ಕರ್ಕಿಕೊಂಡ ದುರ್ಗದಬೆಟ್ಟದಲ್ಲಿ ಗುಡ್‌ಫ್ರೈಡೆ ಆಚರಣೆ

KannadaprabhaNewsNetwork | Published : Apr 19, 2025 12:30 AM

ಸಾರಾಂಶ

ಬಾಳೆಹೊನ್ನೂರು, ಕ್ರೈಸ್ತ ಧರ್ಮೀಯರ ಪವಿತ್ರ ಆಚರಣೆಗಳಲ್ಲೊಂದಾದ ಶುಭ ಶುಕ್ರವಾರವನ್ನು (ಗುಡ್‌ಫ್ರೈಡೆ) ಕ್ರಿಶ್ಚಿಯನ್ ಬಾಂಧವರು ಸಮೀಪದ ಕರ್ಕಿಕೊಂಡದ ದುರ್ಗದ ಬೆಟ್ಟ (ಶಿಲುಬೆ ಬೆಟ್ಟದ) ತುತ್ತ ತುದಿಯಲ್ಲಿ ಭಕ್ತಿ, ಭಾವದಿಂದ ಆಚರಿಸಿದರು.

ಕಡಿದಾದ ದಾರಿಯಲ್ಲಿ ಬೆಟ್ಟ ಏರಿದ ಭಕ್ತರು ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕ್ರೈಸ್ತ ಧರ್ಮೀಯರ ಪವಿತ್ರ ಆಚರಣೆಗಳಲ್ಲೊಂದಾದ ಶುಭ ಶುಕ್ರವಾರವನ್ನು (ಗುಡ್‌ಫ್ರೈಡೆ) ಕ್ರಿಶ್ಚಿಯನ್ ಬಾಂಧವರು ಸಮೀಪದ ಕರ್ಕಿಕೊಂಡದ ದುರ್ಗದ ಬೆಟ್ಟ (ಶಿಲುಬೆ ಬೆಟ್ಟದ) ತುತ್ತ ತುದಿಯಲ್ಲಿ ಭಕ್ತಿ, ಭಾವದಿಂದ ಆಚರಿಸಿದರು.

