ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಗೋಲ್‌ಮಾಲ್ ನಡೆದಿದ್ದು, ಒಂದು ಸರ್ಕಾರಿ ಹುದ್ದೆಯನ್ನು ಬರೋಬ್ಬರಿ 80 ಲಕ್ಷ ರು.ಗೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ದೂರು ಕೇಳಿಬಂದಿದೆ.

ಮೊಹಮ್ಮದ್ ಆರಿಫ್ ಎಂಬ ಮಧ್ಯವರ್ತಿಯು ವಿದ್ಯಾರ್ಥಿ ಸಂಘಟನೆ ಮುಖಂಡ ಕಾಂತಕುಮಾ‌ರ್ ಹಾಗೂ ಮತ್ತೊಬ್ಬ ಯುವಕನ ಜತೆ ಫೋನ್ ಕರೆಯಲ್ಲಿ ನೇರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.


ರಾಜ್ಯದಲ್ಲಿ ಒಟ್ಟು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ (342 ಸಾಮಾನ್ಯ + 58 ಬ್ಯಾಕ್ ಲಾಗ್) ಕಳೆದ ಜ.8ರಂದು ಲಿಖಿತ ಪರೀಕ್ಷೆ ನಡೆದಿತ್ತು. ಜು.17ರಂದು ಇದರ ಫಲಿತಾಂಶ ಹೊರಬಿದ್ದಿತ್ತು. ಆದರೆ, ಫಲಿತಾಂಶ ನೋಡಿದ ನೈಜ ಆಕಾಂಕ್ಷಿಗಳು ದಿಗ್ಭ್ರಮೆಗೊಳಗಾಗಿದ್ದಾರೆ. ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಶೇ.60ರಷ್ಟು ಹುದ್ದೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ವಿಡಿಯೋದಲ್ಲಿದೆ ಮಧ್ಯವರ್ತಿಯ ಧ್ವನಿ!:

ಈ ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುವಂತೆ ಮಧ್ಯವರ್ತಿಗಳ ಡೀಲಿಂಗ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮೊಹಮ್ಮದ್ ಆರಿಫ್ ಎಂಬ ಮಧ್ಯವರ್ತಿಯು ವಿದ್ಯಾರ್ಥಿ ಸಂಘಟನೆಯ ಮುಖಂಡ ಕಾಂತಕುಮಾ‌ರ್ ಎಂಬುವವರ ಜತೆ ಮೊಬೈಲ್‌ನಲ್ಲಿ ಮಾತನಾಡಿ ನೇರವಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಕಾಂತಕುಮಾರ್‌ ಹಾಗೂ ಮತ್ತೊಬ್ಬ ಯುವಕ ಮೊಹಮ್ಮದ್‌ ಆರಿಫ್‌ ಎಂಬಾತನೊಂದಿಗೆ ಫೋನ್‌ನಲ್ಲಿ ಮಾತನಾಡುವಾಗ ಅದನ್ನು ವಿಡಿಯೋ ಮಾಡಿಕೊಳ್ಳಲಾಗಿದ್ದು, ಅದರ ವಿಡಿಯೋ ಈಗ ವೈರಲ್ ಆಗಿದೆ. ಒಂದೊಂದು ಹುದ್ದೆಗೂ ಲಕ್ಷ ಲಕ್ಷ ಹಣಕ್ಕೆ ಡೀಲ್‌ ನಡೆದಿರುವುದು ಈ ವಿಡಿಯೋದಿಂದ ಸ್ಪಷ್ಟವಾಗಿದೆ.

