ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಒರಿಸ್ಸಾ ಈ ನಾಲ್ಕು ರಾಜ್ಯಗಳಲ್ಲಿ 71 ನದಿಗಳ ಮೇಲೆ 129 ತೂಗು ಸೇತುವೆಗಳನ್ನು ಕಟ್ಟಿ ಗ್ರಾಮೀಣ ಸಂಪರ್ಕ ಸುಧಾರಣೆಯಲ್ಲಿ ಹೊಸ ಶಕೆ ಮೂಡಿಸಿ ಸುಳ್ಯಕ್ಕೆ ಹೆಸರು ತಂದ ಗಿರೀಶ್ ಭಾರದ್ವಾಜರಿಗೆ 2017ರ ‘ಪದ್ಮಶ್ರೀ’ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿದಾಗ ಸುಳ್ಯಕ್ಕೆ ಸುಳ್ಯವೇ ಸಂಭ್ರಮಿಸಿತು. ಇದು ಅರ್ಹತೆಗೆ ಸಂದ ಗೌರವ, ಸರ್ಕಾರವು ಕಾಯಕ ಮಾಡಿದವರನ್ನು ಗುರುತಿಸಿದೆ, ಸೇವೆಯನ್ನು ಪುರಸ್ಕರಿಸಿದೆ, ಇದೇ ಸರಿಯಾದ ಆಯ್ಕೆ ಎಂಬಿತ್ಯಾದಿಯಾಗಿ ಹೇಳಿದ ಜನ ತಮಗೇ ಪ್ರಶಸ್ತಿ ಬಂದವರಂತೆ ಮಾತಾಡಿದರು. ಏಕೆಂದರೆ ಗಿರೀಶರು ಒಬ್ಬ ಅಜಾತಶತ್ರು. ಅವರನ್ನು ಕಂಡು ಮತ್ಸರಿಸುವವರಿಲ್ಲ. ಅವರಲ್ಲಿ ಅಜ್ಞಾನದಿಂದ ಸಿಟ್ಟು ಮಾಡಿ ಮತ್ಸರ ಮಾಡಿದವರನ್ನು ಪ್ರೀತಿಯ ಸೆಲೆಗೆ ಸೆಳೆದು ತಕ್ಕೖಸುವ ಒಬ್ಬ ಮಾನವ ಪ್ರೇಮಿ ಗಿರೀಶರು.

ಕರ್ನಾಟಕ, ಕೇರಳ, ಆಂಧ್ರಪ್ರದೇಶ ಮತ್ತು ಒರಿಸ್ಸಾ ಈ ನಾಲ್ಕು ರಾಜ್ಯಗಳಲ್ಲಿ 71 ನದಿಗಳ ಮೇಲೆ 129 ತೂಗು ಸೇತುವೆಗಳನ್ನು ಕಟ್ಟಿ ಗ್ರಾಮೀಣ ಸಂಪರ್ಕ ಸುಧಾರಣೆಯಲ್ಲಿ ಹೊಸ ಶಕೆ ಮೂಡಿಸಿ ಸುಳ್ಯಕ್ಕೆ ಹೆಸರು ತಂದ ಗಿರೀಶ್ ಭಾರದ್ವಾಜರಿಗೆ 2017ರ ‘ಪದ್ಮಶ್ರೀ’ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿದಾಗ ಸುಳ್ಯಕ್ಕೆ ಸುಳ್ಯವೇ ಸಂಭ್ರಮಿಸಿತು. ಇದು ಅರ್ಹತೆಗೆ ಸಂದ ಗೌರವ, ಸರ್ಕಾರವು ಕಾಯಕ ಮಾಡಿದವರನ್ನು ಗುರುತಿಸಿದೆ, ಸೇವೆಯನ್ನು ಪುರಸ್ಕರಿಸಿದೆ, ಇದೇ ಸರಿಯಾದ ಆಯ್ಕೆ ಎಂಬಿತ್ಯಾದಿಯಾಗಿ ಹೇಳಿದ ಜನ ತಮಗೇ ಪ್ರಶಸ್ತಿ ಬಂದವರಂತೆ ಮಾತಾಡಿದರು. ಏಕೆಂದರೆ ಗಿರೀಶರು ಒಬ್ಬ ಅಜಾತಶತ್ರು. ಅವರನ್ನು ಕಂಡು ಮತ್ಸರಿಸುವವರಿಲ್ಲ. ಅವರಲ್ಲಿ ಅಜ್ಞಾನದಿಂದ ಸಿಟ್ಟು ಮಾಡಿ ಮತ್ಸರ ಮಾಡಿದವರನ್ನು ಪ್ರೀತಿಯ ಸೆಲೆಗೆ ಸೆಳೆದು ತಕ್ಕೖಸುವ ಒಬ್ಬ ಮಾನವ ಪ್ರೇಮಿ ಗಿರೀಶರು. ಕಳೆದ ಸುಮಾರು 40 ವರ್ಷಗಳಿಂದ ಅವರ ಸ್ನೇಹಚಾರ ಇರುವ ನನ್ನಲ್ಲಿ ಆಗಾಗ ಅವರ ಸಾಧನೆಯ ಮತ್ತು ಸಾಹಸದ ಕಥೆಗಳನ್ನು ಹಂಚಿಕೊಳ್ಳುತ್ತಿದ್ದರು. ಹಾಗಾಗಿ ''''''''ಪದ್ಮಶ್ರೀ ''''''''ಪ್ರಶಸ್ತಿ'''''''' ಘೋಷಣೆಯಾದ ಕ್ಷಣವೇ ಅಭಿನಂದನೆ ಹೇಳಲು ಅವರ ಕಾರ್ಯಾಗಾರ ಆಯಶ್ಶಿಲ್ಪಕ್ಕೆ ಧಾವಿಸಿದೆ. ಅಭಿನಂದನೆಗೆ ಉತ್ತರವಾಗಿ ಮೊದಲು ಹೇಳಿದ ಅವರ ಮಾತು ಒಬ್ಬ ಸಂತ ಹೇಳುವ ಹೇಳಿದಂತಿತ್ತು. ಅಲ್ಲ, ಅದು ಗಿರೀಶನೆಂಬ ಸಂತನೇ ಹೇಳಿದ್ದು. ''''''''ಏನನ್ನಿಸುತ್ತದೆ ಗಿರೀಶ್‌?'''''''' ಎಂಬ ನನ್ನ ಪ್ರಶ್ನೆಗೆ ಊಹೆಗೂ ನಿಲುಕದ ಆಧ್ಯಾತ್ಮಿಕ ಉತ್ತರ ಅದಾಗಿತ್ತು. ಗಿರೀಶರು ತಾಳ್ಮೆ ತುಂಬಿದ ಹೃದಯದಲ್ಲಿ ಹೇಳಿದರು.

‘ಪ್ರಶಸ್ತಿಯ ವಿಷಯ ಇರಲಿ. ನನ್ನ ಪ್ರೇಮ ತುಂಬಿದ ಹೃದಯ ಹೇಳುತ್ತಿದೆ, ನನ್ನ ಸೇತುವೆಯ ಮೇಲಿನಿಂದ ನದಿ ದಾಟುವ ಪ್ರತಿಯೊಬ್ಬನೂ ನನಗೆ ಶ್ರೀರಾಮ. ಪ್ರತಿಯೊಬ್ಬಾಕೆಯೂ ಸೀತಾಮಾತೆ. ನನ್ನ ಜೊತೆಯಲ್ಲಿ ಸೇತುವೆಯ ಸವಾಲಿನ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳೆಲ್ಲಾ ನನ್ನ ದೇವರುಗಳು. ನನ್ನ ವರ್ಕ್ ಶಾಪ್ ಮತ್ತು ಸೇತುವೆ ಕಟ್ಟುವಾಗ ನದಿಯ ಬದಿಯಲ್ಲಿ ಹಾಕುವ ಟೆಂಟುಗಳು ನನ್ನ ಪೂಜಾ ಮಂದಿರಗಳು. ಸೇತುವೆ ರಚನೆಯ ಕಾಯಕವೇ ನನ್ನ ರಾಷ್ಟ್ರ ದೇವರಿಗೆ ಸಲ್ಲಿಸುವ ಪೂಜೆ’ ಇದು ಗಿರೀಶರ ಅಂತರಂಗದ ಮಾತು. ಸೇತುವೆಗಳ ಮೂಲಕ ಜನರನ್ನು ಹೊಳೆ ದಾಟಿಸುವ ಈ ಅವ್ಯಕ್ತ ಅಂಬಿಗನ ಹೃದಯ ಅದೆಷ್ಟು ನಿರ್ಮಲವಾದದ್ದು ಎನ್ನುವುದಕ್ಕೆ ಈ ಮಾತೇ ಸಾಕ್ಷಿ. ಜಾತಿಮತ ಭೇದವಿಲ್ಲದೆ ಜನರಲ್ಲಿ ರಾಮ ಸೀತೆಯನ್ನು ಕಾಣುವ ಇವರು ತನ್ನ ಕೆಲಸಗಾರರನ್ನು ಸಹೋದ್ಯೋಗಿಗಳೆಂದು ಗುರುತಿಸುತ್ತಾರೆನ್ನುವುದು ಅದೆಂತಹ ಉದಾತ್ತತೆ! ಇವರ ಮಾನವೀಯತೆಗೆ ಬೇರೇನು ಸಾಕ್ಷಿ ಬೇಕು? ತೂಗು ಸೇತುವೆ ಎಂಬುದು ಗ್ರಾಮೀಣ ಸಂಪರ್ಕದ ಒಂದು ಹೊಸ ಶೋಧ. ಬೇಸಿಗೆಯಲ್ಲಿ ಸಪೂರ ಧಾರೆಗಳಾಗಿ ಹರಿಯುವ ನದಿಗಳಲ್ಲಿ ಮಳೆಗಾಲದಲ್ಲಿ ಪ್ರವಾಹ ಉಕ್ಕಿ ಹರಿಯುವಾಗ ಹೊಳೆ ದಾಟಲಾಗದೆ ನದಿಯ ಇಕ್ಕೆಲಗಳಲ್ಲಿರುವವರು ಪೂರ್ಣ ಸಂಪರ್ಕ ಕಳೆದುಕೊಳ್ಳುತ್ತಾರೆ. ಆಗ ನೆರವಿಗೆ ಬರುವುದು ದೋಣಿ ಅಥವಾ ತೆಪ್ಪ. ಅವುಗಳನ್ನೇರಿ ದಾಟುವುದೆಂದರೆ ಕೆಲವು ಬಾರಿ ಜೀವ ಕೈಯಲ್ಲಿ ಹಿಡಿದು ಸಾಗುವುದೇ ಆಗುತ್ತದೆ. ಆದರೆ ತೂಗು ಸೇತುವೆಗಳು ಈ ಆತಂಕವನ್ನು ನೀಗಿಸುವೆ. ಯಾವು ಯಾವುದೋ ಊರುಗಳಿಂದ ತೂಗು ಸೇತುವೆ ನಿರ್ಮಿಸುವಂತೆ ಆಹ್ವಾನ ಬಂದಾಗ ಗಿರೀಶರು ಅದನ್ನು ಒಂದು ಸವಾಲಾಗಿಯೇ ಸ್ವೀಕರಿಸುತ್ತಾರೆ. ಅವರನ್ನು ಸೇತುವೆ ಕಟ್ಟುವಂತೆ ಹೊರಡಿಸುವುದು ಲಾಭದ ಆಕರ್ಷಣೆಯಲ್ಲ. ಕೀರ್ತಿಯ ಕಾಮನೆ ಅಲ್ಲ. ಬದಲಾಗಿ ಬಡವರ - ಅಸಹಾಯಕರ ಪ್ರೀತಿ.ತೂಗು ಸೇತುವೆಗಳ ಯುಗ

