ಮಂಗಳೂರು: ನಮ್ಮ ತರುಣ ಕವಿಗಳು ಹಲವರು ಛಂದಸ್ಸಿಲ್ಲದಿರುವುದೇ ಕಾವ್ಯದ ಲಕ್ಷಣ ಎಂಬಂತೆ ಕೃತಿ ರಚನೆ ಮಾಡುತ್ತಿರುವುದರಿಂದ ತಾನು ಯಾವುದೇ ಕವನ ಸಂಗ್ರಹಕ್ಕೆ ಮುನ್ನುಡಿ ಬರೆಯುವುದಿಲ್ಲ ಎಂದಿರುವ ಕನ್ನಡದ ಆಸ್ತಿ ಮಾಸ್ತಿಯವರು, ಭಾ.ಭ.ಮಜಿಬೈಲು ಅವರು ಕನ್ನಡ ನುಡಿಯ ಚೆಲುವನ್ನು ಬಲ್ಲ ಮಹತ್ವದ ಕವಿ ಎಂದು ಮೆಚ್ಚು ನುಡಿಗಳನ್ನಾಡಿರುವುದು ದಿ. ಭಾಸ್ಕರ ಭಂಡಾರಿ ಅವರ ಕವಿತೆಗಳ ತೂಕವನ್ನು ಹೆಚ್ಚಿಸಿದೆ ಎಂದು ಸಾಹಿತಿ, ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು.
ಭಾಸ್ಕರ ಭಂಡಾರಿ ಮಜಿಬೈಲು ಅವರು ಕನ್ನಡದಲ್ಲಿ ಏಳು ಹಾಗೂ ತುಳು ಭಾಷೆಯಲ್ಲಿ ಎರಡು ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ ಸಾಹಿತಿಗಳು. ಅವರ ‘ನೆನಹು’ ಎಂಬ ಚೊಚ್ಚಲ ಕವನ ಸಂಕಲಕ್ಕೆ, ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದುಕೊಟ್ಟ ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮುನ್ನುಡಿ ಬರೆದಿದ್ದು, ಗಡಿನಾಡ ಕವಿ ನಾಡೋಜ ಕಯ್ಯಾರ ಕಿಂಞ್ಞಣ್ಣ ರೈ ಬೆನ್ನುಡಿ ಬರೆದಿದ್ದಾರೆ ಎಂದಾಗ ಅವರ ಕಾವ್ಯ ಶಕ್ತಿಗೆ ಬೇರೆ ಸಾಕ್ಷಿ ಬೇಕಿಲ್ಲ ಎಂದರು.
ಶಾರದಾ ವಿದ್ಯಾಲಯಕ್ಕೆ ಹಲವು ಕೃತಿಗಳನ್ನು ದಾನ ಮಾಡಿದ್ದ ಭಾಸ್ಕರ ಭಂಡಾರಿ ಮಜಿಬೈಲು ಅವರ ಸ್ಮರಣೆಯಲ್ಲಿ ಪತ್ನಿ ಸವಿತಾ ಭಾಸ್ಕರ ಭಂಡಾರಿ ಮತ್ತು ಮಕ್ಕಳು ದಾನಿಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಉದ್ಘಾಟಿಸಿದರು. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ ಅಧ್ಯಕ್ಷತೆ ವಹಿಸಿದ್ದರು.
ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಯಶೋದಾ ಕುಮಾರಿ ನಿರೂಪಿಸಿದರು. ಮಿಮಿಕ್ರಿ ಕಲಾವಿದ ಪಟ್ಟಾಭಿರಾಮ ಸುಳ್ಯ ಅಣಕು ಪ್ರದರ್ಶನ ನೀಡಿದರು.