ಬಾಳೆಹೊನ್ನೂರು-ಜಯಪುರ ನಡುವಿನ ಎಲೆಮಡಲು ಬಳಿಯಿರುವ ಕರ್ಕಿಕೊಂಡ ಟೀ ಎಸ್ಟೇಟ್ ಒಳ ಪ್ರವೇಶಿಸಿ ಕಾಲು ದಾರಿಯಲ್ಲಿ ಸಾಗಿದರೆ ಈ ದುರ್ಗದಬೆಟ್ಟ ಸಿಗಲಿದ್ದು, ಪ್ರತೀ ವರ್ಷ ಗುಡ್‌ಫ್ರೈಡೆ ಯಂದು ಕ್ರೈಸ್ತರು ಸೇರಿದಂತೆ ವಿವಿಧ ಜಾತಿ, ಮತ ದವರೂ ಈ ಬೆಟ್ಟ ಹತ್ತಿ ಶುಭ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಾರೆ. ಈ ಬೆಟ್ಟಕ್ಕೆ ಶಿಲುಬೆ ಬೆಟ್ಟ, ಕುರ್ಚಿಗುಡ್ಡ, ದುರ್ಗದ ಬೆಟ್ಟ ಎಂದೂ ಕರೆಯುತ್ತಾರೆ. 1940ರ ಸಂದರ್ಭದಲ್ಲಿ ಈ ಭಾಗದ ಕ್ರೈಸ್ತ ಬಾಂಧವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಲು ಯಾವುದೇ ಚರ್ಚ್ ಇಲ್ಲದ ಸಂದರ್ಭದಲ್ಲಿ ಕರ್ಕಿಕೊಂಡ ಎಸ್ಟೇಟ್‌ನಲ್ಲಿ ಸಣ್ಣದೊಂದು ಚರ್ಚ್ ನಿರ್ಮಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗುಡ್‌ಫ್ರೈಡೆ ದಿನದಂದು ಕರ್ಕಿಕೊಂಡದ ಬೆಟ್ಟ ಏರಿ ಪ್ರಾರ್ಥನೆ ಸಲ್ಲಿಸುವುದು ವಾಡಿಕೆಯಾಗಿ ಬೆಟ್ಟ ಏರುವ ಈ ಪದ್ಧತಿ ಇಂದಿಗೂ ಚಾಚು ತಪ್ಪದೇ ನಡೆದುಕೊಂಡು ಬರುತ್ತಿದೆ. ಟೀ, ಕಾಫಿ ಎಸ್ಟೇಟ್‌ನ ಕಂಪಿನ ನಡುವೆ, ಪ್ರಕೃತಿ ಸೌಂದರ್ಯದ ಮದ್ಯದಲ್ಲಿ ಬೆಟ್ಟ ಏರುವುದೇ ಭಕ್ತರಿಗೆ ಒಂದು ಸಂತಸದ ಕ್ಷಣವಾಗಿದೆ. ಏಸು ಕ್ರಿಸ್ತರ ಮರಣದ ನೆನಪನ್ನು ಸಾರುವ ಗುಡ್‌ಫ್ರೈಡೆಯನ್ನು ಭಕ್ತರು ಬೆಟ್ಟದ ಕೆಳಗೆ ಮರದ ಶಿಲುಬೆ ಹೊತ್ತುಕೊಂಡು ಬೆಟ್ಟ ಏರಿ ಅಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸುಮಾರು 6-7ಕಿಲೋ ಮೀಟರ್‌ನ ಕಡಿದಾದ ದಾರಿಯಲ್ಲಿ ಸುತ್ತಮುತ್ತಲಿನ 1500ರಿಂದ 2 ಸಾವಿರ ಕ್ರೈಸ್ತ ಬಾಂಧವರು ಸೇರಿದಂತೆ ವಿವಿಧ ಜಾತಿ ಜನಾಂಗದವರು ತಮ್ಮ ಇಷ್ಟಾರ್ಥ ನೆರವೇರಿಕೆ, ಕಷ್ಟ ನಿವಾರಣೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿ ಏಸುಕ್ರಿಸ್ತರ ಬಳಿ ಯಾವುದೇ ಹರಕೆ ಹೊತ್ತರೂ ಸಹ ಅದು ಈಡೇರುವುದು ಎಂಬ ನಂಬಿಕೆ ಈ ಭಾಗದ ಕ್ರೈಸ್ತ ಭಕ್ತರಲ್ಲಿದೆ. ಹಲವು ಭಕ್ತರ ಬೇಡಿಕೆ ಈಡೇರಿದ ಸಾವಿರಾರು ಉದಾಹರಣೆಗಳು ಸಹ ಇದೆ. ಪುಟಾಣಿ ಮಕ್ಕಳಿಂದ ಹಿಡಿದು 70-75 ವರ್ಷ ವಯಸ್ಸಿನ ವೃದ್ಧರೂ ಸಹ ಬೆಟ್ಟ ಹತ್ತುವುದು ವಿಶೇಷ. ಬೆಳಿಗ್ಗೆ 7.30ಕ್ಕೆ ಕರ್ಕಿಕೊಂಡದಲ್ಲಿ ಇರುವ ಚರ್ಚಿನಲ್ಲಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಉಪವಾಸದಿಂದಲೇ ಬೆಟ್ಟ ಏರಲು ಆರಂಭಿಸಿ ಬೆಟ್ಟದ ಹಾದಿಯಲ್ಲಿ ಒಟ್ಟು 14 ಕಡೆಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಗುಡ್ಡದ ತುದಿಗೆ ತಲುಪುತ್ತಾರೆ. ಕನಿಷ್ಠ 2 ಗಂಟೆಗಳ ಅವಧಿ ಬೆಟ್ಟ ಏರಲು ಬೇಕಿದ್ದು, ಬೆಟ್ಟದಲ್ಲಿರುವ ಶಿಲುಬೆಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಪುನಃ ಬೆಟ್ಟ ಇಳಿದು ಕರ್ಕಿಕೊಂಡದ ಚರ್ಚ್ ಆವರಣದಲ್ಲಿ ಗಂಜಿ ಹಾಗೂ ಹೆಸರುಕಾಳು ಪಲ್ಯ ಸ್ವೀಕರಿಸುತ್ತಾರೆ.

೧೮ಬಿಹೆಚ್‌ಆರ್ ೨: ಬಾಳೆಹೊನ್ನೂರು ಸಮೀಪದ ಕರ್ಕಿಕೊಂಡ ಬಳಿಯಿರುವ ದುರ್ಗದ ಬೆಟ್ಟದಲ್ಲಿ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿರುವ ಕ್ರೈಸ್ತ ಬಾಂಧವರು.

Share this article