ಬರದಿಂದ ಕಂಗೆಟ್ಟ ರೈತರಿಗೆ ಸರ್ಕಾರ ನೀಡುವ ₹2500 ಗಳ ಬೆಳೆ ಪರಿಹಾರಕ್ಕೆ ಇನ್ನು ₹100ಗಳ ಸೇರಿಸಿ 35 ರಿಂದ 40 ರೈತರು ಸರ್ಕಾರಕ್ಕೆ ಹಣ ವಾಪಸ್‌ ನೀಡುತ್ತೇವೆ

ಹೂವಿನಹಡಗಲಿ: ತೀವ್ರ ಬರಕ್ಕೆ ಬಳಲಿ ಬೆಂಡಾಗಿರುವ ರೈತರ ವ್ಯಾಪಕ ಬೆಳೆ ನಷ್ಟದ ನೈಜ ಚಿತ್ರಣ ಅರಿಯಲು ಬಂದಿದ್ದ ಕೇಂದ್ರದ ಬರ ಅಧ್ಯಯನ ತಂಡವು ತಾಲೂಕಿನ ಇಟ್ಟಿಗಿ ಗ್ರಾಮದ ಮೆಕ್ಕೆಜೋಳ, ಈರುಳ್ಳಿ ಮತ್ತು ಸೂರ್ಯಕಾಂತಿ ಬೆಳೆ ಬೆಳೆದಿರುವ ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಈ ಬಾರಿ ಮಳೆ ಕೊರತೆ ಹೆಚ್ಚಿದೆ, ಆದರಿಂದ ಅತಿ ನೀರುಣುವ ಬೆಳೆಗಳನ್ನು ಬೆಳೆಯದೇ ರಾಗಿ, ಸಜ್ಜಿ ಇತರೆ ಸಿರಿ ಧಾನ್ಯ ಬೆಳೆಯಲು ಜಿಲ್ಲಾಡಳಿತ ಸೂಚಿಸಿತ್ತು. ಆದರೂ ನೀವು ಮೆಕ್ಕೆಜೋಳ, ಸೂರ್ಯಕಾಂತಿಯಂತಹ ಬೆಳೆ ಹಾಕಿದ್ದೀರಿ ಯಾಕೆ? ಎಂಬ ತಂಡದ ಪ್ರಶ್ನೆಗೆ ಮೆಕ್ಕೆಜೋಳಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಇತ್ತು, ಜತೆಗೆ ಕಾರ್ಮಿಕರ ಕೊರತೆಯಿಂದ ಮೆಕ್ಕೆಜೋಳ ಎಕರೆಯೊಂದಕ್ಕೆ ₹14 ಸಾವಿರ ವೆಚ್ಚ ಮಾಡಿ ಬಿತ್ತನೆ ಮಾಡಿದ್ದೇವು, ಆದರೆ 6 ಎಕರೆ ಮೆಕ್ಕೆಜೋಳಕ್ಕೆ ಮಳೆ ಕೈ ಕೊಟ್ಟು ಒಂದು ಕಾಳು ಬಂದಿಲ್ಲ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕೆಂದು ರೈತ ರುದ್ರಪ್ಪ ಬಳಿಗಾರ ಮನವಿ ಮಾಡಿದರು.

ಪರಿಹಾರ ವಾಪಸ್‌ ಮಾಡುವ ಎಚ್ಚರಿಕೆ: ಬರದಿಂದ ಕಂಗೆಟ್ಟ ರೈತರಿಗೆ ಸರ್ಕಾರ ನೀಡುವ ₹2500 ಗಳ ಬೆಳೆ ಪರಿಹಾರಕ್ಕೆ ಇನ್ನು ₹100ಗಳ ಸೇರಿಸಿ 35 ರಿಂದ 40 ರೈತರು ಸರ್ಕಾರಕ್ಕೆ ಹಣ ವಾಪಸ್‌ ನೀಡುತ್ತೇವೆ, ಒಂದು ಎಕರೆ ಉಳುಮೆ ಮಾಡಲು ₹2500 ಇಂಧನಕ್ಕೂ ಸಾಕಾಗುವುದಿಲ್ಲ, ಅಲ್ಪ ಪ್ರಮಾಣದ ಸರ್ಕಾರದ ಪರಿಹಾರಕ್ಕೆ ರೈತರು ಎದುರು ನೋಡುತ್ತಿಲ್ಲ, ಕೂಡಲೇ ಸರ್ಕಾರ ಪರಿಹಾರ ಮೊತ್ತ ಬದಲಾವಣೆ ಮಾಡಿ ಎಕರೆಗೆ ₹50 ರಿಂದ 60 ಸಾವಿರ ಪರಿಹಾರ ನೀಡಬೇಕೆಂದು ಈರುಳ್ಳಿ ಬೆಳೆಗಾರರ ಸಂಘವು ಒತ್ತಾಯಿಸಿದೆ.

