ಭೀಮಣ್ಣ ಖಂಡ್ರೆ ಸಮಾಜಮುಖಿ ಚಿಂತನೆಯಲ್ಲೇ ಬದುಕಿದವರು

KannadaprabhaNewsNetwork |  
Published : Jan 18, 2026, 01:45 AM IST
17ಎಚ್ಎಸ್ಎನ್8 : ಹೇಮಾವತಿ ಪ್ರತಿಮೆ ಬಳಿ ನಡೆದ ಶ್ರದ್ಧಾಂಜಲಿ ಸಭೆ. | Kannada Prabha

ಸಾರಾಂಶ

ನಮ್ಮ ಸಮಾಜಕ್ಕೆ ಇಂದು ದೊಡ್ಡ ಅನ್ಯಾಯವಾಗಿದೆ. ಅನೇಕ ವರ್ಷಗಳ ಕಾಲ ಸಮಾಜಕ್ಕಾಗಿ ದುಡಿದ ಮಹಾನ್ ಚೇತನವನ್ನು ನಾವು ಕಳೆದುಕೊಂಡಿದ್ದೇವೆ. ಒಂದು ಕಾಲದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ನಮ್ಮ ಸಮಾಜವನ್ನು ಮೇಲ್ವರ್ಗಕ್ಕೆ ಸೇರಿಸಿದಾಗ, ಅದನ್ನು ವಿರೋಧಿಸಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ ಧೈರ್ಯಶಾಲಿ ನಾಯಕ ಭೀಮಣ್ಣ ಖಂಡ್ರೆ. ಅವರ ಹೋರಾಟದ ಫಲವಾಗಿ ಸಮಾಜವು ೩ಬಿ ಮೀಸಲಾತಿ ಪಡೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ವೀರಶೈವ ಲಿಂಗಾಯಿತ ಸಮಾಜದ ಹಿತಕ್ಕಾಗಿ ಜೀವನವಿಡೀ ಶ್ರಮಿಸಿದ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಶತಾಯುಷಿ ಭೀಮಣ್ಣ ಖಂಡ್ರೆ ಅವರ ನಿಧನವು ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸೀಗೆಗುಡ್ಡ ಮಲ್ಲೇಶ್ವರ ಮಠದ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ವಿಷಾದಿಸಿದರು.

ನಗರದ ಹೇಮಾವತಿ ಪ್ರತಿಮೆ ಬಳಿ ವೀರಶೈವ ಲಿಂಗಾಯಿತ ಹಾಗೂ ಇತರೆ ಸಮಾಜದಿಂದ ಶನಿವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಭೀಮಣ್ಣ ಖಂಡ್ರೆ ಭಾವಚಿತ್ರಕ್ಕೆ ಪುಷ್ಪನಮನ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಇಂದು ದೊಡ್ಡ ಅನ್ಯಾಯವಾಗಿದೆ. ಅನೇಕ ವರ್ಷಗಳ ಕಾಲ ಸಮಾಜಕ್ಕಾಗಿ ದುಡಿದ ಮಹಾನ್ ಚೇತನವನ್ನು ನಾವು ಕಳೆದುಕೊಂಡಿದ್ದೇವೆ. ಒಂದು ಕಾಲದಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ನಮ್ಮ ಸಮಾಜವನ್ನು ಮೇಲ್ವರ್ಗಕ್ಕೆ ಸೇರಿಸಿದಾಗ, ಅದನ್ನು ವಿರೋಧಿಸಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ ಧೈರ್ಯಶಾಲಿ ನಾಯಕ ಭೀಮಣ್ಣ ಖಂಡ್ರೆ. ಅವರ ಹೋರಾಟದ ಫಲವಾಗಿ ಸಮಾಜವು ೩ಬಿ ಮೀಸಲಾತಿ ಪಡೆಯಲು ಸಾಧ್ಯವಾಯಿತು ಎಂದು ಸ್ಮರಿಸಿದರು.

