ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೈಪ್‌ಲೈನ್ ಒಡೆದು ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದ್ದು, ಬರ ಎದುರಿಸುತ್ತಿರುವ ರೈತರಿಗೆ ಬರೆ ಎಳೆದಂತಾಗಿದೆ.
ಹೂವಿನಹಡಗಲಿ: ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೈಪ್‌ಲೈನ್ ಒಡೆದು ಲಕ್ಷಾಂತರ ಮೌಲ್ಯದ ಬೆಳೆ ನಾಶವಾಗಿದ್ದು, ಬರ ಎದುರಿಸುತ್ತಿರುವ ರೈತರಿಗೆ ಬರೆ ಎಳೆದಂತಾಗಿದೆ.
ತಾಲೂಕಿನ ರಾಜವಾಳ ಬಳಿಯ ಜಾಕ್ವೆಲ್ ನಿರ್ಮಿಸಿ ಅಲ್ಲಿಂದ ಕೂಡ್ಲಿಗಿ ತಾಲೂಕಿನ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪೈಪ್‌ಲೈನ್ ತಿಪ್ಪಾಪುರ ಬಳಿ ಗುರುವಾರ ರಾತ್ರಿ ಏಕಾಏಕಿ ಒಡೆದಿದ್ದು, 100 ಅಡಿ ಎತ್ತರಕ್ಕೆ ನೀರು ಚಿಮ್ಮಿದೆ. ಇದರ ರಭಸಕ್ಕೆ ಅಕ್ಕಪಕ್ಕದ ಜಮೀನುಗಳ ಬೆಳೆಗಳು ಬೇರು ಸಮೇತ ಕಿತ್ತು ಹೋಗಿವೆ.10 ಎಕರೆ ಬೆಳೆ ಕೊಚ್ಚಿ ಹೋಯ್ತು:
ಪಟ್ಟಣದ ರೈತ ಸತ್ಯನಾರಾಯಣ ರಾವ್ ಅವರ 18 ತೆಂಗು, 200 ಅಡಕೆ ಮರಗಳು ನೀರಿನ ಕೊಡೆತಕ್ಕೆ ಕೊಚ್ಚಿ ಹೋಗಿವೆ. ನೀಲಕಂಠರಾವ್‌ಗೆ ಸೇರಿದ್ದ 3 ಎಕರೆ ಕಬ್ಬಿನ ಬೆಳೆ ಬೇರು ಸಮೇತ ಕಿತ್ತುಹೋಗಿದೆ. ಹನಿ ನೀರಾವರಿ ಪೈಪ್‌ಗಳು ಹಾಗೂ 20 ಟ್ರಿಪ್‌ನಷ್ಟು ಕೊಟ್ಟಿಗೆ ಗೊಬ್ಬರವೂ ಹಳ್ಳ ಸೇರಿವೆ. ಗಂಟಿ ಆಸೀಫ್, ಗಂಟಿ ರಾಬೀಯಾ ಅವರ 4 ಎಕರೆ ಪ್ರದೇಶದ ಈರುಳ್ಳಿ ಮತ್ತು ಮೆಕ್ಕೆಜೋಳ ಬೆಳೆ ನೀರಿನ ಹರಿವಿಗೆ ಕೊಚ್ಚಿ ಹೋಗಿ ಬೆಳೆ ಹಳ್ಳದ ಪಾಲಾಗಿದೆ. 2 ಕೊಳವೆ ಬಾವಿಗಳಲ್ಲಿ ಮಣ್ಣಿನ ಹೂಳು ತುಂಬಿಕೊಂಡು ಮೋಟಾರ್ ಕೆಟ್ಟು ಹೋಗಿವೆ. ಉಳಿದಂತೆ ಸಾಯಿರಾಮ್ ಅವರಿಗೆ ಸೇರಿದ್ದ 2 ಎಕರೆ ಬಾಳೆ, ತೆಂಗು ಬೆಳೆಗಳು ಹಾನಿಯಾಗಿದ್ದು, ಜಮೀನಿನ ಫಲವತ್ತಾದ ಮಣ್ಣು ಹಳ್ಳದ ಪಾಲಾಗಿ ಭೂಮಿ ಬಂಜರು ಆಗಿದೆ. ಇದರ ಪರಿಣಾಮ ಲಕ್ಷಾಂತರ ಬೆಳೆ ಹಾನಿ ಅನುಭವಿಸುವಂತಾಗಿದೆ.ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆಯ ಪೈಪ್‌ಲೈನ್ ಒಡೆದು ಅಕ್ಕಪಕ್ಕದ ರೈತರ, ಜಮೀನುಗಳಿಗೆ ನೀರು ನುಗ್ಗಿದೆ. ಈ ಯೋಜನೆಯು 5 ವರ್ಷಗಳ ಕಾಲ ಗುತ್ತಿಗೆದಾರರ ನಿರ್ವಹಣೆ ಇದೆ. ನಂತರದಲ್ಲಿ ನಮ್ಮ ಇಲಾಖೆಗೆ ಹಸ್ತಾಂತರ ಮಾಡುತ್ತಾರೆ ಎನ್ನುತ್ತಾರೆ, ಸಿಂಗಟಾಲೂರು ಏತ ನೀರಾವರಿ ಯೋಜನೆಯ ಅಧಿಕಾರಿಗಳು.
