ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ಆದಾಯದ ಕುರಿತು ವಾಸ್ತವಿಕ ಮಾಹಿತಿ ಮರೆಮಾಚುವ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಯತ್ನಿಸಿದ ಆರೋಪದಲ್ಲಿ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಪುತ್ರಿ ಸುಮಾ ಎಸ್.ಸಾಹುಕಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು : ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಕುಟುಂಬದ ಆದಾಯದ ಕುರಿತು ವಾಸ್ತವಿಕ ಮಾಹಿತಿ ಮರೆಮಾಚುವ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ ಗಿಟ್ಟಿಸಲು ಯತ್ನಿಸಿದ ಆರೋಪದಲ್ಲಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಪುತ್ರಿ ಸುಮಾ ಎಸ್.ಸಾಹುಕಾರ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಬಗ್ಗೆ ಕೆಪಿಎಸ್‌ಸಿ ಕಾರ್ಯದರ್ಶಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ದೂರು ಆಧರಿಸಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದೂರಿನಲ್ಲೇನಿದೆ?:
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿಯಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈ ಹುದ್ದೆಗಳಿಗೆ ಸುಮಾ ಎಸ್. ಸಾಹುಕಾರ್ ಅವರು ಅರ್ಜಿ ಸಲ್ಲಿಸಿ, 3ಬಿ ಮೀಸಲಾತಿ ಕೋರಿದ್ದರು. ಪರೀಕ್ಷೆ ಬರೆದು ಅರ್ಹತಾ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅವರ ಮೂಲ ದಾಖಲೆಗಳ ಪರಿಶೀಲನೆ ನಡೆಸಿದಾಗ ಆದಾಯ ವಿವರಗಳಲ್ಲಿ ತಪ್ಪು ಮಾಹಿತಿ ಸಲ್ಲಿಸಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬಿ ಮೀಸಲಾತಿ ಪ್ರಮಾಣಪತ್ರ
ಅಭ್ಯರ್ಥಿ ಸುಮಾ ಅವರು ಸಲ್ಲಿಸಿದ್ದ 3ಬಿ ಮೀಸಲಾತಿ ಪ್ರಮಾಣಪತ್ರದಲ್ಲಿ ತಮ್ಮ ಕುಟುಂಬದ ಒಟ್ಟು ವಾರ್ಷಿಕ ಆದಾಯ ₹40 ಸಾವಿರ ಎಂದು ನಮೂದಿಸಿದ್ದರು. ಆದರೆ, ಅವರ ತಂದೆ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು 2019 ರಿಂದ ಕೆಪಿಎಸ್‌ಸಿ ಸದಸ್ಯರಾಗಿ ಮಾಸಿಕ ಮೂಲ ವೇತನ ₹2,05,100 ಹಾಗೂ 2021 ರಿಂದ ಕೆಪಿಎಸ್‌ಸಿ ಅಧ್ಯಕ್ಷರಾಗಿ ಮಾಸಿಕ ಮೂಲ ವೇತನ ₹2,25,000 ಪಡೆಯುತ್ತಿದ್ದಾರೆ. ಅದರ ಜೊತೆಗೆ ಇತರೆ ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಈ ವಿಚಾರಗಳನ್ನು ರಾಜ್ಯಪಾಲರಿಗೆ ಸಲ್ಲಿಸಿರುವ ಅವರ ಆಸ್ತಿ ವಿವರಗಳಲ್ಲೂ ಉಲ್ಲೇಖಿಸಲಾಗಿದೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ, ಹಿಂದುಳಿದ ವರ್ಗಗಳ 3ಬಿ ಮೀಸಲಾತಿ ಮತ್ತು ಕೆನೆಪದರ ರಹಿತ ಸೌಲಭ್ಯ ಪಡೆಯಲು ವಾರ್ಷಿಕ ಆದಾಯ ₹8 ಲಕ್ಷ ಒಳಗಿರಬೇಕು. ಆದರೆ, ಅಭ್ಯರ್ಥಿಯ ಕುಟುಂಬದ ಆದಾಯ ಈ ಮಿತಿಗಿಂತ ಹೆಚ್ಚು ಇದೆ. ಈ ಮೂಲಕ ಸುಮಾ ಎಸ್. ಸಾಹುಕಾರ್ ಅವರು ನೈಜವಲ್ಲದ ಆದಾಯ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಸಿ, ಅರ್ಜಿಯ ಘೋಷಣಾ ಕಾಲಂನಲ್ಲಿ ತಪ್ಪು ಮತ್ತು ಸುಳ್ಳು ಹೇಳಿಕೆ ನೀಡಿ ವಾಸ್ತವಿಕ ಮಾಹಿತಿ ಮರೆಮಾಚಿದ್ದಾರೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿ ಸುಮಾ ಎಸ್. ಸಾಹುಕಾರ್ ವಿರುದ್ಧ ಕೇಸ್ ದಾಖಲಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ.