ವಿಧಾನಸೌಧ ಠಾಣೆ ಮೆಟ್ಟಿಲೇರಿದ ಅಭ್ಯರ್ಥಿಗಳು:

ಪರೀಕ್ಷೆ ಬರೆದು ಹಗಲಿರುಳೂ ಕಷ್ಟಪಟ್ಟಿದ್ದ ಪಶು ವೈದ್ಯಾಧಿಕಾರಿಗಳು (ವೆಟರ್ನರಿ ಡಾಕ್ಟರ್ಸ್) ವಿಡಿಯೋ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದಾರೆ. ಈ ಭಾರೀ ಅಕ್ರಮದ ವಿರುದ್ಧ ಸಿಡಿದೆದ್ದಿರುವ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಬಳಿಕ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದು, ಆದರೆ ಪೊಲೀಸರು ಸೂಕ್ತ ಸಾಕ್ಷ್ಯಾಧಾರ ಒದಗಿಸುವಂತೆ ಸೂಚಿಸಿದ್ದಾರೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರು ಪರೀಕ್ಷೆಗೆ ಅಭ್ಯರ್ಥಿಗಳ ಆಗ್ರಹ:

ಹಣವಿದ್ದವರಿಗೆ ಮಾತ್ರ ಕೆಪಿಎಸ್‌ಸಿಯಲ್ಲಿ ಕೆಲಸ ಸಿಗುವುದಾದರೆ ನಾವೇಕೆ ಓದಬೇಕು ಎಂದು ಪ್ರಶ್ನಿಸಿರುವ ಅಭ್ಯರ್ಥಿಗಳು, ಈಗ ನಡೆದಿರುವ ಇಡೀ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಪಾರದರ್ಶಕವಾಗಿ ಮರು ಪ್ರಕ್ರಿಯೆ ಹಾಗೂ ಮರು ಪರೀಕ್ಷೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

70 ರಿಂದ 80 ಲಕ್ಷ ರು.ಗೆ ಬೇಡಿಕೆ:

ಕೆಪಿಎಸ್‌ಸಿಯಿಂದ ಇತ್ತೀಚೆಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆಯಾಗಿತ್ತು. ಈ ಪೈಕಿ ಸುಮಾರು 450 ಅಭ್ಯರ್ಥಿಗಳನ್ನು ಸಂಪರ್ಕಿಸಿರುವ ಮಧ್ಯವರ್ತಿಗಳು 70 ರಿಂದ 80 ಲಕ್ಷ ರು.ಗೆ ಹಣ ನೀಡಿದರೆ ನಿಮ್ಮ ಹೆಸರು ಅಂತಿಮ ಪಟ್ಟಿಯಲ್ಲಿ ಇರುವಂತೆ ಮಾಡಲಾಗುವುದು ಎಂದು ಆಮಿಷವೊಡ್ಡಿದ್ದಾರೆ. ಕೆಲ ಅಭ್ಯರ್ಥಿಗಳಿಂದ ಮುಂಗಡವಾಗಿ ಹಣ ಪಡೆದಿರುವುದೂ ಬೆಳಕಿಗೆ ಬಂದಿದೆ. ಮಧ್ಯವರ್ತಿಗಳಿಗೆ ನಮ್ಮ ಫೋನ್‌ ನಂಬರ್‌ಗಳು ಹೇಗೆ ಸಿಕ್ತು? ಇದರ ಹಿಂದೆ ಕೆಪಿಎಸ್‌ಸಿ ಅಧಿಕಾರಿಗಳ ಕೈವಾಡವಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

ಶಿವಶಂಕರಪ್ಪ ಕೈವಾಡ?:

ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ಆದಾಯದ ಕುರಿತು ಮರೆಮಾಚುವ ಪ್ರಮಾಣಪತ್ರ ಸಲ್ಲಿಸಿ ತಮ್ಮ ಪುತ್ರಿಗೆ ಉದ್ಯೋಗ ಗಿಟ್ಟಿಸಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಮಾನತಾದ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಕೈವಾಡ ಈ ಹಗರಣದಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ಅವಧಿಯಲ್ಲಿಯೇ ಈ ಭ್ರಷ್ಟಚಾರ ನಡೆದಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.