ಕೆಲವರಿಗೆ ಭಾವನೆಗಳ ಜೊತೆ ಆಟವಾಡಿ ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಉದ್ಯೋಗವಾಗಿದೆ. ಸಮಾಜ ಕಟ್ಟುವುದಾಗಲಿ, ಜನರನ್ನು ಕೂಡಿಸುವುದಾಗಲಿ ಅವರಿಗೆ ಬೇಡ ಎಂದು ಕಿಡಿಕಾರಿದರು.
ಹಾಸನ: ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕೆಲವರಿಗೆ ಭಾವನೆಗಳ ಜೊತೆ ಆಟವಾಡಿ ಸಮಾಜ ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಉದ್ಯೋಗವಾಗಿದೆ. ಸಮಾಜ ಕಟ್ಟುವುದಾಗಲಿ, ಜನರನ್ನು ಕೂಡಿಸುವುದಾಗಲಿ ಅವರಿಗೆ ಬೇಡ ಎಂದು ಕಿಡಿಕಾರಿದರು.
ಬಾನು ಮುಷ್ತಾಕ್ ಅವರ ಸಾಧನೆ ಹೊಗಳಿದ ಅವರು, ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಕೀರ್ತಿ ತಂದಿದ್ದಾರೆ. ಹಾಸನದಲ್ಲಿ ಜನಪರ, ರೈತರ ಪರ ಹಾಗೂ ಶೋಷಿತ ಮಹಿಳೆಯರ ಪರ ಹೋರಾಟ ಮಾಡಿದ್ದಾರೆ. ಕನ್ನಡಿಗರ ಅಸ್ಮಿತೆ ಮತ್ತು ಗೌರವದ ಸಂಕೇತವಾಗಿದ್ದಾರೆ. ಅವರ ಸಾಧನೆಯನ್ನು ಜಾತಿ ಧರ್ಮದ ಕಣ್ಣಿನಿಂದ ನೋಡಿ ಕನ್ನಡಕ್ಕೆ ಸಿಕ್ಕಿರುವ ಗೌರವವನ್ನು ಕಳೆಯಬೇಡಿ. ಸಮಾಜ ಒಡೆಯುವುದು ಒಳ್ಳೆಯ ಉದ್ದೇಶ ಇರುವವರು ಮಾಡುವ ಕೆಲಸವಲ್ಲ. ಮೊಸರಿನಲ್ಲಿ ಕಲ್ಲು ಹುಡುಕಲು ಹೋದರೆ ಎಲ್ಲದರಲ್ಲೂ ಕಲ್ಲು ಸಿಗುತ್ತದೆ. ಟೀಕೆ ಮಾಡಲಿ, ಸಲಹೆ ನೀಡಲಿ? ಅದರಲ್ಲಿ ತೊಂದರೆಯಿಲ್ಲ. ಆದರೆ ಕೆಲವರಿಗೆ ಟೀಕೆ ಮಾಡುವುದೇ ಉದ್ಯೋಗವಾಗಿದೆ ಎಂದು ಟೀಕಿಸಿದರು.ಧರ್ಮಸ್ಥಳದ ವಿಚಾರದಲ್ಲಿ ಬಿಜೆಪಿ ಹೋರಾಟ ವಿಚಾರಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿ, “ಬಿಜೆಪಿಯವರಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಭಾವನಾತ್ಮಕ ವಿಷಯಗಳೇ ಉಳಿದಿವೆ. ಸೌಜನ್ಯ ಪ್ರಕರಣದಲ್ಲಿ ಎಸ್ಐಟಿ ರಚನೆ ಮಾಡಿದವರೇ ಬಿಜೆಪಿಯವರು. ಈಗ ಅದನ್ನೇ ವಿರೋಧಿಸಿ ರಾಜಕೀಯ ಮಾಡುತ್ತಿದ್ದಾರೆ. ಇದು ಡೊಂಗಿ ರಾಜಕೀಯ. ಎಸ್ಐಟಿ ಪ್ರಮಾಣಿಕವಾಗಿ ತನಿಖೆ ನಡೆಸುತ್ತಿದೆ. ಆದರೆ ಅದನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.
ಸರ್ಕಾರದ ವಿರುದ್ಧ ಮಾತನಾಡಲು ಬೇರೆ ವಿಷಯವಿಲ್ಲದ ಕಾರಣ, ಕಳ್ಳನಿಗೊಂದು ಪಿಳ್ಳೆ ನೇವಾ ಅಂತ ಈ ವಿಷಯ ಹಿಡಿದುಕೊಂಡಿದ್ದಾರೆ. ಗೃಹ ಸಚಿವರು ಈಗಾಗಲೇ ಅಚ್ಚುಕಟ್ಟಾದ ಹೇಳಿಕೆ ನೀಡಿದ್ದಾರೆ. ತನಿಖೆಯ ವರದಿ ಬರುವವರೆಗೆ ಎಲ್ಲರೂ ಕಾಯಬೇಕು. ಸೌಜನ್ಯ ಪ್ರಕರಣದಲ್ಲಿ ಯಾರಾರು ಬಿಜೆಪಿ ನಾಯಕರು ಎಸ್ಐಟಿ ತನಿಖೆ ಆಗಲೆಂದು ಆಗ್ರಹ ಮಾಡಿದ್ದಾರೆ, ಮುಂದೆ ಪಟ್ಟಿ ತೋರಿಸುವುದಾಗಿ ಹೇಳಿದರು. ನಾವು ಸರ್ಕಾರದ ಪ್ರತಿನಿಧಿಯಾಗಿ ಬಂದಿದ್ದೇವೆ. ಜನರ ಸಮಸ್ಯೆ ಬಗ್ಗೆ ಹೆಚ್ಚು ಒತ್ತು ಕೊಡುತ್ತೇವೆ ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.