ನದಿ ಪಾತ್ರದ ಇಕ್ಕೆಲಗಳಲ್ಲಿ ಕೃಷಿ ಸಂಸ್ಕೃತಿಯ ವಿಕಾಸ ಆಗಿರುವುದು ವಿಶ್ವದಾದ್ಯಂತ ನಡೆದಿರುವ ವಿದ್ಯಮಾನ. ಬೇಸಗೆ ಕಾಲದಲ್ಲಿ ನದಿಯ ಇಕ್ಕೆಲಗಳ ಜನರು ಪರಸ್ಪರ ಸಂಪರ್ಕದಲ್ಲಿರಲು ಪ್ರವಾಹದ ಆತಂಕವಿರುವುದಿಲ್ಲ. ಆದರೆ ಮಳೆಗಾಲದಲ್ಲಿ ಉಕ್ಕಿ ಹರಿಯುವ ನದಿಯ ಪ್ರವಾಹವು ಹಳ್ಳಿಗಳ ನಡುವಿನ ಸಂಪರ್ಕವನ್ನು ಕಡಿದುಬಿಡುತ್ತದೆ. ಹಳ್ಳಿಗಳು ವಸ್ತುಶ: ದ್ವೀಪಗಳಾಗುತ್ತವೆ. ವಿದ್ಯಾರ್ಥಿಗಳು ತಮ್ಮ ಶಾಲೆಗಳಿಗೆ ಹೋಗುವ ದಾರಿಯನ್ನು ಬದಲಾಯಿಸಬೇಕಾಗುತ್ತದೆ. ಕಾಯಿಲೆಗೆ ಒಳಗಾದವರು ಸೂಕ್ತ ಚಿಕಿತ್ಸೆಗಾಗಿ ಪರದಾಡಬೇಕಾಗುತ್ತದೆ. ಇಲಾಖೆಯ ಕೆಲಸಗಳಿಗೆ ಹಾಗೂ ವ್ಯಾಪಾರ ವಹಿವಾಟುಗಳಿಗೆ ಗ್ರಾಮೀಣ ಜನರು ದೂರದ ದಾರಿಗಳನ್ನು ಕ್ರಮಿಸಬೇಕಾಗುತ್ತದೆ. ಪಶು ವೈದ್ಯರು ಹಳ್ಳಿಗೆ ಬಂದು ಹೈನುಗಾರಿಕೆಗೆ ನೆರವಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕರು ಹಳ್ಳಿಗಳಿಗೆ ಭೇಟಿ ನೀಡಿ ಸೂಕ್ತ ಔಷಧ ವಿತರಣೆಯ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಹೀಗಾಗಿ ಮಳೆಗಾಲದ ದಿನಗಳೆಂದರೆ ಭಯಾನಕವೆನಿಸುವ ಪರಿಸ್ಥಿತಿಗೆ ಅನೇಕ ಹಳ್ಳಿಗಳು ಪಕ್ಕಾಗುತ್ತವೆ. ಇಂತಹ ಭಯವನ್ನು ಹೋಗಲಾಡಿಸುವ ಒಂದು ಸಾಧ್ಯತೆಯ ಬೆಳಕು ಕಂಡದ್ದು ತೂಗು ಸೇತುವೆಯ ನಿರ್ಮಾಣದಲ್ಲಿ. ಅದನ್ನು ಮಾಡಬಲ್ಲ ಒಬ್ಬ ಕುಶಲಿಗ ನಮ್ಮ ನಡುವೆ ಮೂಡಿಬಂದದ್ದು ಸುಳ್ಯದ ಒಂದು ಭಾಗ್ಯ. ಗಿರೀಶರು ನಿರ್ಮಿಸಿರುವ 128 ತೂಗು ಸೇತುವೆಗಳ ಫಲಾನುಭವಿಗಳು ಲಕ್ಷಾಂತರ ಮಂದಿ ಇದ್ದಾರೆ. ಸಾಮಾಜಿಕ ಸೇವಾ ಚಟುವಟಿಕೆಗಳುರೋಟರಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯ ಸುಳ್ಯ ಘಟಕದ ಸದಸ್ಯನಾಗಿ 1976ರಲ್ಲಿ ಸೇರಿದ ಗಿರೀಶರು ರೋಟರಿ ತತ್ವಗಳಿಗೆ ಅನುಸಾರವಾಗಿ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. 