ಗುತ್ತಿಗೆದಾರರು ಪೈಪ್‌ಲೈನ್ ಮಾಡುವ ಸಂದರ್ಭದಲ್ಲಿ ಕಲ್ಲು ಮಣ್ಣಿನ ರಾಶಿಯನ್ನು, ಜಮೀನಿನಲ್ಲೇ ಬಿಟ್ಟು ಹೋಗಿದ್ದು ಇದು ಬಿತ್ತನೆಗೆ ಅಡ್ಡಿಯಾಗಿತ್ತು, ಮಹಿಳಾ ಸಂಘದಲ್ಲಿ ₹1 ಲಕ್ಷ ಸಾಲ ಮಾಡಿ ಜೆಸಿಬಿಯಿಂದ ಹೊರಗೆ ಹಾಕಿದ್ದೇನೆ. ಜತೆಗೆ ಪೈಪ್‌ಲೈನ್ ಒಡೆದ ಪರಿಣಾಮ ಈರುಳ್ಳಿ, ಮೆಕ್ಕೆಜೋಳ ಬೆಳೆ ಮಣ್ಣಿನ ಜತೆಗೆ ಕೊಚ್ಚಿ ಹೋಗಿದೆ. ಕೊಳವೆ ಬಾವಿ ನೀರಿನಿಂದ ಉತ್ತಮ ಬೆಳೆ ಬಂದಿತ್ತು, ಕಣ್ಣುಂದೆ ಕೊಚ್ಚಿ ಹೋಗಿದೆ. ನೀರಿನ ರಭಸಕ್ಕೆ 2 ಕೊಳವೆ ಬಾವಿಗಳ ತುಂಬಾ ಮಣ್ಣು ತುಂಬಿಕೊಂಡು ಮೋಟಾರ್ ಹಾನಿಯಾಗಿದೆ. ಎಲ್ಲ ನಷ್ಟವನ್ನು ಗುತ್ತಿಗೆದಾರರು ಸೂಕ್ತ ಪರಿಹಾರ ನೀಡಬೇಕು ಎಂದು ಗಂಟಿ ರಾಬೀಯಾ ಕಣ್ಣೀರು ಸುರಿಸುತ್ತ ತಮ್ಮ ನೋವು ತೋಡಿಕೊಂಡರು. ಹುಲುಸಾಗಿ ಬೆಳೆದು ಫಲ ನೀಡುವ ಹಂತಕ್ಕೆ ಬಂದಿದ್ದ ಅಡಕೆ, ತೆಂಗು ಬೆಳೆ ನೀರಿನ ರಭಸಕ್ಕೆ ಗಿಡಗಳು ಮುರಿದು ಹೋಗಿವೆ. 80 ಅಡಕೆ ಗಿಡಗಳು ಬೇರು ಸಮೇತ ಕಿತ್ತು ಹೋಗಿವೆ. 20 ಟ್ರಿಪ್ ಕೊಟ್ಟಿಗೆ ಗೊಬ್ಬರ ನೀರು ಪಾಲಾಗಿದೆ. ಕೂಡಲೇ ಗುತ್ತಿಗೆದಾರರು ಭೇಟಿ ನೀಡಿ ಪರಿಹಾರ ನೀಡಲಿ ಎನ್ನುತ್ತಾರೆ ಸತ್ಯನಾರಾಯಣ ರಾವ್.