ಕನ್ನಡಪ್ರಭ ವಾರ್ತೆ ಭಟ್ಕಳ
ಪೊಲೀಸರ ಸರ್ಪಗಾವಲಿನಲ್ಲಿ ಮುರಿನಕಟ್ಟೆ ಪ್ರದೇಶವಿದೆ. ಮುರಿನಕಟ್ಟೆ ಪ್ರದೇಶದ ಸುತ್ತಲೂ ಬ್ಯಾರಿಕೇಡ್ ಹಾಕಲಾಗಿದೆ. ಯಾರಿಗೂ ಒಳಗೆ ಬಿಡುತ್ತಿಲ್ಲ. ಬಂದೋಬಸ್ತ್‌ಗಾಗಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದಲೂ ಪೊಲೀಸ ಅಧಿಕಾರಿಗಳು, ಪೊಲೀಸರು, ಕೆಎಸ್‌ಆರ್‌ಪಿ ತಂಡಗಳನ್ನು ಕರೆಯಿಸಲಾಗಿದೆ. ಮುರಿನಕಟ್ಟೆಯಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟೆ ಧ್ವಂಸಗೊಂಡ ಬಳಿಕ ಆಕ್ರೋಶ ಹೆಚ್ಚಾಗಿದೆ. ಈಗಾಗಲೇ ಸರಕಾರದ ಮೇಲೆ ಬಿಜೆಪಿ ಮುಗಿ ಬಿದ್ದಿದೆ. ನ್ಯಾಯ ಕೇಳಲು ಹೋದವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣವನ್ನು ವಾಪಾಸ್ ಪಡೆಯಬೇಕು ಎಂದು ಬಿಜೆಪಿ ಸಹಿತ ಹಿಂದೂ ಸಂಘಟನೆಗಳು ಆಗ್ರಹಿಸಿದೆ.
ಇನ್ನೊಂದು ಕಡೆ ಕಟ್ಟೆ ಧ್ವಂಸ ಮಾಡುವಾಗ ಸಾವಿರಾರು ಜನರು ಇದ್ದು, ಧ್ವಂಸ ಮಾಡಿದವರು ಮತ್ತು ಅಲ್ಲಿದ್ದ ಪ್ರಮುಖರ ಮೇಲೆ ಕೇಸು ದಾಖಲಿಸಿ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದೆ. ಈ ಬಗ್ಗೆ ಮೇ 29ಕ್ಕೆ ಬೃಹತ್ ಪ್ರತಿಭಟನೆ ಕೂಡ ನಡೆಸಲಾಗುತ್ತಿದೆ. ಬಕ್ರೀದ್ ಕೂಡ ಇದೇ ಸಂದರ್ಭ ಬಂದಿದ್ದರಿಂದ ಪಟ್ಟಣದಲ್ಲಿ ಎಲ್ಲಿ ನೋಡಿದರೂ ಪೊಲೀಸರೇ ಕಾಣ ಸಿಗುತ್ತಾರೆ. ಸೋಮವಾರ ಸಂಜೆ ಜನತೆಗೆ ಧೈರ್ಯ ತುಂಬಲು ಪಟ್ಟಣದಲ್ಲಿ ಪೊಲೀಸರ ಪಥ ಸಂಚಲನ ನಡೆಸಲಾಗಿತ್ತು. ಮುರಿನಕಟ್ಟೆಯ ಕಟ್ಟೆ ಧ್ವಂಸ ವಿಚಾರ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿದೆ.ಭಟ್ಕಳ ಪಟ್ಟಣದಲ್ಲಿ ಮುರಿನಕಟ್ಟೆ ವಿವಾದದ ಬಳಿಕ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ಇದ್ದು, ವಿವಾದದ ಅಂತ್ಯ ಯಾವಾಗ ಎಂದು ಕಾದು ನೋಡಬೇಕು. ಮಂಗಳವಾರ ಸಂಜೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರು ಮುರಿನಕಟ್ಟೆ ಪ್ರದೇಶ ವೀಕ್ಷಿದ್ದಾರೆ. ಜಿಲ್ಲಾಧಿಕಾರಿ ಮುರಿನಕಟ್ಟೆ ಮತ್ತು ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪ್ರಮುಖ ಮುಖಂಡರ ಜೊತೆ ಸಭೆ ನಡೆಸಿ ಚರ್ಚೆ ನಡೆದ್ದಾರೆ ಎಂದು ತಿಳಿದು ಬಂದಿದೆ. ಐಜಿಪಿ ಅಮಿತ್ ಸಿಂಗ್ ಕೂಡ ಭಟ್ಕಳಕ್ಕೆ ಆಗಮಿಸಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ. ಇವರೂ ಕೂಡ ಪ್ರಮುಖರ ಜೊತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇ 24 ರಂದು ಮುರಿನಕಟ್ಟೆಯಲ್ಲಿ ಕರ್ತವ್ಯನಿರತ ಇನ್‌ಸ್ಪೆಕ್ಟರ್‌ಗೆ ಅಡ್ಡಿಪಡಿಸಿ, ಹಲ್ಲೆ ಮಾಡಿದ 22 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.