1988 - 89ರಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾಗಿದ್ದ ಅವರು ಮುಂದೆ ಅದರ ಯುವ ಘಟಕವಾದ ರೋಟರ್ಯಾಕ್ಟ್ ಕ್ಲಬ್ ನ ಮಾರ್ಗದರ್ಶಕರಾಗಿ ಯುವ ಜನರಲ್ಲಿ ಸೇವೆಯ ಬೀಜಾರೋಪಣ ಮಾಡಿದರು. ರೋಟರಿ ಕ್ಲಬ್ ನಡೆಸಿದ ಉಚಿತ ನೇತ್ರ ಚಿಕಿತ್ಸಾ ಶಿಬಿರ, ಪೋಲಿಯೋ ಫಲ್ಸ್ ಕಾರ್ಯಕ್ರಮಗಳು, ಚಾರಣಗಳು ಮುಂತಾಗಿ ಗಿರೀಶರು ಸಕ್ರಿಯ ಭಾಗಾಳುವಾಗಿ ದುಡಿದಿದ್ದಾರೆ.ಹೋಂ ಗಾರ್ಡ್ಸ್ ಘಟಕದವರು ನೀಡುತ್ತಿರುವ ಸ್ವಯಂಸೇವಾ ಕಾರ್ಯಗಳಿಂದ ಆಕರ್ಷಿತರಾದ ಗಿರೀಶರು 1984ರಲ್ಲಿ ಸುಳ್ಯದ ಹೋಂ ಗಾರ್ಡ್ಸ್ ಘಟಕವನ್ನು ಸೇರಿ ಪ್ಲಾಟೂನ್ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇಲ್ಲಿ ಹೆಚ್ಚಿನ ತರಬೇತಿ ಪಡೆದ ಅವರು ಎರಡು ಚಿನ್ನದ ಪದಕಗಳನ್ನು ಆಫೀಸರ್ಸ್ ತರಬೇತಿ ಹಾಗೂ ಪ್ರಥಮ ಚಿಕಿತ್ಸೆ ತರಬೇತಿಗಾಗಿ ಪಡೆದಿದ್ದಾರೆ. ಸುಳ್ಯದಲ್ಲಿ ಹೋಂ ಗಾರ್ಡ್ಸ್ ಘಟಕದ ಸದಸ್ಯರ ಸಂಖ್ಯೆಯನ್ನು 40 ರಿಂದ 130ಕ್ಕೆ ಹೆಚ್ಚಿಸಿದ ಅವರು ಮುಂದೆ ಕಂಪೆನಿ ಕಮಾಂಡರ್ ಹಾಗೂ ಘಟಕಾಧಿಕಾರಿಯಾಗಿ ಭಡ್ತಿ ಪಡೆದು 2008ರಲ್ಲಿ ಹೋಂ ಗಾರ್ಡ್ಸ್ ನಿಂದ ನಿವೃತ್ತರಾದರು. ತನ್ನ ಅಧಿಕಾರಾವಧಿಯಲ್ಲಿ ಗಿರೀಶರು ಪೊಲೀಸ್ ಇಲಾಖೆಗೆ ಸುರಕ್ಷಾ ಕಾರ್ಯಗಳಲ್ಲಿ ಸಾಕಷ್ಟು ನೆರವು ನೀಡಿದ್ದಾರೆ.