ಭಟ್ಕಳ : ಶಿರಾಲಿಯ ತಟ್ಟಿಹಕ್ಲಿನ ವೆಂಕಟಾಪುರ ಹೊಳೆ ನೀರಿನಲ್ಲಿ ಕಪ್ಪೆಚಿಪ್ಪು ಸಂಗ್ರಹಿಸಲು ಹೋಗಿ ನೀರು ಪಾಲಾಗಿದ್ದ ಮಾದೇವ ನಾಯ್ಕ ಅವರ ಮೃತದೇಹ ಪತ್ತೆಯಾಗುವ ಮೂಲಕ ಮೃತರ ಸಂಖ್ಯೆ ೧೧ಕ್ಕೇರಿದ್ದು, ಉಳಿದ ಮೂವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಹೇಳತೀರದಾಗಿದೆ. ಎಲ್ಲೆಲ್ಲೂ ದುಃಖ ಮಡುಗಟ್ಟಿದೆ.
ಭಾನುವಾರ ಸಂಜೆಯಾದರೂ ಇಬ್ಬರು ಪತ್ತೆಯಾಗದ ಕಾರಣ ಈಜು ತಜ್ಞ ಈಶ್ವರ ಮಲ್ಪೆ ಅವರು ತಮ್ಮ ತಂಡದವರನ್ನು ಕಳುಹಿಸಿಕೊಟ್ಟಿದ್ದು, ಓರ್ವರನ್ನು ನೀರಿನಲ್ಲಿ ಪತ್ತೆ ಹಚ್ಚುವಲ್ಲಿ ಸಫಲರಾದರು. ಆನಂತರ ರಾತ್ರಿ ಬಂದ ಈಶ್ವರ ಮಲ್ಪೆ ಅವರೇ ತಡರಾತ್ರಿಯ ತನಕ ಹುಡುಕಾಡಿದರೂ ಮಾದೇವ ನಾಯ್ಕ ಪತ್ತೆಯಾಗಿರಲಿಲ್ಲ. ಆನಂತರ ಸೋಮವಾರ ಬೆಳಗ್ಗೆ ಮಾದೇವ ಮೃತ ಸ್ಥಿತಿಯಲ್ಲಿ ಬಂಡೆಯೊಂದರ ನಡುವೆ ಸಿಲುಕಿದ್ದು, ಅವರ ಮೃತದೇಹವನ್ನು ಮೇಲಕ್ಕೆತ್ತುವ ಮೂಲಕ ಎಲ್ಲ 11 ಜನರನ್ನು ಪತ್ತೆ ಹಚ್ಚಿದಂತಾಗಿದೆ.
ಸಾರದೊಳೆಯಲ್ಲಿ ಒಂದೇ ದಾಯಾದಿ ಕುಟುಂಬದ 8 ಜನರು ಮೃತಪಟ್ಟಿದ್ದರಿಂದ ಕುಟುಂಬದ ಗದ್ದೆಯಲ್ಲೇ ಸೋಮವಾರ ಬೆಳಗ್ಗೆ ಎಲ್ಲರದ್ದೂ ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಇನ್ನಿಬ್ಬರದ್ದು ಅಳ್ವೆಕೋಡಿಯಲ್ಲಿ, ಮತ್ತೊಬ್ಬರದ್ದು ಸಾರದಹೊಳೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಇಡೀ ಗ್ರಾಮದಲ್ಲಿ ಮೌನ ಆವರಿಸಿತ್ತು. ಸಾರದಹೊಳೆಯ ಅಂಗಡಿ ಮುಂಗಟ್ಟುಗಳನ್ನೂ ಮುಚ್ಚಿ ಸಂತಾಪ ಸೂಚಿಸಲಾಯಿತು. ಒಂದೇ ಗ್ರಾಮದವರು 11 ಜನರು ಜಲ ದುರಂತದಲ್ಲಿ ಮೃತಪಟ್ಟಿರುವುದು ಗ್ರಾಮಸ್ಥರನ್ನು ಕಂಬನಿ ಮಿಡಿಯುವಂತೆ ಮಾಡಿತು.
ಮೃತರ ಅಂತಿಮ ದರ್ಶನಕ್ಕೆ ಸ್ಥಳೀಯರು, ಸಂಬಂಧಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಎಂಟು ಮಂದಿಯ ಅಂತ್ಯಸಂಸ್ಕಾರ ಒಂದೇ ಸ್ಥಳದಲ್ಲಿ ನಡೆದಿದ್ದು ಅತ್ಯಂತ ಹೃದಯವಿದ್ರಾವಕ ದೃಶ್ಯಕ್ಕೆ ಸಾಕ್ಷಿಯಾಯಿತು. ಪರಿವಾರದವರ ಹಾಗೂ ಗ್ರಾಮಸ್ಥರ ಆಕ್ರಂದನ ಮನಕಲಕುವಂತಿತ್ತು. ಪತಿ, ಪತ್ನಿ ಮೃತದೇಹವನ್ನು ಒಂದೇ ಚಿತೆಯಲ್ಲಿ ಇರಿಸಿ ಅಂತ್ಯಸಂಸ್ಕಾರ ನೆರವೇರಿಸಿದ ದೃಶ್ಯ ಅಲ್ಲಿದ್ದವರ ಕಣ್ಣೀರನ್ನು ತರಿಸಿತು.
ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ಅವರು, ಸರ್ಕಾರದಿಂದ ಅಗತ್ಯ ಪರಿಹಾರ ಹಾಗೂ ನೆರವು ನೀಡುವ ಭರವಸೆ ನೀಡಿದರು.