ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿಗೆ ಭಟ್ಕಳ ಮುಸ್ಲಿಮರ ವಿರೋಧ

KannadaprabhaNewsNetwork | Published : Apr 19, 2025 12:31 AM

ಸಾರಾಂಶ

ವಕ್ಫ್ ಆಸ್ತಿಗಳಾದ ಮಸೀದಿ, ಮದರಸಾ, ಖಬರಸ್ಥಾನಗಳ ನಿರ್ವಹಣೆಯನ್ನು ಸರ್ಕಾರದ ನಿಯಂತ್ರಣಕ್ಕೆ ತರುವ ಈ ಕಾಯ್ದೆ, ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗೆ ಧಕ್ಕೆ ತರುತ್ತದೆ

ಭಟ್ಕಳ: ಕೇಂದ್ರ ಸರ್ಕಾರ ವಕ್ಫ್ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೊಳಸಿದ್ದನ್ನು ತೀವ್ರವಾಗಿ ವಿರೋಧಿಸಿದ ಇಲ್ಲಿನ ಮುಸ್ಲಿಮರು ಶುಕ್ರವಾರ ಮಜ್ಲಿಸೇ ಇಸ್ಲಾಹ್‌ ವ ತಂಝೀಂ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರು ಬೃಹತ್ ಪ್ರತಿಭಟನೆಯನ್ನು ನಡೆಸಿ, ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.

ಮಜ್ಲಿಸೇ ಇಸ್ಲಾಹ್-ವ-ತಂಝೀಮ್ ಸಂಸ್ಥೆಯ ನೇತೃತ್ವದಲ್ಲಿ ಸಾವಿರಾರು ಜನರು ಶುಕ್ರವಾರದ ಪ್ರಾರ್ಥನೆಯ ನಂತರ ತಾಲೂಕು ಆಡಳಿತ ಸೌಧದ ಎದುರು ಸೇರಿ, ಈ ಕಾಯ್ದೆಯನ್ನು ಸಂಪೂರ್ಣ ರದ್ದುಗೊಳಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ತಂಜೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ವಕ್ಫ್ ಆಸ್ತಿಗಳಾದ ಮಸೀದಿ, ಮದರಸಾ, ಖಬರಸ್ಥಾನಗಳ ನಿರ್ವಹಣೆಯನ್ನು ಸರ್ಕಾರದ ನಿಯಂತ್ರಣಕ್ಕೆ ತರುವ ಈ ಕಾಯ್ದೆ, ಮುಸ್ಲಿಂ ಸಮುದಾಯದ ಧಾರ್ಮಿಕ ಸ್ವಾತಂತ್ರ‍್ಯ ಮತ್ತು ಸಂವಿಧಾನಾತ್ಮಕ ಹಕ್ಕುಗಳಿಗೆ ಧಕ್ಕೆ ತರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕಾಯ್ದೆ ಸಂವಿಧಾನದ ೧೪, ೨೫, ೨೬ನೇ ವಿಧಿಗಳನ್ನು ಉಲ್ಲಂಘಿಸುತ್ತದೆ. ಯಾವುದೇ ಕಾರಣಕ್ಕೂ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಬಾರದು. ಈ ಕಾಯ್ದೆಯಿಂದ ಮುಸ್ಲಿಮರ ಹಿತಕ್ಕೆ ಧಕ್ಕೆ ಆಗುತ್ತಿರುವುದರಿಂದ ಕೂಡಲೇ ಕಾಯ್ದೆ ವಾಪಸ್ ಪಡೆದು ಮೊದಲಿದ್ದಂತೆ ಮಾಡಬೇಕು ಎಂದು ಆಗ್ರಹಿಸಿದರು.

ತಂಜೀಮ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ವಕ್ಫ್ ತಿದ್ದುಪಡಿ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ ಮಾತನಾಡಿ, ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆ ಆಗಲಿದೆ ಎಂದರು.

ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, ಈ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕೆ ತೀವ್ರ ಹಾನಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮೌಲಾನಾ ಅಬ್ದುಲ್ ಅಲೀಂ ಖಾಸ್ಮಿ, ಮೌಲಾನಾ ಮಕ್ಬೂಲ್ ಕೋಬಟ್ಟೆ, ಮತ್ತು ಡಾ. ಅತೀಕುರ್ ರೆಹಮಾನ್ ಮುನಿರಿ, ಖಾಝಿ ಅಬ್ದುರ್ ರಬ್ ನದ್ವಿ, ಖಾಝಿ ಮೌಲಾನಾ ಖಾಜಾ ಮದನಿ, ಖಾಝಿ ಅಬ್ದುಸ್ ಸಮದ್ ಮುರ್ಡೇಶ್ವರ, ಮೌಲಾನ ಅಬ್ದುಲ್ ಅಲೀಂ ಖತೀಬ್, ಭಟ್ಕಳ ಪುರಸಭೆ ಅಧ್ಯಕ್ಷ ಮೊಹಿದ್ದೀನ್ ಅಲ್ತಾಫ್ ಖರೂರಿ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಸೈಯದ್ ಇಮ್ರಾನ್ ಲಂಕಾ, ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ತಹಸಿಲ್ದಾರ್ ನಾಗೇಂದ್ರ ಕೋಳಶೇಟ್ಟಿ ಉಪಸ್ಥಿತರಿದ್ದರು. ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಪಾಲ್ಗೊಂಡಿದ್ದರು.

ಭಟ್ಕಳದಲ್ಲಿ ಮುಸ್ಲಿಮರು ಕೇಂದ್ರ ಸರ್ಕಾರದ ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಸಿ ಎಸಿ ಮೂಲಕ ರಾಷ್ಟ್ರಪತಿ, ಪ್ರಧಾನಿಗೆ ಮನವಿ ಸಲ್ಲಿಸಿದರು.

Share this article