ಗೃಹಲಕ್ಷ್ಮೀ ಹಣ ರೈತರಿಗೆ ನೀಡಲಿ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯ ಮಹಿಳೆಯರಿಗೆ ನೀಡುವ 1 ತಿಂಗಳ ಗೃಹಲಕ್ಷ್ಮೀ ಹಣ ಬರ ಪರಿಹಾರಕ್ಕೆ ತೆಗೆದುಕೊಂಡು ರೈತರಿಗೆ ವಿತರಣೆ ಮಾಡಲಿ ಜತೆಗೆ ಈ ಹಿಂದೆ ಸರ್ಕಾರಿ ನೌಕರರು ಬರ ಬಂದಾಗ 1 ದಿನ ವೇತನ ನೀಡುತ್ತಿದ್ದರು. ಈ ಬಾರಿಯೂ ಸರ್ಕಾರಿ ನೌಕರರ 1 ದಿನ ವೇತನ ರೈತರಿಗೆ ನೀಡಬೇಕು. ವಿವಿಧ ಕಂಪನಿಗಳ ಸಿಎಸ್ಆರ್‌ ಫಂಡ್‌ನ್ನು ತಂದು ರೈತರಿಗೆ ವಿತರಣೆ ಮಾಡಲಿ ಎಂದು ರೈತರು ತಂಡಕ್ಕೆ ಒತ್ತಾಯಿಸಿದರು.

ರೈತರ ಮಕ್ಕಳಿಗೆ ಕನ್ಯಾ ಹುಡುಕಿ ಕೊಡಿ: ರಾಜ್ಯದಲ್ಲಿ ರೈತರ ಮಕ್ಕಳು 30 ರಿಂದ 40 ವರ್ಷ ಕಳೆದರೂ ಮದುವೆಗೆ ಕನ್ಯಾ ಸಿಗುತ್ತಿಲ್ಲ, ಆದರಿಂದ ಕಾನೂನು ಬದ್ಧವಾಗಿ ಆನಾಥಾಶ್ರಮದ ಹೆಣ್ಣು ಮಕ್ಕಳನ್ನು, ರೈತರ ಮಕ್ಕಳಿಗೆ ಕೊಡಿಸಿ ಮದುವೆ ಮಾಡಿಸಬೇಕೆಂದು ಬರ ಅಧ್ಯಾಯನ ತಂಡಕ್ಕೆ ಮನವಿ ಸಲ್ಲಿಸಿದೆ. ರಾಜ್ಯ ಈರುಳ್ಳಿ ಬೆಳೆಗಾರರ ಸಂಘವು ರೈತರ ಮಕ್ಕಳಿಗೆ ರೈತರ ಹೆಣ್ಣು ಮಕ್ಕಳನ್ನು ಮದುವೆ ಮಾಡಿದರೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ ₹10 ಲಕ್ಷ ಠೇವಣಿ ಮಾಡುವಂತೆ ಸಂಘ ಒತ್ತಾಯಿಸಿದ್ದು ತಂಡಕ್ಕೆ ತೀರಾ ಮುಜುಗುರ ಅನಿಸಿತು.

ಬರ ಅಧ್ಯಯನ ತಂಡದಲ್ಲಿ ಚೆಟ್ರಾಂ ಮೀನಾ, ಡಾ.ಜೆ.ಹರ್ಷ, ಕ್ಯಾ. ಅಜಿತ್‌ ಕುಮಾರ್‌ ಸಾಹು, ಅಮರೇಂದ್ರ ಸಿಂಗ್‌, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಪಂ ಸಿಇಒ ಗರಿಮಾ ಪನ್ವಾರ್‌, ತಹಸೀಲ್ದಾರ್‌ ಕೆ.ಎಂ.ಗುರುಬಸವರಾಜ, ತಾಪಂ ಇಒ ಜಿ. ಪರಮೇಶ್ವರ ಹಾಗೂ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎನ್‌.ಎಂ. ಸಿದ್ದೇಶ, ವಸಂತ ಕುಮಾರ, ಕೆ.ಪಿ. ಮಂಜುನಾಥ ಸೇರಿದಂತೆ ನೂರಾರು ರೈತರು ಇದ್ದರು.