ಕನ್ನಡಪ್ರಭ ವಾರ್ತೆ ತುಮಕೂರು
ಸಿದ್ದಗಂಗಾ ಮಠದಲ್ಲಿ ಪ್ರತಿ ವರ್ಷ ನಡೆಸುತ್ತಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವದ ಸವಿನೆನಪಿಗಾಗಿ ಡಾ. ಶಿವಕುಮಾರ ಸ್ವಾಮೀಜಿಯವರ 8 ಅಡಿ ಎತ್ತರದ ಅಮೃತಶಿಲೆಯ ಪುತ್ಥಳಿ ಪ್ರತಿಷ್ಠಾಪನಾ ಕಾರ್ಯಕ್ಕೆ ಶ್ರೀಮಠದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.ಸಿದ್ದಗಂಗಾ ಮಠದ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನದ ಟ್ರಸ್ಟ್ ವತಿಯಿಂದ ವಸ್ತು ಪ್ರದರ್ಶನದ ಆವರಣದಲ್ಲಿ ಸುಮಾರು 1 ಕೋಟಿ ರು. ಅಂದಾಜು ವೆಚ್ಚದಲ್ಲಿ ಉದ್ದೇಶಿಸಿರುವ ಪುತ್ಥಳಿ, ಶಿಲಾ ಮಂಟಪ ಹಾಗೂ ಸುತ್ತಲೂ ವಿಶಾಲವಾದ ಸುಂದರವಾದ ಕಲ್ಲಿನ ಕಾಂಪೌಂಡ್ ನಿರ್ಮಾಣದ ಕಾಮಗಾರಿಗೆ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು. ಶ್ರೀಗಳ ಪುತ್ಥಳಿ ಪ್ರತಿಷ್ಠಾಪನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಸಿದ್ದಲಿಂಗ ಸ್ವಾಮೀಜಿ, ಪಾರ್ಕ್ ಒಳಗಡೆ ಶ್ರೀಗಳ ಪುತ್ಥಳಿ ನಿರ್ಮಾಣ ಮಾಡಬೇಕು ಎಂದು ಸಮಿತಿಯವರು ನಿರ್ಧರಿಸಿ ಪುತ್ಥಳಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. ಕಲ್ಲಿನ ಮಂಟಪ ನಿರ್ಮಿಸಿ ಪೂಜ್ಯರ ಪುತ್ಥಳಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು.
ಶ್ರೀಮಠಕ್ಕೆ ಬರುವ ಭಕ್ತರಿಗೆ ಪೂಜ್ಯರ ಪುತ್ಥಳಿ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು. ಪೂಜ್ಯರ ಪ್ರತಿಮೆಯ ಘನತೆ, ಗೌರವ, ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಮಠದ ಒಂದು ಕಲ್ಲು, ಕಣ ಕಣವೂ ಪೂಜ್ಯರು ಇದ್ದಾರೆ ಎಂದು ಹೇಳುತ್ತವೆ. ಆದರೂ ಸಮಿತಿಯವರು ಪೂಜ್ಯರ ಪುತ್ಥಳಿ ಪ್ರತಿಷ್ಠಾಪನೆ ಮಾಡುತ್ತಿರುವುದು ಹೆಮ್ಮೆಪಡುವ ವಿಚಾರವಾಗಿದೆ ಎಂದರು.ಇದರೊಂದಿಗೆ ವಿಶೇಷವಾಗಿ ಪಾರ್ಕ್ ಸಹ ನಿರ್ಮಾಣ ಮಾಡಲಾಗುತ್ತಿದೆ. ಪುತ್ಥಳಿಯಷ್ಟೇ ಒತ್ತು ನೀಡಿ ಉದ್ಯಾನವನವನ್ನು ಬಹಳ ಸುಂದರವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಶ್ರೀಮಠದ ಹಳೆಯ ವಿದ್ಯಾರ್ಥಿಗಳಾದ ವೆಂಕಟೇಗೌಡರ ಶ್ರಮ ಕೂಡ ಅಪಾರವಾಗಿದೆ ಎಂದು ಹೇಳಿದರು.