ಇಡೀ ಕುಟುಂಬವೇ ಸಮಾಜಕ್ಕಾಗಿ ದುಡಿದ ಅಪರೂಪದ ಮನೆತನ ಅದು. ಇಂದಿನ ಸಚಿವ ಈಶ್ವರ್ ಖಂಡ್ರೆ ಅವರ ತಂದೆಯೇ ಭೀಮಣ್ಣ ಖಂಡ್ರೆ. ಅವರ ಪುತ್ರರೂ ಸಹ ಸಂಸದರಾಗಿ ರಾಜಕೀಯ ಹಾಗೂ ಸಾಮಾಜಿಕ ಸೇವೆಯನ್ನು ಮುಂದುವರಿಸಿಕೊಂಡಿದ್ದಾರೆ. ರಾಜಕೀಯ ಹಿನ್ನೆಲೆ ಇದ್ದರೂ ಸಹ ಸದಾ ಹಕ್ಕು-ನ್ಯಾಯದ ಪರವಾಗಿ ನಿಂತಿದ್ದ ಅವರು ಇಂದು ಪರಮಾತ್ಮನಲ್ಲಿ ಲೀನರಾಗಿದ್ದಾರೆ. ನಾವು ಅವರನ್ನು ಸದಾ ಪ್ರಾತಃಸ್ಮರಣೀಯ ವ್ಯಕ್ತಿಯಾಗಿ ನೆನಪಿಸಿಕೊಳ್ಳಬೇಕು. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಮಹಾಸ್ವಾಮೀಜಿ ಪ್ರಾರ್ಥಿಸಿದರು.

ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಮಾತನಾಡಿ, ಭೀಮಣ್ಣ ಖಂಡ್ರೆ ಅವರು ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ರಾಷ್ಟ್ರೀಯ ಘಟಕದ ಮಾಜಿ ಅಧ್ಯಕ್ಷರಾಗಿ ೧೨ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಾಲ್ಕು ಅವಧಿಗಳ ಶಾಸಕರಾಗಿ, ಎರಡು ಅವಧಿಗಳ ವಿಧಾನಪರಿಷತ್ ಸದಸ್ಯರಾಗಿ, ಮಂತ್ರಿಯಾಗಿ ಕಾರ್ಯನಿರ್ವಹಿಸಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ೧೦೨ ವರ್ಷಗಳ ದೀರ್ಘ ಆಯುಷ್ಯ ಪಡೆದಿದ್ದ ಅವರು ಕೊನೆಯವರೆಗೂ ಸಮಾಜಮುಖಿ ಚಿಂತನೆಯಲ್ಲೇ ಬದುಕಿದರು ಎಂದು ಹೇಳಿದರು. ಬೆಂಗಳೂರು ನಗರದಲ್ಲಿ ಅಖಿಲ ಭಾರತ ಲಿಂಗಾಯತ ವೀರಶೈವ ಸಮಾಜದ ಕಟ್ಟಡ ನಿರ್ಮಾಣಕ್ಕೆ ಅಪಾರ ಶ್ರಮ ವಹಿಸಿದವರಲ್ಲಿ ಭೀಮಣ್ಣ ಖಂಡ್ರೆ ಪ್ರಮುಖರು. ಅವರ ನಿಧನವು ಲಿಂಗಾಯತ ವೀರಶೈವ ಸಮಾಜ ಮಾತ್ರವಲ್ಲ, ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಶತಾಯುಷಿ ಮಹಾನ್ ನಾಯಕನ ನಿಧನದ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನ ಆಚರಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ತಿಳಿಸಿದರು.

ಈ ಶ್ರದ್ಧಾಂಜಲಿ ಸಭೆಯಲ್ಲಿ ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಲಿಂಗಾಯತ ವೀರಶೈವ ಸಂಘದ ಉಪಾಧ್ಯಕ್ಷ ಭುವನಾಕ್ಷ, ಅಖಿಲ ಭಾರತ ಲಿಂಗಾಯತ ವೀರಶೈವ ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೇಲ್, ಜಿಲ್ಲಾ ಘಟಕದ ನಿರ್ದೇಶಕ ಶರತ್ ಭೂಷಣ್, ಬಸವ ಕೇಂದ್ರ ಜಿಲ್ಲಾ ಅಧ್ಯಕ್ಷ ಯು.ಎಸ್. ಬಸವರಾಜು, ರಾಜಶೇಖರ್‌, ಪ್ರದೀಪ್, ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು, ಭೀಮಣ್ಣ ಖಂಡ್ರೆ ಅವರ ಸೇವೆಯನ್ನು ಸ್ಮರಿಸಿ ಆತ್ಮಕ್ಕೆ ಶಾಂತಿ ಕೋರಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್‌ ಹಾದಿಯಲ್ಲಿ ನಡೆದರೆ ಬದುಕು ಸಾರ್ಥಕ; ಶಾಸಕ ಗಣೇಶ್‌ ಪ್ರಸಾದ್
ಒಲಂಪಿಕ್‌ನಲ್ಲಿ ನೌಕಕರು ಭಾಗವಹಿಸುವಂತಾಗಲಿ