ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಕ ಪ್ರಕ್ರಿಯೆ ನಡೆದ ಸರಿಯಾಗಿ ಒಂದು ವಾರದ ಬಳಿಕ, 6 ತಿಂಗಳಿಂದ ಖಾಲಿ ಇದ್ದ ಪಕ್ಷದ ಶಾಸಕಾಂಗ ನಾಯಕನ ಆಯ್ಕೆ ಪ್ರಕ್ರಿಯೆಯೂ ಮುಗಿದಿದ್ದು, ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಆರ್.ಅಶೋಕ್ ಅವರು ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅವರು ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ ಅಲಂಕರಿಸಲಿದ್ದಾರೆ.ಶುಕ್ರವಾರ ಸಂಜೆ ಖಾಸಗಿ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಕೇಂದ್ರ ಘಟಕದಿಂದ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಕುಮಾರ್ ಗೌತಮ್ ಅವರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಶೋಕ್ ಹೆಸರು ಸೂಚಿಸಿದರೆ, ಮಾಜಿ ಸಚಿವ ಸುನೀಲ್ ಕುಮಾರ್, ಇತರೆ ಶಾಸಕರು ಅನುಮೋದಿಸಿದರು. ಬಳಿಕ ಅಶೋಕ್ ಅವರ ಆಯ್ಕೆಯನ್ನು ಘೋಷಿಸಲಾಯಿತು.ಇನ್ನು ಮುಂದೆ ರಾಜ್ಯ ಬಿಜೆಪಿಯನ್ನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಅವರು ಜೋಡೆತ್ತಿನಂತೆ ಮುನ್ನಡೆಸಲಿದ್ದಾರೆ. ಈ ಮೂಲಕ ಬಿಜೆಪಿಯು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ನಾಯಕತ್ವ ನೀಡಿದಂತಾಗಿದೆ. ಇನ್ನುಳಿದಂತೆ ವಿಧಾನಸಭೆಯ ಉಪನಾಯಕ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ-ಉಪನಾಯಕ, ಉಭಯ ಸದನಗಳ ಪ್ರತಿಪಕ್ಷಗಳ ಮುಖ್ಯ ಸಚೇತಕರ ಹುದ್ದೆಗಳಿಗೆ ಜಾತಿ ಸಮೀಕರಣ ಆಧರಿಸಿ ಶೀಘ್ರದಲ್ಲಿಯೇ ನೇಮಕ ಆಗಲಿದೆ ಎಂದು ಮೂಲಗಳು ತಿಳಿಸಿವೆ.6 ತಿಂಗಳಿಂದ ಭಣಗುಡುತ್ತಿದ್ದ ಹುದ್ದೆ:ಕಳೆದ ಆರು ತಿಂಗಳಿಂದ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿರಲಿಲ್ಲ. ಪ್ರಮುಖ ಪ್ರತಿಪಕ್ಷದ ಶಾಸಕಾಂಗ ನಾಯಕನಾಗಿ ಆಯ್ಕೆಯಾಗುವವರು ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ನಿಭಾಯಿಸುತ್ತಾರೆ. ಆದರೆ, ಬಿಜೆಪಿ ಪ್ರಮುಖ ಪ್ರತಿಪಕ್ಷವಾದರೂ ಪ್ರತಿಪಕ್ಷದ ನಾಯಕನಿಲ್ಲದೇ ಬಜೆಟ್ ಅಧಿವೇಶನವನ್ನೂ ಎದುರಿಸಬೇಕಾಯಿತು. ಕಳೆದ ಆರು ತಿಂಗಳಿಂದ ಬಿಜೆಪಿ ಶಾಸಕರು ತಮ್ಮ ನಾಯಕ ಇಲ್ಲದೆ ತೀವ್ರ ಮುಜುಗರ ಅನುಭವಿಸಿದ್ದರು. ಆಡಳಿತಾರೂಢ ಕಾಂಗ್ರೆಸ್ ಪದೇಪದೇ ಈ ಬಗ್ಗೆ ಟೀಕೆ ಮಾಡುತ್ತಲೇ ಇತ್ತು. ಇದೀಗ ಬೆಳಗಾವಿ ಅಧಿವೇಶನಕ್ಕೂ ಮೊದಲು ಪ್ರತಿಪಕ್ಷದ ನಾಯಕರನ್ನು ನೇಮಕ ಮಾಡಿದಂತಾಗಿದೆ.