ಭಟ್ಕಳ: ಪಟ್ಟಣದ ಸಾಗರ ರಸ್ತೆಯ ಪೊಲೀಸ್ ವಸತಿಗೃಹ ಮತ್ತು ಮೈದಾನಕ್ಕೆ ತೆರಳುವ ರಸ್ತೆಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ಹೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲ ಉಂಟಾಗಿ ಸಹಾಯಕ ಆಯುಕ್ತರು ಜಾಗದ ಸರ್ವೆ ಮಾಡಲು ಸೂಚಿಸಿದ ಹಿನ್ನೆಲೆ ಗುರುವಾರ ಸರ್ವೆ ಇಲಾಖೆಯಿಂದ ಬೆಳಗ್ಗೆಯಿಂದ ಸಂಜೆಯವರೆಗೆ ಪೊಲೀಸ್ ವಸತಿಗೃಹ ಇರುವ ಮತ್ತು ಮೈದಾನದ ಜಾಗವನ್ನು ಸರ್ವೆ ಮಾಡಲಾಗಿದೆ.
ಅನಾದಿ ಕಾಲದಿಂದಲೂ ಸಾರ್ವಜನಿಕರು ಓಡಾಡುವ ಪೊಲೀಸ್ ವಸತಿಗೃಹ ಮತ್ತು ಮೈದಾನದ ರಸ್ತೆಗೆ ಕಳೆದ ಒಂದೂವರೆ ತಿಂಗಳಿನಿಂದ ಪೊಲೀಸರು ನಾಲ್ಕೈದು ಬ್ಯಾರಿಕೇಡ್ ಅಡ್ಡ ಹಾಕಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದರು. ಚುನಾವಣೆಯ ಸಲುವಾಗಿ ರಸ್ತೆಗೆ ಅಡ್ಡಲಾಗಿ ಬ್ಯಾರಿಕೇಡ್ ಹಾಕಲಾಗಿದೆ. ಚುನಾವಣೆಯ ನಂತರ ಇದನ್ನು ತೆರವುಗೊಳಿಸಲಾಗುತ್ತದೆ ಎಂದು ನಂಬಿದ್ದ ಆ ಭಾಗದ ಸಾರ್ವಜನಿಕರಿಗೆ ಬ್ಯಾರಿಕೇಡ್ ತೆರವುಗೊಳಿಸಲು ಪೊಲೀಸರು ನಿರಾಕರಿಸಿದಾಗ ಶಾಕ್ ಆಗಿತ್ತು.ಸಾರ್ವಜನಿಕರು ಅನಾದಿ ಕಾಲದಿಂದ ತಿರುಗಾಡುವ ರಸ್ತೆಗೆ ನಿರ್ಬಂಧ ಹೇರುವುದು ಸರಿಯಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಬ್ಯಾರಿಕೇಡ್ ಹಾಕಿದ ಸ್ಥಳದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ಮಧ್ಯೆ ತೀವ್ರ ವಾಗ್ವಾದ ಉಂಟಾಗಿತ್ತು. ಯಾವುದೇ ಕಾರಣಕ್ಕೂ ರಸ್ತೆಯಲ್ಲಿ ಸಾರ್ವಜನಿಕರ ವಾಹನಕ್ಕೆ ನಿರ್ಬಂಧ ಹೇರಲು ಬಿಡುವುದಿಲ್ಲ.
ಕೂಡಲೇ ಬ್ಯಾರಿಕೇಡ್ ತೆರವುಗೊಳಿಸಿ ಮೊದಲಿನಂತೆ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪಟ್ಟು ಹಿಡಿಯಲಾಗಿತ್ತು. ಈ ಕುರಿತು ಸಹಾಯಕ ಆಯುಕ್ತೆ ಡಾ. ನಯನಾ ಎನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಪೊಲೀಸರು ಮತ್ತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿ, ಕೊನೆಗೆ ಸಹಾಯಕ ಆಯುಕ್ತರು ಪೊಲೀಸ್ ವಸತಿಗೃಹ ಇರುವ ಸರ್ವೆ ನಂಬರ್ 353 ಜಾಗದ ಸರ್ವೆ ನಡೆಸಿದ ನಂತರ ಜಾಗ ಯಾರಿಗೆ ಸೇರಿದ್ದು ಎಂದು ಸ್ಪಷ್ಟಪಡಿಸಿಕೊಂಡು ನಿರ್ಧಾರ ಮಾಡಿದರಾಯಿತು. ಅಲ್ಲಿಯ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಮಾಡಿದ್ದರು. ಸಹಾಯಕ ಆಯುಕ್ತರ ಆದೇಶದಂತೆ ಗುರುವಾರ ಬೆಳಗ್ಗೆಯಿಂದ ಸಂಜೆಯವರೆಗೂ ಪೊಲೀಸ್ ವಸತಿ ಗೃಹ ಮತ್ತು ಮೈದಾನ ಇರುವ ಜಾಗವನ್ನು ಸರ್ವೆ ಇಲಾಖೆಯ ಅಧಿಕಾರಿಗಳು ಸರ್ವೆ ಮಾಡಿದ್ದಾರೆ. ಸರ್ವೆ ಸಂದರ್ಭದಲ್ಲಿ ಸಾರ್ವಜನಿಕರು, ಜನಪ್ರತಿನಿಧಿಗಳು, ಊರಿನ ಮುಖಂಡರು ಹಾಗೂ ಪೊಲೀಸರು ಇದ್ದರು. ರಸ್ತೆ ಇರುವ ಜಾಗ ಯಾರಿಗೆ ಬರುತ್ತದೆ? ಪೊಲೀಸರು ರಸ್ತೆಯಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ಹೇರಿದ ನಿರ್ಬಂಧ ತೆರವುಗೊಳಿಸುತ್ತಾರೆಯೇ? ಅಂತಿಮವಾಗಿ ಸಹಾಯಕ ಆಯುಕ್ತರು ಏನು ಆದೇಶ ಮಾಡಲಿದ್ದಾರೆ ಎನ್ನುವ ಕುತೂಹಲ ಉಂಟಾಗಿದೆ.ಇದೆಲ್ಲದರ ಮಧ್ಯೆ ಈ ಭಾಗದ ಸಾರ್ವಜನಿಕರು ರಸ್ತೆ ಇರುವ ಜಾಗ ಯಾರಿಗೇ ಬಂದರೂ ಅನಾದಿ ಕಾಲದಿಂದ ಇರುವ ರಸ್ತೆಗೆ ಯಾರೂ ನಿರ್ಬಂಧ ಹೇರುವಂತಿಲ್ಲ. ಪ್ರತಿನಿತ್ಯ ಇದೇ ರಸ್ತೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಇದನ್ನು ಮೊದಲಿನಂತೆ ಮುಂದುವರಿಸಬೇಕು ಎಂದು ಆಗ್ರಹಿಸಿದ್ದಾರೆ.