ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ

KannadaprabhaNewsNetwork |  
Published : Sep 27, 2025, 01:00 AM IST
ಆಲಮೇಲ | Kannada Prabha

ಸಾರಾಂಶ

ಎರಡು-ಮೂರು ದಿನಗಳಿಂದ ವಿಶ್ರಾಂತಿ ಕೊಟ್ಟಿದ್ದ ಮಳೆ ಶುಕ್ರವಾರ ಇಡೀ ದಿನ ಸುರಿದ ಪರಿಣಾಮ ಜನತೆಯಲ್ಲಿ ಭಯ ಹುಟ್ಟಿಸಿದೆ.

ಕನ್ನಡಪ್ರಭ ವಾರ್ತೆ ಆಲಮೇಲ

ತಾಲೂಕಿನಲ್ಲಿ ಹರಿಯುವ ಭೀಮಾನದಿ ಪ್ರವಾಹಕ್ಕೆ ಒಳಗಾಗಿ ಜನರ ಬದುಕು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಯಾವಾಗ ಏನಾಗುತ್ತದೆ ಎಂಬ ಭಯದಲ್ಲಿ ಜನತೆ ಬದುಕುತ್ತಿದ್ದಾರೆ. ಕಳೆದ ಒಂದು ವಾರದಿಂದ ಏರುತ್ತಾ ಸಾಗಿರುವ ಭೀಮಾನದಿ ನೀರಿನ ಹರಿವು, ಗುರುವಾರ ರಾತ್ರಿಯಿಡೀ ಏರಿಕೆಯಾಗಿ ಶುಕ್ರವಾರ ಸಂಜೆಯವರೆಗೆ ಅದೇ ಸ್ಥಿತಿಯಲ್ಲಿ ಮುಂದುವರೆದಿದೆ.

ಗುರುವಾರ ರಾತ್ರಿಯಿಡೀ ಹಾಗೂ ಶುಕ್ರವಾರ ದಿನವಿಡೀ ಸುರಿದ ಮಳೆಗೆ ಜನ ಕಂಗಾಲಾಗಿದ್ದಾರೆ. ಎರಡು-ಮೂರು ದಿನಗಳಿಂದ ವಿಶ್ರಾಂತಿ ಕೊಟ್ಟಿದ್ದ ಮಳೆ ಶುಕ್ರವಾರ ಇಡೀ ದಿನ ಸುರಿದ ಪರಿಣಾಮ ಜನತೆಯಲ್ಲಿ ಭಯ ಹುಟ್ಟಿಸಿದೆ. ಮಳೆಯೊಂದಿಗೆ ತಂಪಾದ ಗಾಳಿ ಬೀಸುತ್ತಿದ್ದು ಇದು ಕೂಡ ಜನರ ಜೀವನದ ಮೇಲೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ನಲ್ಲಿ ಗುರುವಾರ 3 ಲಕ್ಷ 50 ಸಾವಿರ ಕ್ಯುಸೆಕ್ಸ್ ನೀರು ಹರಿಯುತ್ತಿತ್ತು ಶುಕ್ರವಾರ ಬೆಳಗಿನ ಜಾವ ಬ್ಯಾರೇಜಿನಲ್ಲಿ 3 ಲಕ್ಷ 55 ಸಾವಿರ ಕ್ಯುಸೆಕ್ಸ್ ನೀರು 28 ಗೇಟ್ ಮೂಲಕ ಹೊರಬಿಡಲಾಗುತ್ತಿದೆ.

ಸೀನಾ ನದಿಯಿಂದ 2 ಲಕ್ಷ 15 ಸಾವಿರ ಕ್ಯು, ಉಜನಿ ಮತ್ತು ವೀರ ಜಲಾಶಯಗಳಿಂದ 80 ಸಾವಿರ ಕ್ಯು, ಅಲ್ಲದೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾನದಿ ಪಾತ್ರದಲ್ಲಿ ಬೀಳುತ್ತಿರುವ ಮಳೆಯಿಂದ ಸುಮಾರು 60 ಸಾವಿರ ಕ್ಯು. ಒಟ್ಟು 3 ಲಕ್ಷ 55 ಸಾವಿರ ಕ್ಯು. ನೀರು ಸೊನ್ನ ಬ್ಯಾರೇಜ್‌ನಲ್ಲಿ ಹರಿಯುತ್ತಿದೆ.

