ಕಾರವಾರ: ನಗರದಲ್ಲೇ ಇದ್ದರೂ ಇವರಿಗೆ ಸಮರ್ಪಕ ರಸ್ತೆ ಇಲ್ಲ. ಮಳೆಗಾಲ ಬಂತೆಂದರೆ ಕೆಸರುಗದ್ದೆಯಂತಾಗುವ ರಸ್ತೆ. ಬೇಸಿಗೆಯಲ್ಲಿ ತಗ್ಗು, ದಿಣ್ಣೆಗಳಲ್ಲಿ ಸಾಗಬೇಕಾದ ಪರಿಸ್ಥಿತಿ. 15-20 ವರ್ಷಗಳಿಂದ ಇವರು ರಸ್ತೆಗಾಗಿ ಅರ್ಜಿ ಹಿಡಿದು ಅಲೆದಾಡುತ್ತಿದ್ದರೂ ಇವರ ಗೋಳನ್ನು ಕೇಳುವವರೇ ಇಲ್ಲ.
ಇಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮನೆಯೂ ಇದೆ. ದಲಿತರಾದ ಇವರು ರಸ್ತೆ ನಿರ್ಮಾಣಕ್ಕಾಗಿ ಅರ್ಜಿ ಹಿಡಿದು ಎಲ್ಲೆಲ್ಲಿ ಕೊಡಬೇಕೋ ಅಲ್ಲೆಲ್ಲ ಅಲೆದಾಡಿ ಬಸವಳಿದಿದ್ದಾರೆ. ನಿವೃತ್ತ ಸೈನಿಕರ ಮನೆಯೂ ಇದೆ. ವಿದ್ಯಾರ್ಥಿ ವಿದ್ಯಾರ್ಥಿನಿಯರು ದುಸ್ಥಿತಿಯಲ್ಲಿರುವ ರಸ್ತೆಯಲ್ಲೇ ಸಾಗಬೇಕು. ಆದರೆ ರಸ್ತೆ ನಿರ್ಮಾಣದ ಬಗ್ಗೆ ನಗರಸಭೆ ತಲೆಕೆಡಿಸಿಕೊಂಡಿಲ್ಲ.
ಕೇವಲ 500 ಮೀ. ರಸ್ತೆ ನಿರ್ಮಿಸಿದರೆ ಇವರಿಗೆಲ್ಲ ಅನುಕೂಲವಾಗಲಿದೆ. ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ನಿಂತು ಪಾದಚಾರಿಗಳು, ಬೈಕ್ ಸವಾರರು ಪ್ರಯಾಸಪಟ್ಟು ಸಾಗಬೇಕು. ಬೇಸಿಗೆಯಲ್ಲಿ ಕಲ್ಲು, ಹೊಂಡಗಳ ನಡುವೆ ಸಾಗಬೇಕು.ಬೇರೆ ಎಲ್ಲ ವಾರ್ಡಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಹಾಗಂತ ಇವರು ಕಾಂಕ್ರೀಟ್ ರಸ್ತೆಯನ್ನು ಕೇಳುತ್ತಿಲ್ಲ. ಡಾಂಬರು ರಸ್ತೆಯನ್ನಾದರೂ ನಿರ್ಮಿಸಿಕೊಡಿ ಎಂದು ಬೇಡಿಕೆ ಮಂಡಿಸುತ್ತಿದ್ದಾರೆ.
ಈ ವಾರ್ಡಿನ ಸದಸ್ಯ ಹನುಮಂತ ತಳವಾರ ಅವರನ್ನು ಪ್ರಶ್ನಿಸಿದರೆ, ರಸ್ತೆ ಮಾಡಿಕೊಡುತ್ತೇವೆ, ಆದರೆ ನಗರಸಭೆಯಲ್ಲಿ ಈಗ ಹಣ ಇಲ್ಲ ಎಂದು ಹೇಳುತ್ತಾರೆ. ಹಣ ಬಂದಾಗ ರಸ್ತೆ ನಿರ್ಮಿಸುವುದಾಗಿ ಹೇಳುತ್ತಾರೆ. ಹಣ ಇರುವಾಗ ಬೇರೆ ಬೇರೆ ಕಡೆ ರಸ್ತೆ ನಿರ್ಮಿಸಲಾಯಿತೆ ಹೊರತೂ ಈ ರಸ್ತೆಯನ್ನು ಕೇಳುವವರೇ ಇರಲಿಲ್ಲ. ಸಮಸ್ಯೆ ಕೇಳುವವರೇ ಇಲ್ಲ: ನಗರದ ಎಲ್ಲೆಡೆ ರಸ್ತೆ ಇದೆ. ಇಲ್ಲಿ ಮಾತ್ರ ನಾವು ಸಂಚರಿಸಲು ಶಿಕ್ಷೆ ಅನುಭವಿಸಬೇಕು. ರಸ್ತೆ ನಿರ್ಮಿಸುವಂತೆ 15 ವರ್ಷಗಳಿಂದ ಅರ್ಜಿ ಕೊಡುತ್ತಿದ್ದೇವೆ. ವಿನಂತಿಸುತ್ತಿದ್ದೇವೆ. ಆದರೆ ನಮ್ಮ ಸಮಸ್ಯೆ ಕೇಳುವವರೇ ಇಲ್ಲ ಎಂದು ಸ್ಥಳೀಯ ನಿವಾಸಿ ಉಲ್ಲಾಸ ನಾಯ್ಕ ಹೇಳುತ್ತಾರೆ.ಅನುದಾನ ಇಲ್ಲ: ನಗರಸಭೆಯಲ್ಲಿ ಅನುದಾನ ಇಲ್ಲ. ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವಾಗಲಿದೆ. ಆ ಹಣದಲ್ಲಿ ಎಲ್ಲ ವಾರ್ಡಿಗೂ ಅನುದಾನ ನೀಡಲಾಗುವುದು. ಮಾರ್ಚ್ ನಂತರ ಮಾರುತಿ ನಗರದಲ್ಲೂ ರಸ್ತೆ ನಿರ್ಮಿಸಿಕೊಡುತ್ತೇವೆ ಎಂದು ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೆಕರ ಹೇಳುತ್ತಾರೆ.