ಕನ್ನಡಪ್ರಭ ವಾರ್ತೆ ವಿಜಯಪುರ
ತಾಲೂಕಿನ ನಾಗಠಾಣ ಗ್ರಾಮದಲ್ಲಿ ಅ.30ರಿಂದ ನ. 2ರ ವರೆಗೆ ಶ್ರೀ ಭೀರದೇವರ ಹಾಗೂ ಶ್ರೀ ಪರಮಾನಂದ ದೇವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ನಾಲ್ಕು ದಿನಗಳ ಕಾಲ ನಡೆದ ಭಂಡಾರದ ಒಡೆಯನ ಜಾತ್ರೆಗೆ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ಸೇರಿ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾಗುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ದೀಪಾವಳಿ ಅಮವಾಸ್ಯೆ ದಿನ ಭೀರದೇವರ ಹಾಗೂ ಪಾಡ್ಯಮಿ ದಿನ ಶ್ರೀ ಪರಮಾನಂದ ದೇವರ ಸಿಂಗಾರಗೊಂಡ ಚೌಕಿಯೊಂದಿಗೆ ಸಾರವಾಡ ಗೊಂಬೆ ಕುಣಿತ, ಕರಡಿ ಮಜಲು, ಡೊಳ್ಳು ವಾದ್ಯದೊಂದಿಗೆ ಭಕ್ತರ ಮನೆಗೆ ದರ್ಶನ ನೀಡುತ್ತ, ಗಂಗೆ ಸೀತಾಳದಲ್ಲಿ ಪೂಜೆ ಮುಗಿಸಿ, ಬಜಾರಕ್ಕೆ ಆಗಮನವಾಗುತ್ತದೆ. ಅಲ್ಲಿ ಭಕ್ತರಿಗೆ ದರ್ಶನ ಕೊಟ್ಟು ನಂತರ ಗುಡಿಗೆ ಪಲ್ಲಕ್ಕಿಗಳು ಆಗಮಿಸಿದವು. ಈ ವೇಳೆ ಭಕ್ತರು ಚೌಕಿ ಮತ್ತು ಪಲ್ಲಕ್ಕಿಗಳ ಮೇಲೆ ರಾಶಿ ರಾಶಿಗಟ್ಟಲೆ ಭಂಡಾರವನ್ನು ಅರ್ಪಿಸಿದರು. ಜೊತೆಗೆ ಖಾರಿಕ, ಕುರಿ ಉಣ್ಣೆಯನ್ನು ಹಾರಿಸುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿದರು. ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೇ ಎಲ್ಲರೂ ಈ ಜಾತ್ರೆಯಲ್ಲಿ ಭಾಗಿಯಾಗುವುದು ಇಲ್ಲಿನ ವಿಶೇಷ. ಸಂಪ್ರದಾಯದಂತೆ ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬ ಭಕ್ತರು ಭಂಡಾರವನ್ನು ದೇವಾಲಯ ಹಾಗೂ ದೇವರಿಗೆ ಅರ್ಪಿಸುತ್ತಾರೆ. ಭಂಡಾರದಲ್ಲಿ ಮಿಂದೆದ್ದ ಭಕ್ತರ ಜೀವನ ಪಾವನ ಎಂಬ ಅರ್ಥ ಹಾಗೂ ನಂಬಿಕೆ ಇದೆ.ಕೋಟ್:
ಭಕ್ತರು ದೇವರ ಬಳಿ ಬೇಡಿಕೊಂಡ ಹರಕೆಗಳನ್ನು ಭಂಡಾರ ಎರಚುವ ಮೂಲಕ ತೀರಿಸುತ್ತಾರೆ. ಜಾತ್ರಾ ಕಮಿಟಿ ಹಾಗೂ ಪರಮಾನಂದ ದಾಸೋಹ ಸಮಿತಿ ವತಿಯಿಂದ ನಿರಂತರ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯಲ್ಲಿ ಡೊಳ್ಳಿನ ಹಾಡಿಕೆ, ಭಾರ ಎತ್ತುವುದು, ಜಂಗಿ ಕುಸ್ತಿ, ಕಬಡ್ಡಿ, ಕ್ರಿಕೆಟ್, ಗುಡ್ಡಗಾಡು ಓಟ, ಸಾಮಾಜಿಕ ನಾಟಕದಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭೀರಪ್ಪ ಮತ್ತು ಪರಮಾನಂದ ದೇವರು ಭಕ್ತರ ಪಾಲಿಗೆ ಕಲ್ಪವೃಕ್ಷವಾಗಿದ್ದಾರೆ.ಪ್ರಭುಲಿಂಗ ಹಂಡಿ, ಜಾತ್ರಾ ಕಮಿಟಿ ಅಧ್ಯಕ್ಷ
ಜಾತ್ರೆಯಲ್ಲಿ ಕಮಿಟಿಯ ಪದಾಧಿಕಾರಿಗಳು, ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.