ತಾಂತ್ರಿಕ ಶಿಕ್ಷಣ ಸಂಸ್ಥೆಗಳೊಂದಿಗೆ ಸಲಹೆಗಾರರಾಗಿ ಸಂಬಂಧ ಹೊಂದಿರುವ ಗಿರೀಶರು ಸಂಶೋಧನೆ ಮತ್ತು ತರಬೇತಿ ಕಾರ್ಯಗಳಲ್ಲಿ ಯೋಜನೆ ಹಾಗೂ ಉಪನ್ಯಾಸಗಳನ್ನು ನೀಡಿದ್ದಾರೆ. ಸೌತ್ ಕೆನರಾ ಹಾಗೂ ಕೊಡಗು ಜಿಲ್ಲಾ ಇಂಜಿನಿಯರ್ ಗಳ ಸಂಘದ ಸದಸ್ಯರಾಗಿರುವ ಗಿರೀಶರು ಪುತ್ತೂರಿನ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿದ್ದರು.ತೂಗು ಸೇತುವೆಗಳಲ್ಲಿ ಗಿರೀಶರ ಯಶೋಗಾಥೆಯನ್ನು ತಿಳಿದ ಸ್ವಿಜರ್ಲ್ಯಾಂಡಿನ ಟೋನಿ ಎಂಬವರು ಬಂದು ಭೇಟಿಯಾದರು. ಟೋನಿಯವರು ಕೂಡ ದಕ್ಷಿಣ ಅಮೆರಿಕ, ಕಾಂಬೋಡಿಯಾ, ಲಾವೋಸ್ ಹಾಗೂ ವಿಯೆಟ್ನಮ್ ಗಳಲ್ಲಿ ಕಡಿಮೆ ವೆಚ್ಚದ ಗ್ರಾಮೀಣ ಸಂಪರ್ಕ ಸೇತುವೆಗಳನ್ನು ನಿರ್ಮಿಸಿದ್ದರೂ ಟೋನಿಯವರ ಮಾತುಗಳಲ್ಲಿ ಹೇಳುವುದಾದರೆ ಗಿರೀಶರ ಸೇತುವೆಗಳು ಹೆಚ್ಚು ದೀರ್ಘ, ಸುಭದ್ರ ಹಾಗೂ ದೀರ್ಘಾವಧಿ ಬಾಳ್ವಿಕೆಯುಳ್ಳವುಗಳು. ಅದಕ್ಕಿಂತ ಹೆಚ್ಚಾಗಿ ಸುಮಾರು 25 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಜನರ ಸಹಾಯಕ್ಕೆ ನಿಂತಿರುವ ಗಿರೀಶರು ತನಗೆ ಅಣ್ಣನಂತೆ ಎಂಬುದಾಗಿ ಟೋನಿ ಹೇಳಿದ್ದಾರೆ.ಅವರಿಗೆ ಅದೆಷ್ಟೋ ಪ್ರಶಸ್ತಿಗಳು ಅರಸಿ ಬಂದಿವೆ. 2016 ರಲ್ಲಿ ಕನ್ನಡಪ್ರಭ- ಸುವರ್ಣ ನ್ಯೂಸ್‌ನ ಅಸಮಾನ್ಯ ಕನ್ನಡಿಗ ಪ್ರಶಸ್ತಿ ಅವರ ಮುಡಿಗೇರಿತ್ತು. ಇಂದು ಗಿರೀಶ ಭಾರದ್ವಾಜರು ಸುಳ್ಯಕ್ಕೊಬ್ಬ ಸೆಲೆಬ್ರಿಟಿ. ಮುಖ ತುಂಬಾ ನಗು, ವಿನಯಪೂರಿತ ಮಾತು, ಎಲ್ಲರನ್ನು ಅಪ್ಪಿ, ಸ್ನೇಹ ವ್ಯಕ್ತಪಡಿಸುವಲ್ಲಿ ಧಾರಾಳಿ ತೆಗಳುವವರಾಗಲೀ ದೂರುವವರಾಗಲೀ ಇಲ್ಲದ ಅಜಾತಶತ್ರುವಿನ ಮಟ್ಟಕ್ಕೆ ಏರಿದ್ದಾರೆ. ಗಿರೀಶರ ಹತ್ತಿರದ ಪರಿಚಯ ನನಗಿದೆ ಎನ್ನುವವರ ಸಂಖ್ಯೆ ಹೆಚ್ಚುತ್ತಿದೆ.। ಚಂದ್ರಶೇಖರ ದಾಮ್ಲೆ, ಸುಳ್ಯ