ಭರತ ಹುಣ್ಣಿಮೆ: 7 ಲಕ್ಷಕ್ಕೂ ಅಧಿಕ ಭಕ್ತರಿಂದ ಹುಲಿಗೆಮ್ಮನ ದರ್ಶನ

KannadaprabhaNewsNetwork |  
Published : Feb 13, 2025, 12:50 AM IST
12 ಎಂ.ಅರ್.ಬಿ. 2 : ನದಿ ದಂಡೆಯಲ್ಲಿ ಪುಣ್ಯ ಸ್ನಾನ ಮಾಡಲು  ಕಿಕ್ಕಿರೆದು ತುಂಬಿರುವ ಭಕ್ತರು.12 ಎಂ.ಅರ್.ಬಿ 3: ದೇವಸ್ಥಾನದ ಮುಂದೆ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತ ಸಾಗರ  | Kannada Prabha

ಸಾರಾಂಶ

ಭರತ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ 7 ಲಕ್ಷಕ್ಕೂ ಅಧಿಕ ಜನ ಭಕ್ತರು ಆಗಮಿಸಿ ಅಮ್ಮನ ದರ್ಶನ ಪಡೆದರು.

ಕನ್ನಡಪ್ರಭ ವಾರ್ತೆ ಮುನಿರಾಬಾದ್

ಭರತ ಹುಣ್ಣಿಮೆ ಪ್ರಯುಕ್ತ ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನಕ್ಕೆ 7 ಲಕ್ಷಕ್ಕೂ ಅಧಿಕ ಜನ ಭಕ್ತರು ಆಗಮಿಸಿ ಅಮ್ಮನ ದರ್ಶನ ಪಡೆದರು.

ಭರತ ಹುಣ್ಣಿಮೆ ಅಮ್ಮನವರ ಪೂಜಾ ಕೈಂಕರ್ಯಕ್ಕೆ ವಿಶೇಷವಾಗಿದ್ದು ಜಿಲ್ಲೆ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳು, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆಯಿಂದ ಮುಂಜಾನೆಯಿಂದಲೇ ಭಕ್ತರ ದಂಡು ದೇವಾಲಯದತ್ತ ಆಗಮಿಸಿತ್ತು.

ಮಂಗಳವಾರ ಸಂಜೆಯಿಂದಲೇ ದೇವಸ್ಥಾನಕ್ಕೆ ಭಕ್ತರ ಆಗಮನ ಪ್ರಾರಂಭವಾಗಿದ್ದು, ಮಂಗಳವಾರ ರಾತ್ರಿ ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ದೇವಸ್ಥಾನದ ಮುಂದೆ ಇರುವ ಶೆಲ್ಟರ್‌ನಲ್ಲಿ ತಂಗಿ ವಿಶ್ರಾಂತಿ ಪಡೆದು ಬೆಳಗಿನ ಜಾವ 4.30ರಿಂದ ಅಮ್ಮನ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತರು. ಬೆಳಗಿನ ಜಾವ 4.30ಕ್ಕೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಭಕ್ತಾಧಿಗಳು ಅಮ್ಮನವರ ದರ್ಶನ ಪಡೆಯಲು ಪ್ರಾರಂಭಿಸಿದರು. ಬೆಳಗ್ಗೆ 10 ಗಂಟೆಯ ವೇಳೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಜನ ದರ್ಶನ ಪಡೆದರು. ಮಧ್ಯಾಹ್ನ 12ಗಂಟೆಗೆ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿತು. ಸಂಜೆ 4 ಗಂಟೆಯ ಒಳಗೆ ಭಕ್ತರ ಸಂಖ್ಯೆಯು 5 ಲಕ್ಷಕ್ಕೆ ತಲುಪಿತು.

ಭರತ ಹುಣ್ಣಿಮೆ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡ ಹಿನ್ನೆಲೆ ದೇವಸ್ಥಾನದ ಬಾಗಿಲು ರಾತ್ರಿ 10 ಗಂಟೆಯವರೆಗೂ ತೆರೆದಿತ್ತು. ರಾತ್ರಿ 10 ಗಂಟೆಯವರೆಗೆ ಸುಮಾರು 7 ಲಕ್ಷಕ್ಕೂ ಅಧಿಕ ಜನ ಭಕ್ತಾಧಿಗಳು ಅಮ್ಮನವರ ದರ್ಶನ ಪಡೆದಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ ರಾವ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ದೇವಾಲಯದ ವತಿಯಿಂದ ಭಕ್ತರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿತ್ತು. ವಿವಿಧೆಡೆಗಳಿಂದ ಖಾಸಗಿ, ಸರ್ಕಾರಿ ವಾಹನಗಳಲ್ಲಿ, ರೈಲುಗಳ ಮೂಲಕ ಜನರು ಆಗಮಿಸಿದ್ದರು.

ವಾಹನ ಸಂಚಾರ ನಿರ್ವಹಣೆಗೆ ಕ್ರಮ:

ಹುಣ್ಣಿಮೆ ಪ್ರಯುಕ್ತ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸಿದ ಹಿನ್ನೆಲೆ ವಾಹನ ದಟ್ಟಣೆ ಹಾಗೂ ಸಂಚಾರ ದಟ್ಟಣೆ ನಿರ್ವಹಣೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯಿಂದ ಹುಲಿಗಿ ಗ್ರಾಮದಲ್ಲಿ 8 ಕಡೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ನಂದಿ ವೃತ್ತ, ಶಿವಪುರ ಕ್ರಾಸ್, ಕೋರಮಂಡಲ ಫ್ಯಾಕ್ಟರಿ, ಚೆನ್ನಮ್ಮ ವೃತ್ತ, ತಾಯಮ್ಮ ಕ್ರಾಸ್, ರೈಲ್ವೆ ಗೇಟ್, ರೈಲ್ವೆ ಸ್ಟೇಶನ್‌ ವೃತ್ತ, ಹಾಗೂ ದೇವಸ್ಥಾನದ ಹಿಂಭಾಗದಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು.

ದೇವಸ್ಥಾನದ ಮುಂಭಾಗದಲ್ಲಿ ಕೇವಲ ಪಾದಚಾರಿಗಳನ್ನು ಮಾತ್ರ ಬಿಡಲಾಯಿತು. 4 ಚಕ್ರ ವಾಹನಗಳನ್ನು ದೇವಸ್ಥಾನದ ಹಿಂಭಾಗದಲ್ಲಿ ನಿಲ್ಲಿಸಲಾಯಿತು. ದ್ವಿಚಕ್ರ ವಾಹನಗಳನ್ನು ನಂದಿ ವೃತ್ತದಲ್ಲಿ ನಿಲ್ಲಿಸಲಾಯಿತು. ಇದರಿಂದ ವಾಹನ ದಟ್ಟನೆ ಬಹಳ ಮಟ್ಟಿಗೆ ಕಡಿಮೆಯಾಯಿತು. ಪೋಲಿಸ್ ಇಲಾಖೆಯ ಈ ಕ್ರಮವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಗಂಗಾವತಿ, ಕೊಪ್ಪಳ ಹಾಗೂ ಹೊಸಪೇಟೆಯಿಂದ ಭಕ್ತರ ಅನುಕೂಲಕ್ಕಾಗಿ ಸಾರಿಗೆ ನಿಗಮವು ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಿತ್ತು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’