ಭವಾನಿ ಶಂಕರ ದೇವಸ್ಥಾನ: ಪುರಾತತ್ವ ಇಲಾಖೆಯ ನಿರ್ಲಕ್ಷ್ಯವೇಕೆ?

KannadaprabhaNewsNetwork |  
Published : Aug 22, 2026, 02:00 AM IST
ಶಾಲೆ, ನಗರಸಭೆ ಹಾಗೂ ಎಸ್ಡಿಎಂಎಫ್ ಕಾಮಗಾರಿ ಪರಿಶೀಲನೆಶಾಲಾ ಕಟ್ಟಡದ ಸಮರ್ಪಕ ಬಳಕೆಗೆ ಡಿಸಿ ಸಂಗಪ್ಪ ಸೂಚನೆ | Kannada Prabha

ಸಾರಾಂಶ

1823-24ರ ಬಾಂಬೆ ಗೆಜೆಟಿಯರ್‌ನಲ್ಲಿ ಇಲ್ಲಿ ದೇವಸ್ಥಾನ, ಪುಷ್ಕರಣಿ ಇರುವ ಬಗ್ಗೆ ಎಲ್ಲ ಉಲ್ಲೇಖವಿದೆ. ಈ ಕಾರಣದಿಂದಲೇ ಈ ದೇವಸ್ಥಾನದ ಜವಾಬ್ದಾರಿಯನ್ನು ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ.

ವಿಶೇಷ ವರದಿ

ಹುಬ್ಬಳ್ಳಿ:

ಇಲ್ಲಿನ ಹಳೇಹುಬ್ಬಳ್ಳಿ ಆಸಾರ ಓಣಿಯಲ್ಲಿ ಭವಾನಿ ಶಂಕರ ನಾರಾಯಣ ದೇವಸ್ಥಾನ ಹಾಗೂ ಪುಷ್ಕರಣಿ ಸಂರಕ್ಷಣೆಗಾಗಿ ಹಿಂದೂಪರ ಸಂಘಟನೆಗಳು ಆ. 22ರಂದು ಹೋರಾಟಕ್ಕೆ ಕರೆ ನೀಡಿದೆ. ತನ್ನ ಅಧೀನದಲ್ಲಿ ಬರುವ ಈ ದೇವಸ್ಥಾನದ ವಿಷಯದಲ್ಲಿ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

1823-24ರ ಬಾಂಬೆ ಗೆಜೆಟಿಯರ್‌ನಲ್ಲಿ ಇಲ್ಲಿ ದೇವಸ್ಥಾನ, ಪುಷ್ಕರಣಿ ಇರುವ ಬಗ್ಗೆ ಎಲ್ಲ ಉಲ್ಲೇಖವಿದೆ. ಈ ಕಾರಣದಿಂದಲೇ ಈ ದೇವಸ್ಥಾನದ ಜವಾಬ್ದಾರಿಯನ್ನು ಪುರಾತತ್ವ, ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ.

ಯಾವ ದೇವಸ್ಥಾನ ಅಥವಾ ಸ್ಮಾರಕ ಪುರಾತತ್ವ ಇಲಾಖೆ ವ್ಯಾಪ್ತಿಗೆ ಬರುತ್ತದೆಯೋ ಅದರ ಸುತ್ತಲಿನ 100 ಮೀಟರ್‌ ವ್ಯಾಪ್ತಿ ಸಂಪೂರ್ಣ ನಿಷೇಧಿತ ಹಾಗೂ 200 ಮೀಟರ್‌ ಪ್ರದೇಶ ನಿಯಂತ್ರಿತ ಪ್ರದೇಶವಾಗಿರುತ್ತದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ನಿರ್ಮಾಣ, ರಿಪೇರಿ ಮಾಡುವಂತಿಲ್ಲ. ಗಣಿಗಾರಿಕೆಯೂ ಸಂಪೂರ್ಣ ನಿಷಿದ್ಧವಾಗಿದೆ. ಜತೆಗೆ ಇಂಥ ಪುರಾತನ ದೇವಸ್ಥಾನದ ಕಾವಲಿನ ಜವಾಬ್ದಾರಿಯೂ ಇಲಾಖೆಯದ್ದೇ ಆಗಿರುತ್ತದೆ.

ಆದರೆ, ಇಲ್ಲಿ ಸಂಪೂರ್ಣ ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ದೇವಸ್ಥಾನದ ಗೋಡೆಗೆ ಹತ್ತಿಕೊಂಡೇ ಮನೆಗಳು ನಿರ್ಮಾಣಗೊಂಡಿವೆ. ಸುತ್ತಲು ಮನೆ, ಗುಡಿಸಲುಗಳಿವೆ. ಇನ್ನು ಇಲ್ಲಿ ಪುಷ್ಕರಣೆ ಇರುವ ಬಗ್ಗೆ ಯಾವುದೇ ಕುರುಹುಗಳು ಇಲ್ಲ ಎಂದು 2023ರಲ್ಲಿ ಪುರಾತತ್ವ ಇಲಾಖೆ ಪಾಲಿಕೆಗೆ ಬರೆದ ಪತ್ರದಲ್ಲಿ ತಿಳಿಸಿದೆ. ಸರಿ ಪುಷ್ಕರಣಿ ಇದೆಯೋ ಇಲ್ಲವೋ ಅದು ಬೇರೆ. ಆದರೆ ತನ್ನ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನ ಸಂರಕ್ಷಣೆ ತನ್ನ ಜವಾಬ್ದಾರಿ ಅಲ್ಲವೇ? ತನ್ನ ಇಲಾಖೆಯೇ ಮಾಡಿರುವ ನಿಯಮದಂತೆ 300 ಮೀಟರ್‌ ವ್ಯಾಪ್ತಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆಯೇ? ದೇವಸ್ಥಾನದ ಅಕ್ಕಪಕ್ಕಗಳಲ್ಲೇ ಮನೆಗಳು ಸೇರಿದಂತೆ ಬೇರೆ ಬೇರೆ ಕಟ್ಟಡಗಳಿವೆ. ಅವುಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ. ದೇವಸ್ಥಾನದ ಕಾವಲು ಪುರಾತತ್ವ ಇಲಾಖೆಗೆ ಸೇರುತ್ತದೆ. ಅಲ್ಲಿನ ಕಾವಲು ಜವಾಬ್ದಾರಿ ಏಕೆ ವಹಿಸಿಕೊಂಡಿಲ್ಲ ಎಂಬ ಪ್ರಶ್ನೆಗಳು ಹೋರಾಟಗಾರರದ್ದು.

