ಕನ್ನಡಪ್ರಭ ವಾರ್ತೆ ಚವಡಾಪುರ
ಕಳೆದ ನಾಲ್ಕು ವರ್ಷಗಳಿಂದ ಮಳೆ ಬಾರದೆ ಬ್ಯಾರೇಜ್‌ನಲ್ಲಿ ನೀರು ಬರೀದಾಗಿತ್ತು. ಬಾಗಿನ ಅರ್ಪಿಸಿರಲಿಲ್ಲ. ಈ ವರ್ಷ ಮಳೆಯ ಲಕ್ಷಣಗಳು ಉತ್ತಮವಾಗಿದ್ದು, ಮುಂಗಾರು ಆರಂಭದಲ್ಲೇ ಬ್ಯಾರೇಜ್ ಭರ್ತಿಯಾಗಿದೆ. ಹೀಗಾಗಿ ಬಾಗಿನ ಅರ್ಪಿಸುತ್ತಿದ್ದೇನೆ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.ಅಫಜಲ್ಪುರ ತಾಲೂಕಿನ ಪ್ರಮುಖ ನೀರಾವರಿ ಯೋಜನೆಯಾಗಿರುವ ಸೊನ್ನ ಗ್ರಾಮದ ಭೀಮಾ ಬ್ಯಾರೇಜ್ ಭರ್ತಿಯಾಗಿದ್ದು, ನದಿಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಸೊನ್ನ ಬ್ಯಾರೇಜ್ ಆರಂಭದಲ್ಲಿ 100 ಕೋಟಿ ವೆಚ್ಚದಲ್ಲಿ ಶುರುವಾಗಿ 1200 ಕೋಟಿ ಖರ್ಚು ಮಾಡಲಾಯಿತು. ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿದರೂ ಕೂಡ ಇಡೀ ತಾಲೂಕಿನಾದ್ಯಂತ ನೀರು ತಲುಪಿಸಲು ಸಾಧ್ಯವಾಗಲಿಲ್ಲ. ಭೀಮಾ ನದಿ ದಂಡೆಯ ಊರುಗಳ ರೈತರು ಮಾತ್ರ ಬ್ಯಾರೇಜ್‌ನ ಲಾಭ ಪಡೆದು ವಾಣಿಜ್ಯ ಬೆಳೆಗಳನ್ನು ಬೆಳೆದು ಸ್ಥಿತಿವಂತರಾಗಿದ್ದಾರೆ. ನದಿ ದಂಡೆಯ ರೈತರಂತೆ ಉಳಿದ ಊರುಗಳ ರೈತರು ಸ್ಥಿತಿವಂತರಾಗಬೇಕೆನ್ನುವುದು ನನ್ನ ಅಭಿಲಾಷೆಯಾಗಿದೆ. ಸೊನ್ನ ಬ್ಯಾರೇಜ್‌ನ ನೀರು ನದಿ ಇಲ್ಲದ ಸ್ಟೇಷನ್ ಗಾಣಗಾಪೂರ ಭಾಗದ ವರೆಗೆ ಹರಿಸುವ ಕೆಲಸ ಮಾಡಲಾಗುತ್ತದೆ ಎಂದರು.ಇನ್ನೂ ಹಳ್ಳ-ಕೊಳ್ಳಗಳ ನೀರು ಹರಿದು ಹೋಗದಂತೆ ತಡೆ ಹಿಡಿದು ಅಂತರ್ಜಲ ಮಟ್ಟ ಹೆಚ್ಚಿಸುವ ಸಲುವಾಗಿ ವಿನೂತನ ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಅಫಜಲ್ಪುರ ಹಾಗೂ ಮಾನ್ವಿ ತಾಲೂಕುಗಳಿಗೆ ಮಾತ್ರ ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಏಜೆನ್ಸಿ ಕೂಡ ಗುರುತು ಮಾಡಲಾಗಿದ್ದು, ಶೀಘ್ರವೇ ಟೆಂಡರ್ ಆಗಿ ಕಾಮಗಾರಿ ಆರಂಭವಾಗಲಿದೆ. ಈ ಯೋಜನೆ ಜಾರಿಯಿಂದ ತಾಲೂಕಿನಾದ್ಯಂತ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಲಿದೆ ಎಂದು ತಿಳಿಸಿದರು.
ಕೆಎನ್‌ಎನ್‌ಎಲ್ ಅಧಿಕಾರಿ ಸಂತೋಷ ಸಜ್ಜನ ಮಾತನಾಡಿ, 3.166 ಟಿಎಂಸಿ ಸಾಮರ್ಥ್ಯದ ಬ್ಯಾರೇಜ್ ಪ್ರತಿ ಬಾರಿ ಜುಲೈ ಅಂತ್ಯ ಅಥವಾ ಆಗಸ್ಟ್ ತಿಂಗಳಲ್ಲಿ ಬ್ಯಾರೇಜ್ ಭರ್ತಿಯಾಗುತ್ತಿತ್ತು. ಆದರೆ ಈ ಬಾರಿ ಮುಂಗಾರು ಹಂಗಾಮಿನ ಮಳೆಗಳು ಉತ್ತಮವಾಗಿ ಬಂದಿದ್ದರಿಂದ ಜೂನ್ ತಿಂಗಳಲ್ಲೇ ಬ್ಯಾರೇಜ್ ಭರ್ತಿಯಾಗಿದೆ. ಸಧ್ಯ ಒಂದು ಗೇಟ್‌ನಿಂದ ಸ್ವಲ್ಪ ಮಟ್ಟಿನ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇನ್ನೂ ಹೆಚ್ಚಿನ ಒಳಹರಿವು ಬಂದರೆ ಇನ್ನಷ್ಟು ಗೇಟ್‌ಗಳನ್ನು ಮೇಲೆತ್ತಿ ನೀರು ಹೊರಬಿಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮಳೇಂದ್ರ ಸಂಸ್ಥಾನ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ, ಮುಖಂಡರಾದ ಮಹಾದೇವಪ್ಪ ಕಲಕೇರಿ, ದಯಾನಂದ ದೊಡ್ಮನಿ, ಶಿವಾನಂದ ಗಾಡಿ, ಮಹೇಶ ಆಲೇಗಾಂವ, ಶರಣು ಕುಂಬಾರ, ರೇಣುಕಾ ಸಿಂಗೆ, ಜ್ಞಾನೇಶ್ವರಿ ಪಾಟೀಲ, ಸಂಧ್ಯಾ ಪವಾರ, ದತ್ತು ಘಾಣೂರ, ಚಂದ್ರಕಾಂತ ಸೀತನೂರ, ತಹಸೀಲ್ದಾರ್ ಸಂಜೀವಕುಮಾರ ದಾಸರ್, ಸಿಪಿಐ ಚನ್ನಯ್ಯ ಹಿರೇಮಠ, ಪಿಎಸ್‌ಐ ಮಡಿವಾಳಪ್ಪ ಭಾಗೋಡಿ ಸೇರಿದಂತೆ ಕೆಎನ್‌ಎನ್‌ಎಲ್ ಅಧಿಕಾರಿಗಳು, ಸಿಬ್ಬಂದಿ ಇದ್ದರು.