ಥೆ ತೊಡಗಿಸಿಕೊಂಡು ಜನಮುಖಿ ಕಾರ್ಯವನ್ನು ಮಾಡುತ್ತಿದೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ರಾಜ್ಯ ಸಹ ಕಾರ್ಯದರ್ಶಿ ಹಾಗೂ ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವ ಸೇವಾ ಶಿಬಿರದ ಮುಖ್ಯ ನಾಯಕರಾದ ಎಲ್.ಟಿ. ಲೋಕೇಶ್ ಅಭಿಪ್ರಾಯಪಟ್ಟರು.ಅವರು ನಗರದ ಜೈನ ಭವನದಲ್ಲಿ ಮೊದಲ ಬ್ಯಾಚಿನಲ್ಲಿ ವಿವಿಧ ಜಿಲ್ಲೆಗಳಿಂದ ಸೇವಾ ಶಿಬಿರಕ್ಕೆ ಆಗಮಿಸಿದ ಏಳುನೂರಾ ಐವತ್ತಕ್ಕೂ ಹೆಚ್ಚು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಹಾಸನ ಜಿಲ್ಲಾಡಳಿತದ ಸಹಕಾರದಲ್ಲಿ ಪ್ರತಿವರ್ಷದಂತೆ ಸದರಿ ವರ್ಷವೂ ಸಹ ರಾಜ್ಯ ಮಟ್ಟದ ಸೇವಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ನಲವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ದಿನಕ್ಕೆ ಎರಡು ಪಾಳೆಯದಂತೆ ನಮ್ಮ ಮಕ್ಕಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸರದಿ ಸಾಲಿನ ಶಿಸ್ತನ್ನು ಕಾಪಾಡುವುದು, ಬಾಯಾರಿದವರಿಗೆ ನೀರಿನ ಪೂರೈಕೆ ಮಾಡುವುದು, ವಯೋವೃದ್ಧರನ್ನು ವ್ಹೀಲ್‌ಚೇರಿನಲ್ಲಿ ಕರೆದುಕೊಂಡು ಹೋಗಿ ದರ್ಶನ ಮಾಡಿಸುವುದು, ಸ್ವಚ್ಛತಾ ಕಾರ್ಯ ಮಾಡುವುದು ಹೀಗೆ ಅನೇಕ ಕಡೆಗಳಲ್ಲಿ ಸೇವಾ ನಿರತರಾಗಿದ್ದಾರೆ. ಇದೊಂದು ನಮ್ಮ ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಪುಣ್ಯದ ಕಾರ್ಯ. ಹಾಸನಾಂಬೆಯ ಸೇವೆ ನಮ್ಮಗಳ ಸೌಭಾಗ್ಯ. ಎಲ್ಲರಿಗೂ ಈ ಅವಕಾಶ ದೊರೆಯುವುದಿಲ್ಲ. ಸಿಕ್ಕ ಅವಕಾಶವನ್ನು ಶ್ರದ್ಧೆಯಿಂದ ನಿರ್ವಹಿಸಿ ನಮ್ಮ ಸಂಸ್ಥೆ ಹಾಗೂ ಜಿಲ್ಲಾಡಳಿತಕ್ಕೆ ಕೀರ್ತಿ ತರಬೇಕಿದೆ ಎಂದರು.ಈ ಸಂದರ್ಭದಲ್ಲಿ ರೋವರ್ ರೇಂಜರ್ ವಿಭಾಗದ ಹೆಡ್ ಕ್ವಾರ್ಟರ್ ಕಮಿಷನರ್ ಡಾ. ಜಿ.ಡಿ.ನಾರಾಯಣ, ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಬೆಂಗಳೂರು ಎ.ಎಸ್.ಒ.ಸಿ. ನಿತಿನ್ ಅಮೀನ್, ಜಿಲ್ಲಾ ಖಜಾಂಚಿ ಆರ್.ಎಸ್.ರಮೇಶ್, ಏಕಲವ್ಯ ರೋವರ್ ನಾಯಕ ಆರ್.ಜಿ. ಗಿರೀಶ್ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ವಿವಿಧ ತಾಲೂಕು ಕಾರ್ಯದರ್ಶಿಗಳು, ವಿವಿಧ ಜಿಲ್ಲೆಯಿಂದ ಆಗಮಿಸಿದ್ದ ರೋವರ್ ಲೀಡರ್, ರೇಂಜರ್ ಲೀಡರ್ಸ್, ಕಾರ್ಯನಿರತ ರೋವರ್ಸ್, ರೇಂಜರ್ಸ್ ಉಪಸ್ಥಿತರಿದ್ದರು.