ಕನ್ನಡಪ್ರಭ ವಾರ್ತೆ ಮೈಸೂರು
ಸೊಸೈಟಿಯ ವೃತ್ತಿಪರ ನಿರ್ದೇಶಕ ಹಾಗೂ ಚಿಂತಕ ಪ್ರೊ.ಎಚ್. ಗೋವಿಂದಯ್ಯ ಮಾತನಾಡಿ, ಭೀಮ ಜ್ಯೋತಿ ಸೌಹಾರ್ಧ ಸಹಕಾರಿ ಸಂಘವು 5 ವರ್ಷಗಳಿಂದ ಸಹಕಾರಿಯ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಾಘನೀಯ ಎಂದರು.
ಸಹಕಾರಿ ಸಂಘಗಳು ಶೋಷಿತ, ಸೌಲಭ್ಯ ವಂಚಿತ ಸಮುದಾಯಗಳನ್ನು ಸಹಕಾರಿ ತತ್ವದ ಮೂಲಕ ಒಗ್ಗೂಡಿಸಿ, ಅವರಲ್ಲಿ ಜಾಗೃತಿ ಮೂಡಿಸುವ ದೊಡ್ಡ ವೇದಿಕೆಯಾಗಿದೆ. ಅವು ಸಹಕಾರಿ ಸಂಘಗಳೇ ಆಗಿವೆ. ಸಮಾಜದಲ್ಲಿ ಹಿಂದುಳಿದ ಸಮುದಾಯಗಳನ್ನು ಸಂಘಟಿಸಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮುನ್ನಡೆಗೆ ತರುವ ಪ್ರೇರಕ ಶಕ್ತಿ ಸಹಕಾರಿ ಕ್ಷೇತ್ರವಾಗಿದೆ ಎಂದು ಅವರು ತಿಳಿಸಿದರು.ಹಣಬಲ, ಜನಬಲ ನಡುವೆ ಜನಬಲವೇ ಎಂದಿಗೂ ಗೆಲ್ಲುತ್ತದೆ ಎಂದು ಸಹಕಾರಿ ಕ್ಷೇತ್ರವು ಸಾಬೀತುಪಡಿಸಿದೆ. ಸಹಕಾರಿ ಸಂಘಗಳು ಶೋಷಿತ ಸಮುದಾಯಕ್ಕೆ ಹೊಸ ಚೈತನ್ಯ, ಹೊಸ ಬೆಳಕು ನೀಡುವ ಮೂಲಕ ನಾಯಕತ್ವನ್ನು ಬೆಳಸುತ್ತದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದಲ್ಲಿ ಅಂತಹ ಸಂಘಗಳು ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಲಿದೆ ಎಂದರು.
ಭೀಮ ಜ್ಯೋತಿ ಸಹಕಾರ ಸಂಘವು ಮುಂದಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಹೊಸ ಚರಿತ್ರೆ ಸೃಷ್ಟಿಸಲಿದೆ ಎಂದು ಆಶಯ ವ್ಯಕ್ತಪಡಿಸಿದರು.
ಪ್ರೊ.ಸಿ. ರಾಮಸ್ವಾಮಿ ಅವರು ಉದ್ಘಾಟನ ಭಾಷಣ ನೆರವೇರಿಸಿದರು. ಮಾಜಿ ಮೇಯರ್ ನಾರಾಯಣ, ಸಾಮಾಜಿಕ ಹೋರಾಟಗಾರ ಅರಕಲವಾಡಿ ನಾಗೇಂದ್ರ, ಬಾಬೂ ಜಗಜೀವನರಾಮ್ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಸದಾಶಿವ, ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಂಘದ ಉಪಾಧ್ಯಕ್ಷ ಎನ್. ಬಸವರಾಜು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ನಿರ್ದೇಶಕ ಎನ್. ಲೋಕೇಶ್ ನಿರೂಪಿಸಿದರು. ವಸಂತಮ್ಮ ವಂದಿಸಿದರು.