ಇನ್ನು ಇದೇ ಪ್ರದೇಶದಲ್ಲಿ ಯಾವುದೇ ಕಾಮಗಾರಿ ನಡೆಸಬೇಕಿದ್ದರೂ ಅದಕ್ಕೆ ಪುರಾತತ್ವ ಇಲಾಖೆ ಪರವಾನಗಿ ಬೇಕು. ಆದರೆ, ಮಹಾನಗರ ಪಾಲಿಕೆಯೂ ಇಲ್ಲಿ ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಕರೆದು ಅರ್ಧ ಕಾಮಗಾರಿಯನ್ನೂ ಮಾಡಿದೆ. ಈ ಜಾಗೆಯೂ ದೇವಸ್ಥಾನದ ವ್ಯಾಪ್ತಿಯಲ್ಲಿ ಅಂದರೆ 300 ಮೀಟರ್‌ ಪ್ರದೇಶದಲ್ಲೇ ಬರುತ್ತದೆಯೇ? ಬರುತ್ತಿದ್ದರೆ ಅದಕ್ಕೆ ಪುರಾತತ್ವ ಇಲಾಖೆಯ ಪರವಾನಗಿ ಇದೆಯೇ? ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ. ಈ ಎಲ್ಲ ಪ್ರಶ್ನೆಗಳಿಗೂ ಪುರಾತತ್ವ ಇಲಾಖೆ ಉತ್ತರಿಸುತ್ತಿಲ್ಲ.

ಅಲ್ಲಿ ಪುಷ್ಕರಣಿ ಇಲ್ಲ ಎಂದು ಪುರಾತತ್ವ ಇಲಾಖೆ 2023ರಲ್ಲಿ ಪಾಲಿಕೆಗೆ ಬರೆದ ಪತ್ರದಲ್ಲಿ ತಿಳಿಸಿದೆ. ಹೀಗಾಗಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಪಾಲಿಕೆ ತಿಳಿಸುತ್ತದೆ.

ಒಟ್ಟಿನಲ್ಲಿ ಭವಾನಿಶಂಕರ ದೇವಸ್ಥಾನದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಇದೀಗ ವಿವಾದವನ್ನುಂಟು ಮಾಡಿದ್ದು, ಈಗಲಾದರೂ ನಿಯಮದಂತೆ ದೇವಸ್ಥಾನ ಹಾಗೂ ಅದರ ಸುತ್ತಲಿನ ಪ್ರದೇಶವನ್ನು ತನ್ನ ಸುಪರ್ದಿಗೆ ಪುರಾತತ್ವ ಇಲಾಖೆ ತೆಗೆದುಕೊಳ್ಳುತ್ತದೆಯೇ? ಎಂಬುದನ್ನು ಕಾಯ್ದು ನೋಡಬೇಕಿದೆ ಅಷ್ಟೇ!ಭವಾನಿಶಂಕರ ದೇವಸ್ಥಾನ ನಮ್ಮ ಇಲಾಖೆ ವ್ಯಾಪ್ತಿಗೆ ಬರುತ್ತದೆ. ಅಲ್ಲಿ ಪುಷ್ಕರಣೆ ಇಲ್ಲ ಎಂದು 2023ರಲ್ಲಿ ಇದ್ದ ಅಧಿಕಾರಿ ವರದಿ ಕೊಟ್ಟಿದ್ದು ನಿಜ. ದೇವಸ್ಥಾನದ ಸುತ್ತಲಿನ 100 ಮೀಟರ್‌ ನಿಷೇಧಿತ ಹಾಗೂ 200 ಮೀಟರ್‌ ನಿಯಂತ್ರಿತ ಪ್ರದೇಶವಾಗುತ್ತದೆ. ಇಲ್ಲಿ ಯಾರಾದರೂ ಕಟ್ಟಡ ನಿರ್ಮಿಸಿದರೆ ಮೇಲಾಧಿಕಾರಿಗಳ ನಿರ್ದೇಶನದಂತೆ ಕ್ರಮಕೈಗೊಳ್ಳುತ್ತೇವೆ.

ಸ್ಮೀತಾ ರೆಡ್ಡಿ, ಉಪನಿರ್ದೇಶಕರು, ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸುಶೀಲಾ ಹೆಗಡೆಗೆ ನಾಟಕ ಅಕಾಡೆಮಿ ಪ್ರಶಸ್ತಿ
ಬಿಜೆಪಿ ಕಾರ್ಯಕರ್ತರು-ಪೊಲೀಸರ ನಡುವೆ ಹೈಡ್ರಾಮಾ