ಹಗರಿಬೊಮ್ಮನಹಳ್ಳಿ: ಪಟ್ಟಣದ ತಂಬ್ರಹಳ್ಳಿ ರಸ್ತೆಯಲ್ಲಿ ಕಂಚಿನ ಪುತ್ಥಳಿ ಸಹಿತ ಕಿತ್ತೂರು ರಾಣಿ ಚೆನ್ನಮ್ಮನವರ ವೃತ್ತ ನಿರ್ಮಾಣಕ್ಕೆ ₹60 ಲಕ್ಷ ಅನುದಾನ ಒದಗಿಸಲಾಗಿದೆ. ಇದೇ ಆ. 23ರಂದು ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ ಎಂದು ಶಾಸಕರಾದ ಕೆ. ನೇಮಿರಾಜ್ ನಾಯ್ಕ ಪ್ರಕಟಿಸಿದರು.
ಕ್ಷೇತ್ರ ವ್ಯಾಪ್ತಿಯ ಬಹುದೊಡ್ಡ ಪಂಚಮಸಾಲಿ ಸಮಾಜ ರಾಜಕೀಯವಾಗಿ ಯಾವತ್ತಿಗೂ ಪಕ್ಷಾತೀತವಾಗಿ ತಮ್ಮನ್ನು ಬೆಂಬಲಿಸಿದೆ ಎಂದು ಹರ್ಷ ವ್ಯಕ್ತಪಡಿಸಿದ ಶಾಸಕರು, ಸಮಾಜದ ಬಹು ದೊಡ್ಡ ಬೇಡಿಕೆಯಾದ ರುದ್ರಭೂಮಿ ನಿರ್ಮಾಣದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಪಟ್ಟಣದಲ್ಲಿ ತಲಾ ₹60 ಲಕ್ಷ ಅನುದಾನದ ಕನಕದಾಸ ವೃತ್ತ ನಿರ್ಮಾಣ ಮತ್ತು ವಾಲ್ಮೀಕಿ ವೃತ್ತದ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದರು.
ಕೊಟ್ಟೂರಿನಲ್ಲಿಯೂ ಮುಂದಿನ ವರ್ಷ ಅನುದಾನ ಒದಗಿಸಿ ಪುತ್ಥಳಿ ಸಹಿತ ರಾಣಿ ಕಿತ್ತೂರು ಚೆನ್ನಮ್ಮ ವೃತ್ತಕ್ಕೆ ನಿರ್ಮಾಣ ಮಾಡಲಾಗುತ್ತದೆ. ₹1 ಕೋಟಿ ಅನುದಾನದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್ ಮಾತನಾಡಿ, ನಾಗರ ಪಂಚಮಿಗೆ ಸರ್ಕಾರಿ ರಜಾ ಘೋಷಿಸುವಂತೆ ಶಾಸಕರ ಗಮನ ಸೆಳೆದರು.
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಶೆಟ್ರು, ಪಂಚಮಸಾಲಿ ಸಮಾಜದ ರಾಜ್ಯ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ, ತಾಲೂಕು ಅಧ್ಯಕ್ಷ ಮಂಜುನಾಥ್ ಗೌಡ, ಉಪಾಧ್ಯಕ್ಷ ವೈ.ಮಲ್ಲಿಕಾರ್ಜುನ, ಕಾರ್ಯದರ್ಶಿ ಬಾವಿ ರವಿ, ಪಂಚಮಸಾಲಿ ಮುಖಂಡರಾದ ಕಿನ್ನಾಳ್ ಸುಭಾಷ್, ಆನಂದ್, ಮಂಜುನಾಥ್, ಇಟಗಿ ಪ್ರಭಾಕರ್, ಕೊಟ್ರೇಶ್, ಅಂಕಸಮದ್ರ ರವೀಂದ್ರ, ಚಿತವಾಡಗಿ ಪ್ರಕಾಶ್, ಗೆಸ್ಕಾಂ ಪ್ರಕಾಶ್, ಯುವ ಮುಖಂಡರಾದ ಬಾದಾಮಿ ನಟರಾಜ್, ಸೊನ್ನದ್ ಕೊಟ್ರೇಶ್, ಮುಧೋಳ್ ಶಿವರುದ್ರಪ್ಪ, ಗುರುಬಸವರಾಜ್, ಬಂಡಿಹಳ್ಳಿ ಮಂಜುನಾಥ್, ಜೆಡಿಎಸ್ ಮುಖಂಡರಾದ ಸಿ.ಎಚ್.ಸಿದ್ಧರಾಜ್, ಡಿಶ್ ಪಾಂಡುರಂಗ ನಾಯ್ಕ ಹಾಗೂ ಮತ್ತಿತರರಿದ್ದರು.