ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ನೂರಿನ ಸುಶೀಲಾ ಹೆಗಡೆ ಮೂರೂರು ಅವರಿಗೆ ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ.

ಸಿದ್ದಾಪುರ: ಕಳೆದ ನಲವತ್ತು ವರ್ಷಗಳಿಂದ ರಂಗಕಲಾವಿದೆಯಾಗಿ, ನಿರ್ದೇಶಕಿಯಾಗಿ, ರಂಗಭೂಮಿಯ ವಸ್ತ್ರ, ಪ್ರಸಾಧನ, ಬೆಳಕಿನ ವಿನ್ಯಾಸಕಿಯಾಗಿ ರಾಜ್ಯದ ಹಲವಾರು ಕಡೆ ಕಾರ್ಯನಿರ್ವಹಿಸಿದ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೆಗ್ನೂರಿನ ಸುಶೀಲಾ ಹೆಗಡೆ ಮೂರೂರು ಅವರಿಗೆ ಈ ಬಾರಿಯ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಸುಶೀಲಾ ಅವರ ಪತಿ ಎಂ.ಪಿ. ಹೆಗಡೆ ಕೂಡ ಹಲವಾರು ನಾಟಕಗಳಿಗೆ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು.

ತುಮರಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಮೂರು ವರುಷ ತರಬೇತಿ ಪಡೆದ ಸುಶೀಲಾ, ಯಕ್ಷಗಾನ ಕಲಾವಿದೆಯಾಗಿ ಅನೇಕ ಪ್ರದರ್ಶನಗಳನ್ನು ಕೊಟ್ಟಿದ್ದಾರೆ. 1988-89ನೇ ಸಾಲಿನಲ್ಲಿ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ರಂಗಪದವಿ ಪಡೆದು, ಆನಂತರದಲ್ಲಿ ನೀನಾಸಮ್ ತಿರುಗಾಟ ಮತ್ತು ನೀನಾಸಮ್ ಬಳಗದಲ್ಲಿ ನಟಿಯಾಗಿ, ಹಿನ್ನೆಲೆ ತಾಂತ್ರಿಕ ವಿಭಾಗಗಳಾದ ಬೆಳಕು ಸಂಯೋಜನೆ, ಪ್ರಸಾಧನ, ವಸ್ತ್ರವಿನ್ಯಾಸಕಿಯಾಗಿಯೂ ಕೆಲಸ ಮಾಡಿದ್ದಾರೆ. ಅಭಿನಯ ಇವರ ಮುಖ್ಯ ಆಸಕ್ತಿ ಕ್ಷೇತ್ರವಾಗಿದ್ದು, ಪ್ರಸಿದ್ಧ ನಿರ್ದೇಶಕರಾದ ಪ್ರಿಟ್ಸ್ ಬೆನೆವಿಡ್ಸ್, ಕೆ.ಜಿ. ಕೃಷ್ಣಮೂರ್ತಿ, ರುಸುಂ ಭರೂಚ, ಬಸವಲಿಂಗಯ್ಯ, ರಘುನಂದನ, ಅಕ್ಷರ ಕೆ.ವಿ., ಚಿದಂಬರ್ ರಾವ್ ಜಂಬೆ, ಪ್ರಕಾಶ ಬೆಳವಾಡಿ, ವೆಂಕಟರಮಣ ಐತಾಳ, ಸುರೇಶ ಆನಗಳ್ಳಿ ಅವರೊಂದಿಗೆ ಕೆಲಸ ಮಾಡಿದ್ದಾರೆ.

ತುಘಲಕ್, ಅವಸ್ಥೆ, ರಾಜಾರಾಣಿ, ಕ್ರಮವಿಕ್ರಮ, ತಲಕಾಡುಗೊಂಡ, ಶಾಕುಂತಲಾ ಸೇರಿದಂತೆ 40ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದಲ್ಲದೇ ಕಿನ್ನರ ಮೇಳ, ನೀನಾಸಮ್, ಮೈಸೂರು ರಂಗಾಯಣ... ಇನ್ನೂ ಅನೇಕ ನಾಟಕ ತಂಡಗಳ ಜತೆ ನಟಿಯಾಗಿ, ವಸ್ತ್ರವಿನ್ಯಾಸಯಾಗಿ, ಕೆಲಸ ಮಾಡಿದ ಅನುಭವದ ಜತೆಗೆ ಹಲವಾರು ಮಕ್ಕಳ ನಾಟಕಗಳನ್ನೂ ನಿರ್ದೇಶಿಸಿದ್ದಾರೆ. ರಂಗಾಯಣ ಮೈಸೂರಿನಲ್ಲಿ ಚಿಣ್ಣರ ಮೇಳ ಮುಂತಾದ ರಂಗ ಚಟುವಟಿಕೆಯಲ್ಲೂ ಸಕ್ರಿಯ ಕೆಲಸ ಮಾಡಿದ್ದಾರೆ.