ಮಲೇಬೆನ್ನೂರು: ಶಿಕ್ಷಕಿಯೊಬ್ಬರು ಭಸ್ಕಿ ಹೊಡೆಸಿದ ಪರಿಣಾಮ ಒಂಭತ್ತು ವಿದ್ಯಾರ್ಥಿನಿಯರು ಎರಡು ದಿನಗಳು ನರಳಾಡಿ ಮಂಗಳವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಘಟನೆ ಸಮೀಪದ ಹರಿಹರ ತಾಲೂಕು ಹಿರೇಹಾಲಿವಾಣ ಗ್ರಾಮದಲ್ಲಿ ನಡೆದಿದೆ. ಹಿರೇಹಾಲಿವಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿಯೊಬ್ಬರು ಒಂಭತ್ತನೇ ತರಗತಿ ಮಕ್ಕಳಿಗೆ ಮನೆ ಗೆಲಸ (ಹೋಮ್‌ವರ್ಕ್) ನೀಡಿದ್ದು, ಆ ಕೆಲಸವನ್ನು ವಿದ್ಯಾರ್ಥಿಗಳು ಮಾಡದ ಕಾರಣ ಸೋಮವಾರ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ೨೫೦ ಭಸ್ಕಿ ಹೊಡಿರಿ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಭಸ್ಕಿ ಹೊಡೆಯುವಾಗ ವಿದ್ಯಾರ್ಥಿನಿಯರು ಎಣಿಕೆ ಮಾಡಿದರೆ, ವಿದ್ಯಾರ್ಥಿನಿಯರು ಭಸ್ಕಿ ಹೊಡೆದಾಗ ವಿದ್ಯಾರ್ಥಿಗಳು ಎಣಿಕೆ ಮಾಡಿದ್ದಾರೆ. ೬೦ ಭಸ್ಕಿ ಹೊಡೆಯುವಾಗಲೇ ಐವರು ವಿದ್ಯಾರ್ಥಿನಿಯರು ತಲೆ ತಿರುಗಿ ಬಿದ್ದಿದ್ದಾರೆ. ಆದರೂ ಆ ಶಿಕ್ಷಕಿ ತನ್ನ ಶಿಕ್ಷೆ ಮುಂದುವರಿಸಿದ್ದು ಭಸ್ಕಿ ಮುಂದುವರಿಸಿದ್ದಾರೆ. ಉಳಿದ ವಿದ್ಯಾರ್ಥಿನಿಯರೂ ೨೫೦ ಭಸ್ಕಿ ಹೊಡೆದು ಹಾಗೇ ಮಲಗಿದ್ದಾರೆ. ಹೇಗೋ ಚೇತರಿಸಿಕೊಂಡು ಶಾಲೆಯಿಂದ ಮನೆಗೆ ತೆರಳಿದ್ದಾರೆ.ಭಸ್ಕಿ ಹೊಡೆದ ಕೆಲ ವಿದ್ಯಾರ್ಥಿನಿಯರ ಎರಡೂ ಕಾಲಿನ ತೊಡೆ, ಮೊಣಕಾಲುಗಳಲ್ಲಿ ನೋವು ಕಾಣಿಸಿಕೊಂಡು ರಾತ್ರಿಯೆಲ್ಲಾ ನರಳಿದ್ದಾರೆ, ರಾತ್ರಿ ಊಟ ಬಿಟ್ಟು ನೋವು ಅನುಭವಿಸಿದ್ದಾರೆ. ವಿದ್ಯಾರ್ಥಿನಿಯರನ್ನು ಮಲೇಬೆನ್ನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮಂಗಳವಾರ ಚಿಕಿತ್ಸೆಗೆ ಕರೆತಂದಾಗ ಘಟನೆ ಬಯಾಲಾಗಿದೆ.
೯ನೇ ತರಗತಿಯ ಸಹನಾ, ಕವನಾ, ಕೆ.ಟಿ.ಸಹನಾ, ನಂದಿನಿ, ಶೃತಿ, ಮಾನಸ, ಸಹನಾ, ಶುಭಶ್ರೀ ಮತ್ತು ಸಿಂಚನಾ ಎಂಬ ಒಂಭತ್ತು ವಿದ್ಯಾರ್ಥಿನಿಯರು ನರಳಾಡುತ್ತಲೇ ವೈದ್ಯರ ಬಳಿ ಘಟನೆಯ ಸತ್ಯಾಂಶ ತಿಳಿಸಿದರು. ವೈದ್ಯರು ನೀಡಿದ ಇಂಜೆಕ್ಷನ್, ಮಾತ್ರೆ ಪಡೆದ ಆರು ವಿದ್ಯಾರ್ಥಿನಿಯರು ಮನೆಗೆ ತೆರಳಿದರೆ. ಸಹನಾ, ಕವನಾ, ಕೆ.ಟಿ.ಸಹನಾ ಎಂಬುವರು ನಡೆಯಲು ಬಾರದೇ ಆಸ್ಪತ್ರೆಯಲ್ಲಿ ಗ್ಲೂಕೋಸ್ ಹಾಕಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಡಾ.ಲಕ್ಷ್ಮಿದೇವಿ ತಿಳಿಸಿದರು.ಘಟನೆ ಹರಡುತ್ತಲೇ ಎಸ್‌ಡಿಎಂಸಿ ಪದಾಧಿಕಾರಿಗಳು, ಪೋಷಕರು ಆಸ್ಪತ್ರೆಗೆ ಧಾವಿಸಿ ವಿದ್ಯಾರ್ಥಿನಿಯರಿಗೆ ಧೈರ್ಯದ ಮಾತುಗಳನ್ನು ಹೇಳುತ್ತಿದ್ದರು. ಭಸ್ಕಿ ಹೊಡೆಸಿದ ಶಿಕ್ಷಕಿಯವರಿಗೂ ಆರೋಗ್ಯ ಸರಿಯಿಲ್ಲ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯ ಶಿಕ್ಷಕ ಹನುಮಂತಪ್ಪ ತಿಳಿಸಿದರು. ಅನಾರೋಗ್ಯದ ವಿಜ್ಞಾನ ಶಿಕ್ಷಕಿಯನ್ನು ತಕ್ಷಣವೇ ಬೇರೆಡೆ ವರ್ಗ ಮಾಡಿ ಎಂದು ಎಸ್ಡಿಎಂಸಿ ಅಧ್ಯಕ್ಷ ಅಂಜಿನಪ್ಪ ಒತ್ತಾಯಿಸಿದರು. ದೈಹಿಕ ಶಿಕ್ಷಕಿ ಗೀತಾ ಮಕ್ಕಳ ಕಾಳಜಿಯಿಂದ ಆಸ್ಪತ್ರೆಯಲ್ಲಿ ಇರುವ ದೃಶ್ಯ ಕಂಡುಬಂದಿತು.