ಹೂವಿನಹಡಗಲಿ: ರಾಜ್ಯ ಸರ್ಕಾರ ಗ್ಯಾರಂಟಿಗೆ ಹಣ ಹೊಂದಿಸಲು ಇಂಧನ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಬಡವರ ಜೇಬಿಗೆ ಕತ್ತರಿ ಹಾಕುವ ಜತೆಗೆ ಅವರ ಕತ್ತು ಕೊಯ್ಯುತ್ತಿದೆ ಎಂದು ಶಾಸಕ ಕೃಷ್ಣನಾಯ್ಕ ಆರೋಪಿಸಿದರು.
ಅವ್ಯವಹಾರಗಳ ಸರಮಾಲೆ ಹೊತ್ತಿರುವ ಕಾಂಗ್ರೆಸ್ ಸರ್ಕಾರ, ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಮೋಸ ಮಾಡಿದೆ. ಕೂಡಲೇ ಇಂಧನ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಈ ಸರ್ಕಾರದಲ್ಲಿರುವ ಸಿಎಂ, ಡಿಸಿಎಂ, ಮಂತ್ರಿಗಳು ಅಧಿಕಾರಕ್ಕಾಗಿ ಕಿತ್ತಾಟ ಮಾಡುತ್ತಿದ್ದಾರೆಯೇ ಹೊರತು ಜನರ ಅಭಿವೃದ್ಧಿಗೆ ಯಾರು ಶ್ರಮಿಸುತ್ತಿಲ್ಲ ಎಂದು ದೂರಿದರು.ರಾಜ್ಯದಲ್ಲಿ ಹಂತ ಹಂತವಾಗಿ ಬೆಲೆ ಏರಿಕೆ ಮಾಡಿ ಜನರನ್ನು ನಿಧಾನಗತಿಯಲ್ಲಿ ಸಾಯಿಸುತ್ತಿದ್ದಾರೆ. ಈ ಸರ್ಕಾರ ಪಕ್ಕದ ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಹೀಗೆ ಗ್ಯಾರಂಟಿ ಯೋಜನೆಗಳನ್ನು ನೀಡಿ ಈಗ ದಿವಾಳಿಯಾಗಿತ್ತು. ಅದನ್ನು ನೋಡಿ ಪಾಠ ಕಲಿಯಬೇಕಿದೆ ಎಂದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ, ಜನರಿಗೆ ಬರೆ ಎಳೆಯುತ್ತಿರುವ ಬೆಲೆ ಏರಿಕೆಗೆ ಮೊದಲು ಸರ್ಕಾರ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದರು.ಜೆಡಿಎಸ್ ಮುಖಂಡ ಕೆ.ಪುತ್ರೇಶ ಮಾತನಾಡಿ, ಎಲ್ಲ ವರ್ಗಗಳ ಜನರ ಹಣವನ್ನು ಲೂಟಿಗೈದ ಸರ್ಕಾರದಲ್ಲಿ ಸಿಎಂ, ಡಿಸಿಎಂ ಇಬ್ಬರೂ ಭಾಗಿಯಾಗಿದ್ದಾರೆ. ಗ್ಯಾರಂಟಿ ನೀಡುವ ಜತೆಗೆ ಇತ್ತ ಬೆಲೆ ಏರಿಕೆ ಮಾಡಿ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ದೂರಿದರು.
ಮಂಡಲದ ಅಧ್ಯಕ್ಷ ಹಣ್ಣಿ ಶಶಿಧರ, ಈಟಿ ಲಿಂಗರಾಜ, ಎಂ.ಪರಮೇಶಪ್ಪ, ಪುನೀತ್ ದೊಡ್ಮನಿ, ಕೆ.ಬಿ. ವೀರಭದ್ರಪ್ಪ, ಮೋಹನ್ ರೆಡ್ಡಿ, ಜೆ.ಪರಶುರಾಮ, ವಿಲ್ಸನ್ ಸ್ವಾಮಿ, ಎಂ.ಬಸವರಾಜ, ಭಾಗ್ಯಮ್ಮ, ವಿಜಯಲಕ್ಷ್ಮೀ, ಮೀರಾಬಾಯಿ, ಹಕ್ಕಂಡಿ ಮಹದೇವ, ಕಾರ್ಯಕರ್ತರು ಭಾಗವಹಿಸಿದ್ದರು.