ಉತ್ತರ ಕರ್ನಾಟಕದವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದ ಹಿರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಮತ್ತು ರಮೇಶ್ ಜಾರಕಿಹೊಳಿ ಅವರು ಸಭೆಗೆ ಬಹಿಷ್ಕಾರ ಹಾಕಿದರು. ಸಭೆಗೆ ಆಗಮಿಸಿದ ಅವರು ಅಶೋಕ್ ಅವರ ಆಯ್ಕೆ ಮಾಹಿತಿ ಲಭಿಸುತ್ತಿದ್ದಂತೆಯೇ ನಿರ್ಗಮಿಸಿದರು. ಇನ್ನುಳಿದಂತೆ ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಅವರು ಸಭೆಗೆ ಗೈರುಹಾಜರಾಗಿದ್ದರು.ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಪಕ್ಷದ ಶಾಸಕರು ಪಾಲ್ಗೊಂಡಿದ್ದರು.
7 ಬಾರಿಯ ಸತತ ಶಾಸಕ ಅಶೋಕ್1997ರಲ್ಲಿ ನಡೆದ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ಅಶೋಕ್ ಅವರು ನಂತರ ಸತತವಾಗಿ ಗೆಲ್ಲುವ ಮೂಲಕ ಇದೀಗ ಏಳನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆಬಂದಾಗಲೆಲ್ಲ ಸಚಿವ ಸ್ಥಾನ ಅಲಂಕರಿಸಿರುವ ಅಶೋಕ್ ಅವರು 2012-13ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿಯೂ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.ಅಶೋಕ್ ಯಾಕೆ?- ರಾಜ್ಯಾಧ್ಯಕ್ಷ ಹುದ್ದೆಯನ್ನು ಪ್ರಬಲ ಲಿಂಗಾಯತ ಸಮುದಾಯದ ವಿಜಯೇಂದ್ರ ಅವರಿಗೆ ನೀಡಿರುವ ಬಿಜೆಪಿ
- ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅಶೋಕ್‌ಗೆ ಮಣೆ- ವಿಜಯೇಂದ್ರ ಹಾಗೂ ಮಿತ್ರ ಪಕ್ಷ ಜೆಡಿಎಸ್ ನಾಯಕರ ಜತೆ ಸಮನ್ವಯತೆ ಸಾಧಿಸಲು ಅಶೋಕ್‌ಗೆ ಹುದ್ದೆ
- ಬಿಎಸ್‌ವೈ, ಬೊಮ್ಮಾಯಿ ಸೇರಿ ಹಲವು ನಾಯಕರು ಬೆನ್ನಿಗೆ ನಿಂತಿದ್ದರಿಂದ ಅಶೋಕ್ ಅವರಿಗೆ ವರದಾನ- ಪಕ್ಷದ ಹಿರಿಯ ಹಾಗೂ ಅನುಭವಿ ನಾಯಕ. ಸತತ 7 ಬಾರಿ ಶಾಸಕರಾಗಿರುವುದೂ ಅನುಕೂಲವಾಯಿತು
ವಿಜಯೇಂದ್ರ, ನಾನು ಬಿಜೆಪಿ ಜೋಡೆತ್ತುರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ನಾನು ಜೋಡೆತ್ತು ರೀತಿ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಸಂಘಟನೆ ಬಲಪಡಿಸುತ್ತೇವೆ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೊಲಗಿಸಿ, ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಟ ಮಾಡಬೇಕಿದೆ. ಆರ್. ಅಶೋಕ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