ಅಫಜಲಪುರ ತಾಲೂಕಿನ ರೈತರ ಬಹುದಿನಗಳ ಕನಸಾಗಿದ್ದ ಭೀಮಾ ನದಿ ನೀರನ್ನು ಕೆರೆಗಳಿಗೆ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದ್ದು, 314 ಕೋಟಿ ರು. ವೆಚ್ಚದಲ್ಲಿ ಅಫಜಲಪುರ ಮತಕ್ಷೇತ್ರದ 10 ಕೆರೆಗಳನ್ನು ತುಂಬಿಸುವ ಯೋಜನೆಯಡಿ 2ನೇ ಕೆರೆಯಾದ ಬಳ್ಳೂರಗಿ ಕೆರೆಗೆ ನೀರು ತುಂಬಿಸುವ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಅಫಜಲಪುರ
ಅಫಜಲಪುರ ತಾಲೂಕಿನ ರೈತರ ಬಹುದಿನಗಳ ಕನಸಾಗಿದ್ದ ಭೀಮಾ ನದಿ ನೀರನ್ನು ಕೆರೆಗಳಿಗೆ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಮತ್ತಷ್ಟು ವೇಗ ಸಿಕ್ಕಿದ್ದು, 314 ಕೋಟಿ ರು. ವೆಚ್ಚದಲ್ಲಿ ಅಫಜಲಪುರ ಮತಕ್ಷೇತ್ರದ 10 ಕೆರೆಗಳನ್ನು ತುಂಬಿಸುವ ಯೋಜನೆಯಡಿ 2ನೇ ಕೆರೆಯಾದ ಬಳ್ಳೂರಗಿ ಕೆರೆಗೆ ನೀರು ತುಂಬಿಸುವ ಪ್ರಾಯೋಗಿಕ ಕಾರ್ಯಕ್ಕೆ ಚಾಲನೆ ನೀಡಲಾಯಿತು.ಆಳಂದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಅಧ್ಯಕ್ಷ ಅರುಣಕುಮಾರ ಎಂ. ಪಾಟೀಲ ಅವರು ಬಳೂರ್ಗಿ ಕೆರೆಗೆ ಬಾಗಿನ ಅರ್ಪಿಸಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.ಬಿ.ಆರ್. ಪಾಟೀಲ ಮಾತನಾಡಿ, ಸತತ ಬರಗಾಲದಿಂದ ಬಳಲುತ್ತಿರುವ ಆಳಂದ ಮತ್ತು ಅಫಜಲಪುರ ತಾಲೂಕಿನ ಜನರಿಗೆ ಕುಡಿಯುವ ನೀರು ಹಾಗೂ ಕೃಷಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕೆರೆ ತುಂಬಿಸುವ ಯೋಜನೆ ರೂಪಿಸಿದೆ ಎಂದರು.2018ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಮಂಜೂರಾತಿ ನೀಡಿದ್ದು, ಆರಂಭದಲ್ಲಿ 118 ಕೋಟಿ ರು. ಅನುದಾನ ಬಿಡುಗಡೆಯಾಗಿತ್ತು. ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಾಗಿ ಪ್ರಸ್ತುತ ಸುಮಾರು 450 ಕೋಟಿ ರು. ಗೆ ತಲುಪಿದೆ. ಯೋಜನೆಯಡಿ ಒಟ್ಟು 36 ಕೆರೆಗಳನ್ನು ತುಂಬಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ ವೈ ಪಾಟೀಲ ಮಾತನಾಡಿ, ಭೀಮಾ ನದಿ ನೀರನ್ನು ಕೆರೆಗಳಿಗೆ ಹರಿಸುವುದು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿತ್ತು. ಇದೀಗ ಬಳ್ಳೂರಗಿ ಕೆರೆಗೆ ನೀರು ಹರಿಯುತ್ತಿರುವುದು ರೈತರಿಗೆ ಸಂತಸದ ಕ್ಷಣವಾಗಿದೆ. ನೀರು ಸಂಗ್ರಹವಾಗುವುದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದ್ದು, ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಸಹಕಾರಿಯಾಗಲಿದೆ. ಬರಪೀಡಿತ ಅಫಜಲಪುರ ಭಾಗದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.ಯೋಜನೆಯಡಿ ಉಳಿದ ಕೆರೆಗಳಿಗೂ ಹಂತ ಹಂತವಾಗಿ ನೀರು ಹರಿಸುವ ಮೂಲಕ ಕ್ಷೇತ್ರದ ನೀರಾವರಿ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಹೇಳಿದರು.ಬಿ.ಆರ್. ಪಾಟೀಲ ಅವರು ಸೂರತ್–ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಬಡದಾಳ ಸಮೀಪ ಹಾನಿಗೊಂಡ ಅಮರ್ಜಾ ಜಲಾಶಯದ ಪೈಪ್‌ಲೈನ್ ಕುರಿತು ಮಾಹಿತಿ ನೀಡಿ, ಸೆ. 10ರೊಳಗೆ ದುರಸ್ತಿ ಪೂರ್ಣಗೊಳಿಸುವುದಾಗಿ ಹೆದ್ದಾರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈಗಾಗಲೇ ಪೈಪ್ ಜೋಡಣೆ ಕಾರ್ಯ ಆರಂಭವಾಗಿದೆ ಎಂದು ತಿಳಿಸಿದರು.ಬಳ್ಳೂರಗಿ ಕೆರೆಗೆ ನೀರು ಹರಿಯುತ್ತಿದ್ದಂತೆ ರೈತರು ಸಂತಸ ವ್ಯಕ್ತಪಡಿಸಿ, ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸಿದರು. ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಗಿ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅಣವೀರಯ್ಯ ಮಠಪತಿ, ಸುರೇಶ ಗದಗಯ್ಯ ಮಠಪತಿ, ಶ್ರೀಮಂತ ಪಾಟೀಲ, ಶರಣಬಸಪ್ಪ ಪಾಟೀಲ ಸೇರಿದಂತೆ ನೀರಾವರಿ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ರೈತರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.