ಗ್ರಾಮಾಂತರ ಶಾಸಕ ಬಿ. ಸುರೇಶ್‌ಗೌಡ ಮಾತನಾಡಿ, ಸಿದ್ದಗಂಗಾ ಮಠಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಬಡ ಮಕ್ಕಳಿಗೆ ತ್ರಿವಿಧ ದಾಸೋಹ ನೀಡುತ್ತಿರುವ ಶ್ರೀಮಠಕ್ಕೆ ವಿಶ್ವದಾದ್ಯಂತ ಜನಮನ್ನಣೆ ಇದೆ. ಶಿವಕುಮಾರ ಸ್ವಾಮೀಜಿಯವರು ಮಾತನಾಡುವುದಕ್ಕಿಂತ ಹೆಚ್ಚಾಗಿ ನಡೆದು ದೇಶಕ್ಕೆ ತೋರಿಸಿದರು. ಇಂತಹ ಮಹಾನ್ ಚೇತನರ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ವೆಂಕಟೇಗೌಡ ಸೇರಿದಂತೆ ಭಕ್ತಾದಿಗಳು ಮುಂದಾಗಿದ್ದಾರೆ. ನಾನು ಸಹ ನನ್ನ ಶಾಸಕ ಸ್ಥಾನದ ವೇತನದಿಂದ ಬರುವ 10 ಲಕ್ಷ ರು.ಗಳನ್ನು ಪುತ್ಥಳಿ ಪ್ರತಿಷ್ಠಾಪನೆಗೆ ನೀಡುವುದಾಗಿ ಹೇಳಿದರು.ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಶ್ರೀಮಠದಲ್ಲಿ ಕಳೆದ 62 ವರ್ಷಗಳಿಂದ ಶಿವಕುಮಾರ ಶ್ರೀಗಳ ದೂರದೃಷ್ಠಿಯಿಂದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ದೊರೆಯುತ್ತಿದೆ. ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ ನಾನು ಸಹ ಶಾಸಕರ ಅನುದಾನ 10 ಲಕ್ಷ ರು. ನೀಡುವುದಾಗಿ ಅವರು ಹೇಳಿದರು. ಹಿರಿಯ ಪತ್ರಕರ್ತ ಡಾ. ಎಸ್. ನಾಗಣ್ಣ ಮಾತನಾಡಿ, ಶ್ರೀಗಳು ಮಾನವಿಕ ವಿಕಾಸಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ಅವರ ವಿಚಾರಧಾರೆಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಇನ್ನು ಹೆಚ್ಚಾಗುವ ಅಗತ್ಯವಿದೆ. ಶ್ರೀಗಳ ವಿಚಾರಧಾರೆಗಳಿಂದ ಮನುಕುಲದ ಬೆಳವಣಿಗೆಗೆ ಮತ್ತು ಧಾರ್ಮಿಕ, ನೈತಿಕತೆಗೆ ಮೌಲ್ಯ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀಗಳ ಪುತ್ಥಳಿ ನಿರ್ಮಾಣಕ್ಕೆ 20 ಲಕ್ಷ ರು. ದೇಣಿಗೆ ನೀಡಿರುವ ಶ್ರೀಮಠದ ಹಳೇ ವಿದ್ಯಾರ್ಥಿ ವೆಂಕಟೇಗೌಡ, ಶ್ರೀಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ, ವಸ್ತುಪ್ರದರ್ಶನದ ಕಾರ್ಯದರ್ಶಿ ಜಿ. ಗಂಗಾಧರಯ್ಯ, ಜಂಟಿ ಕಾರ್ಯದರ್ಶಿಗಳಾದ ಕೆಂ.ಬ. ರೇಣುಯ್ಯ, ಎಸ್. ಶಿವಕುಮಾರ್, ಸಿದ್ದಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕರಾದ ಜಯವಿಭವಸ್ವಾಮಿ, ಎಸ್‌ಐಟಿ ಸಿಇಒ ಡಾ. ಶಿವಕುಮಾರಯ್ಯ, ಡಾ. ಎಸ್. ನಾಗಣ್ಣ, ಪ್ರಚಾರ ಸಮಿತಿಯ ಉಮಾಮಹೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಪಿ. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.