ಪ್ರವಾಹ ಸೃಷ್ಟಿ ಮಾಡಿರುವ ಸೀನಾ ನದಿ ಪಾತ್ರದಲ್ಲಿ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿರುವುದರಿಂದ ಮುಂದಿನ ಎರಡೂ ದಿನ ಸ್ವಲ್ಪ ಪ್ರವಾಹ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಅಫ್ಜಲಪುರ ಕೆಬಿಜಿಎನ್‌ಎನ್ಎಲ್ ಎಇಇ ಸಂತೋಷ್ ಕುಮಾರ್ ಸಜ್ಜನ ತಿಳಿಸಿದ್ದಾರೆ.

ಭೀಮಾ ನದಿ ತೀರದ ಗ್ರಾಮಗಳಾದ ಕಡಣಿ, ತಾರಾಪುರ, ತಾವರಖೇಡ, ಬ್ಯಾಡಗಿಹಾಳ, ಕುರುಬತಹಳ್ಳಿ ,ಮಡ್ನಳ್ಳಿ, ದೇವಣಗಾಂವ, ಶಂಬೆವಾಡ, ಕಡ್ಲೆವಾಡ, ಕುಮಸಗಿ, ಚಿಕ್ಕ ಹಾವಳಗಿ, ಬಗಲೂರ, ಶಿರಸಿಗಿ, ಸೇರಿದಂತೆ ಅನೇಕ ಗ್ರಾಮಗಳ ಜನರು, ತೋಟದವಸ್ತಿ ಜನರು, ಜಾನುವಾರುಗಳು ಹಾಗೂ ಜಮೀನುಗಳಲ್ಲಿ ನೀರು ಹೊಕ್ಕಿರುವ ಪರಿಣಾಮ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಶುಕ್ರವಾರ ಕಾಳಜಿ ಕೇಂದ್ರಗಳನ್ನು ಸರ್ಕಾರ ತೆರೆದಿದ್ದು, ತಾರಾಪುರದಲ್ಲಿ 3 ಕುಟುಂಬಗಳು, ತಾವರಖೇಡದಲ್ಲಿ 3 ಕುಟುಂಬ, ದೇವಣಗಾಂವ 3 ಕುಟುಂಬ, ಕಡ್ಲೆವಾಡದಲ್ಲಿ 6 ಕುಟುಂಬ ಕುಮಸಿಗಿಯಲ್ಲಿ 40 ಕುಟುಂಬಗಳನ್ನು ನೋಡಲ್ ಅಧಿಕಾರಿ ಕೃಷಿ ಇಲಾಖೆಯ ಎಡಿ ಪ್ರಶಾಂತ ಸನ್ನಿ, ಸಿಂದಗಿಯ ತಹಸಿಲ್ದಾರ್ ಕರೆಪ್ಪ ಬೆಳ್ಳಿ ಅವರ ನೇತೃತ್ವದಲ್ಲಿ ರಕ್ಷಿಸಿ, ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಹಳೆ ತಾರಾಪುರದಲ್ಲಿ ವಾಸವಾಗಿರುವ ಉಳಿದ ಎಲ್ಲಾ ಕುಟುಂಬಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿಲಾಗುತ್ತಿದೆ. ದೇವಣಗಾಂವದ ಹನುಮಾನ್ ದೇವಸ್ಥಾನ, ಶಾಂತೇಶ್ವರ ದೇವಸ್ಥಾನ, ಅಂಬಿಗರ ಚೌಡಯ್ಯ ದೇವಸ್ಥಾನ, ಕದಂಬ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆ, ಬಾಲಕರ ವಸತಿ ನಿಲಯ, ಪ್ರಗತಿಪರ ಶಿಕ್ಷಣ ಸಂಸ್ಥೆಯ ಆವರಣ ಸಮೀಪ ನೀರು ನುಗ್ಗಿದೆ.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ವಿದ್ಯಾರ್ಥಿಗಳು ನಾಯಕತ್ವ ವಹಿಸಿಕೊಳ್ಳಲು ಮುಂದೆ ಬನ್ನಿ