ಕನ್ನಡಪ್ರಭ ವಾರ್ತೆ ಮೈಸೂರು
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಜ್ಞಾನದ ಬಗ್ಗೆ ಹೆಮ್ಮೆ ಪಡುವ ಪಠ್ಯಗಳಿದ್ದು, ವಿಶ್ವವನ್ನು ನೋಡುವ ಕ್ರಮವೇ ಬದಲಾಗಿದೆ ಎಂದು ಕೇಂದ್ರ ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಕುಮಾರ್ ಹೇಳಿದರು.ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯೋಗ ಒಲಿಂಪಿಯಾಡ್ ನ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಯೋಗ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಎನ್.ಸಿ.ಇ.ಆರ್.ಟಿ ಪಠ್ಯಕ್ರಮವನ್ನು ಪರಿಷ್ಕೃತಗೊಳಿಸಿದ್ದು, ಹೊಸ ಪಠ್ಯಗಳು ಸೇರ್ಪಡೆಯಾಗಿವೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಸಮಗ್ರ ಅಭಿವೃದ್ಧಿಗೆ ನೆರವಾಗಲಿದೆ ಎಂದು ಅವರು ತಿಳಿಸಿದರು.ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತ ಶಿಕ್ಷಣ ಪಡೆಯುವುದೇ ಗುರಿಯಾಗಬೇಕು. ಪ್ರಜ್ಞಾಪೂರ್ವಕವಾಗಿ ಸಮಾಜದೊಂದಿಗೆ ವರ್ತಿಸಲು, ಸಮಾಜದ ಸ್ವಾಸ್ಥ್ಯ ಚೆನ್ನಾಗಿರಲು ನಿತ್ಯ ಯೋಗಾಭ್ಯಾಸ ಮಾಡಬೇಕು. ಶಾಲಾ ಶಿಕ್ಷಣದಲ್ಲೂ ಯೋಗ ಒಂದು ಭಾಗವಾಗಿದ್ದು, ಅದು ಎಲ್ಲರನ್ನು ಒಂದಾಗಿಸುತ್ತದೆ ಎಂದು ಅವರು ಹೇಳಿದರು.
ಒಲಿಂಪಿಯಾಡ್ ನಲ್ಲಿ ಪಾಲ್ಗೊಂಡಿರುವ ಯೋಗಪಟುಗಳು ವಿಶ್ವದ ಯೋಗ ರಾಯಭಾರಿಗಳಾಗಿದ್ದಾರೆ. ಯೋಗ ಶಿಕ್ಷಣ ಪಡೆದವರು ತರಬೇತಿ ನೀಡುತ್ತಲೇ ಜೀವನ ನಡೆಸುವ, ಸ್ವಯಂ ಉದ್ಯೋಗ ಕಂಡುಕೊಳ್ಳುವ ಮಾರ್ಗವಾಗಿದೆ. 2027ರ ವೇಳೆಗೆ ಯೋಗ ಕ್ಷೇತ್ರವು 5.47 ಲಕ್ಷ ರೂ. ಕೋಟಿ ವಹಿವಾಟಿನ ಕ್ಷೇತ್ರವಾಗಿ ಹೊರಹೊಮ್ಮಲಿದೆ. ವಾರ್ಷಿಕ ಶೇ. 10ರಷ್ಟು ಬೆಳವಣಿಗೆ ದಾಖಲಿಸುತ್ತಿದೆ. ಉತ್ತಮ ಸಮಾಜ ನಿರ್ಮಿಸುವ ಜವಾಬ್ದಾರಿ ಯೋಗ ಶಿಕ್ಷಣ ಪಡೆದವರ ಮೇಲಿದೆ ಎಂದರು.ವ್ಯಕ್ತಿ ಹಾಗೂ ಸಮಾಜಕ್ಕೆ ಯೋಗ ಈ ಬಾರಿಯ ಧ್ಯೇಯ ವಾಕ್ಯ. ಆರೋಗ್ಯ ಪೂರ್ಣ ಮನಸ್ಸು ಆರೋಗ್ಯಯುತ ದೇಹದಲ್ಲಿ ಇರುತ್ತದೆ. ಯೋಗವು ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ವರ್ಷದ ದೀರ್ಘ ಹಗಲಿರುವ ದಿನವಾದ ಜೂ. 21ರಂದೇ ವಿಶ್ವಯೋಗ ದಿನವೆಂದು ವಿಶ್ವಸಂಸ್ಥೆಯು ಘೋಷಿಸಿದೆ. ವಿಶ್ವ ಮಾನ್ಯತೆಗಳಿಸಲು ಪ್ರಧಾನಿ ನರೇಂದ್ರ ಮೋದಿ ಕಾರಣರು. ಜನರ ಜೀವನ ಆರೋಗ್ಯ ಪೂರ್ಣವಾಗಿರಲು ಯೋಗ ಮಾರ್ಗ ಅನುಸರಿಸಬೇಕು ಎಂದು ಸಂಜಯ್ ಕುಮಾರ್ ಅವರು ಸಲಹೆ ನೀಡಿದರು.
ವಿಜೇತರಿವರು:ರಾಜ್ಯದ 16ವರ್ಷದೊಳಗಿನ ಬಾಲಕಿಯರ ತಂಡವು ಇಲ್ಲಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ (ಆರ್‌ಐಇ) ಗುರುವಾರ ಮುಕ್ತಾಯಗೊಂಡ ರಾಷ್ಟ್ರೀಯ ಯೋಗ ಒಲಿಂಪಿಯಾಡ್ ನಲ್ಲಿ ಕಂಚಿನ ತನ್ನದಾಗಿಸಿಕೊಂಡಿತು.
ಕೆ.ವೈ. ಸೃಷ್ಟಿ (ಎಂ.ಆರ್.ಬಿ ಶಾಲೆ, ಹರಿಹರ), ಎಂ. ಸಂಧ್ಯಾ (ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಯಂಡಹಳ್ಳಿ, ಬೆಂಗಳೂರು), ಟಿ.ಆರ್. ಕಲ್ಲೇಶ್ವರಿ (ಇಂದಿರಾ ಗಾಂಧಿ ವಸತಿ ಶಾಲೆ, ಹರಿಹರ) ಹಾಗೂ ಆರ್. ಅನುಷಾ (ರಾಜೇಶ್ವರಿ ವಿದ್ಯಾಶಾಲೆ, ಕೆಂಚನಹಳ್ಳಿ, ಬೆಂಗಳೂರು) ಅವರ ತಂಡವು 1,027 ಪಾಯಿಂಟ್ ಗಳೊಂದಿಗೆ 3ನೇ ಸ್ಥಾನ ಪಡೆಯಿತು.ಎನ್.ಸಿ.ಇ.ಆರ್.ಟಿ ನಿರ್ದೇಶಕ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ, ಆರ್‌ಐಇ ಪ್ರಾಂಶುಪಾಲ ಪ್ರೊ.ವಿ. ಶ್ರೀಕಾಂತ್ ಇದ್ದರು.
ಫೋಟೋ- 20ಎಂವೈಎಸ್ 4- ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯೋಗ ಒಲಿಂಪಿಯಾಡ್ ನ ಸಮಾರೋಪದಲ್ಲಿ ಕೇಂದ್ರ ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಸಂಜಯ್ ಕುಮಾರ್ ಮಾತನಾಡಿದರು. ಪ್ರೊ.ದಿನೇಶ್ ಪ್ರಸಾದ್ ಸಕ್ಲಾನಿ, ಪ್ರೊ.ವಿ. ಶ್ರೀಕಾಂತ್ ಇದ್ದಾರೆ.