ಶಿಗ್ಗಾಂವಿ: ಹಿಂದುಳಿದ ವರ್ಗಗಳ ಅಭಿವೃದ್ಧಿ ಕೆಲಸವನ್ನು ಭರತ ಬೊಮ್ಮಾಯಿ ಮುಂದುವರೆಸಿಕೊಂಡು ಹೋಗುತ್ತಾರೆ. ಹಿರಿಯರು ಭರತ ಬೊಮ್ಮಾಯಿಗೆ ಮಾರ್ಗದರ್ಶನ ಮಾಡಬೇಕು. ಅಲ್ಲದೇ, ಹಿಂದುಳಿದ ವರ್ಗಗಳ ಪರ ವಿಧಾನಸೌಧದಲ್ಲಿ ಗುಡುಗಬೇಕು ಎಂದು ಭರತ್ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.
ಪ್ರತಿಯೊಂದು ಚುನಾವಣೆ ತನ್ನದೇ ಆದ ವೈಶಿಷ್ಟ್ಯ ಹೊಂದಿರುತ್ತದೆ. ಹೊಸ ಹೊಸ ವಿಚಾರಗಳನ್ನು ಹೊರ ಹಾಕುತ್ತದೆ. ರಾಜ್ಯದ ಪ್ರಗತಿ ಯಾವ ರೀತಿ ನಡೆಯುತ್ತಿದೆ. ಅಭಿವೃದ್ಧಿ ಹೇಗೆ ನಿಂತು ಹೋಗಿದೆ ಎಂದು ಕೇವಲ ವಿರೋಧ ಪಕ್ಷದ ಶಾಸಕರಷ್ಟೇ ಅಲ್ಲ, ಆಡಳಿತ ಪಕ್ಷದ ಶಾಸಕರೂ ಹೇಳುತ್ತಿದ್ದಾರೆ. ಅಷ್ಟೇ ಅಲ್ಲ ಸಾರ್ವಜನಿಕರೂ ಮಾತನಾಡುತ್ತಿದ್ದಾರೆ ಎಂದರು.
ಮಳೆ ಭೀಕರವಾಗಿದ್ದರೂ ಮನೆ ಕಳೆದುಕೊಂಡವರಿಗೆ ಯಾವುದೇ ಪರಿಹಾರ ದೊರೆಯುತ್ತಿಲ್ಲ. ನಮ್ಮ ಕಾಲದಲ್ಲಿ ಭೀಕರ ಪ್ರವಾಹ ಬಂದು ಸಾವಿರಾರು ಮನೆಗಳು ಬಿದ್ದವು. ಆಗ ನಮ್ಮ ನಾಯಕರಾಗಿದ್ದ ಯಡಿಯೂರಪ್ಪ ಅವರು ಪೂರ್ಣ ಪ್ರಮಾಣದ ಮನೆ ಬಿದ್ದರೆ ಐದು ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದೇವು. ಇವರ ಸರ್ಕಾರದಲ್ಲಿ ನಮ್ಮ ತಾಲೂಕಿನಲ್ಲಿ ಪೂರ್ಣ ಬಿದ್ದ ಮನೆಗೆ ಮೊದಲ ಕಂತಿನಲ್ಲಿ ಕೇವಲ ಆರೂವರೆ ಸಾವಿರ ರು. ಕೊಟ್ಟಿದ್ದಾರೆ. ಕೇವಲ ತೊಂಬತ್ತು ಸಾವಿರ ಕೊಡುತ್ತಾರಂತೆ.ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಣೆ ಮಾಡಿರುವ ಅನುದಾನವನ್ನು ಹಿಂದುಳಿದ ವರ್ಗಗಳಿಗೆ ಬಿಡುಗಡೆ ಮಾಡಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಸುಮಾರು ೨೪ ಸಾವಿರ ಕೋಟಿ ರು. ಎಸ್ಸಿ, ಎಸ್ಪಿ ಹಣವನ್ನು ನುಂಗಿ ಹಾಕಿದರು. ಆ ಸಮುದಾಯಗಳಿಗೆ ರಸ್ತೆ ಅಭಿವೃದ್ಧಿ, ಬೋರ್‌ವೆಲ್ ಕೊರೆಯಲು, ಹೊಲ ಹಿಡಿಯಲು ಇಟ್ಟಿದ್ದ ಹಣವನ್ನು ಲೂಟಿ ಮಾಡಿದರು. ಎಸ್ಪಿ ನಿಗಮದ ಹಣವನ್ನು ಚುನಾವಣೆಗೆ ಬಳಸಿಕೊಂಡರು. ಆದರೂ ನಾವು ಏನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ ಎಂದರು.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಅವಧಿಯಲ್ಲಿ ಮಾಡಿದ್ದೇವೆ. ಶಿಶುನಾಳ ಶರೀಫರ ಊರು ಅಭಿವೃದ್ಧಿ ಮಾಡಿದ್ದೇವೆ. ಇವತ್ತಿನ ಪ್ರಸ್ತುತ ಪರಿಸ್ಥಿತಿಗೆ ತಕ್ಕ ಹಾಗೆ ಶಿಶುನಾಳ ಶರೀಫರು ಕೋಡಗನ ಕೋಳಿ ನುಂಗಿತ್ತ, ಸುಣ್ಣವು ಗೋಡೆ ನುಂಗಿತ್ತ ಎಂದು ಈ ಸರ್ಕಾರ ಅದನ್ನೇ ಮಾಡುತ್ತಿದೆ. ವಾಲ್ಮೀಕಿ ನಿಗಮದ ಹಣ ನುಂಗಿದ್ದು ನೋಡಿದಾಗ ಅದೇ ಅನಿಸುತ್ತದೆ. ಎಲ್ಲ ವರ್ಗದವರು ಅಭಿವೃದ್ಧಿ ಹೊಂದಿದಾಗ ಮಾತ್ರ ಸಾಮಾಜಿಕ ನ್ಯಾಯ ದೊರೆಯುತ್ತದೆ ಎಂದು ಹೇಳಿದರು.