ದೀಪಾವಳಿ ಅಂಗವಾಗಿ ಮಹದೇಶ್ವರ ಜಾತ್ರಾ ಮಹೋತ್ಸವ । ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ
ತಾಲೂಕಿನ ಮಹದೇಶ್ವರಪುರದಲ್ಲಿ ದೀಪಾವಳಿ ಹಬ್ಬದಂದು ಮಹದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಲಕ್ಷ್ಮೀಸಾಗರ ಗ್ರಾಮಸ್ಥರು ಭಾನುವಾರ ಅದ್ಧೂರಿಯಾಗಿ ಹುಲಿವಾಹನೋತ್ಸವ ನಡೆಸಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಹುಲಿವಾಹನೋತ್ಸವ ಮೆರವಣಿಗೆಯನ್ನು ಅದ್ಧೂರಿಯಾಗಿ ಗ್ರಾಮದ ಯಜಮಾನರಾದ ಕಿಟ್ಟಪ್ಪಗೌಡ, ಎಲ್.ಡಿ.ಸಂಜಯ್, ಎಲ್.ಸಿ.ಶಶಿಕುಮಾರ್, ಎಲ್.ಕೆ.ರವಿ, ಬೆಟ್ಟೇಗೌಡ ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ನಡೆಸಲಾಯಿತು. ನೂರಾರು ಯುವಕರು, ಸಂಘ- ಸಂಸ್ಥೆಯ ಸದಸ್ಯರು, ಗ್ರಾಮಸ್ಥರು ಸಂಭ್ರಮಿಸಿದರು.ಜಾತ್ರೆ ಅಂಗವಾಗಿ ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಹುಲಿವಾಹನವನ್ನು ಬಣ್ಣ ಬಣ್ಣದ ಹೂ, ಹಣ್ಣುಗಳಿಂದ ಅಲಂಕರಿಸಿ ಸಿಂಗರಿಸಿದರು. ಬಳಿಕ ಯಜಮಾನರು ಹುಲಿವಾಹನಕ್ಕೆ ಮೊದಲ ಪೂಜೆ ಸಲ್ಲಿಸಿದರು. ನಂತರ ಗ್ರಾಮಸ್ಥರು, ಮಹಿಳೆಯರು ಸರತಿ ಸಾಲಿನಲ್ಲಿ ಪೂಜೆ ಸಲ್ಲಿಸಿದರು.
ಹುಲಿವಾಹನದ ಎದುರು ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ ಹರಕೆ ಹೊತ್ತ ಮಹಿಳೆಯರು ಬಾಯಿಬೀಗ ಹಾಕಿಕೊಂಡು ಹೂ- ಹಣ್ಣಿನ ಆರತಿಯೊಂದಿಗೆ ಸಾಗಿದರು. ಲಕ್ಷ್ಮೀ ಸಾಗರ ಗ್ರಾಮದ ಬೀದಿಗಳು ತಳಿರು ತೋರಣಗಳಿಂದ ಶೃಂಗಾರಗೊಂಡಿದ್ದವು. ಸುಮಾರು 2 ಗಂಟೆಗೂ ಹೆಚ್ಚುಕಾಲ ಹುಲಿವಾಹನೋತ್ಸವದ ಮೆರವಣಿಗೆ ನಡೆಸಿದ ನಂತರ 3 ಗಂಟೆಗೆ ಮಹದೇಶ್ವರಪುರ ಗ್ರಾಮದ ಮಹದೇಶ್ವರಸ್ವಾಮಿ ದೇವಸ್ಥಾನಕ್ಕೆ ತಲುಪಿತ್ತು.
ನಂತರ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಹುಲಿವಾಹನೋತ್ಸವ ಮೆರವಣಿಗೆ, ದೇಗುಲದ ಸುತ್ತಾ ಮೂರು ಸುತ್ತು ನಡೆಯಿತು. ಭಕ್ತರು ಭಕ್ತಿಭಾವ ಪ್ರದರ್ಶಿಸಿದರು. ಪೊಲೀಸರು ಸೂಕ್ತ ಪೊಲೀಸ್ ಬಂದೂಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.