ಹಾನಗಲ್ಲ: ತಾಲೂಕಿನ ಚಿಕ್ಕೇರಿ ಹೊಸಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ರಾಜ್ಯ ವಿಪತ್ತು ಉಪಶಮನ ನಿಧಿಯಡಿ ಒಂದು ಕೋಟಿ ರು. ವೆಚ್ಚದಲ್ಲಿ ಚಿಕ್ಕೇರಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆರೆಯ ಮೂರು ತೂಬುಗಳನ್ನು ಹೊಸದಾಗಿ ನಿರ್ಮಿಸಿ, ಕೆರೆ ಕೋಡಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುವುದು. 200 ಮೀ. ಪಿಚ್ಚಿಂಗ್ ಹಾಗೂ ಡೊಂಬು ಬಿದ್ದಿರುವ ಜಾಗವನ್ನು ಪುನರ್ ನಿರ್ಮಿಸಿ ಕೆರೆಯನ್ನು ಸಮಗ್ರವಾಗಿ ಪುನಶ್ಚೇತನಗೊಳಿಸಲಾಗುವುದು. ಇದರಿಂದ ಕೃಷಿ ಚಟುವಟಿಕೆ ಮತ್ತು ಅಂತರ್ಜಲ ಮರುಪೂರಣಕ್ಕೆ ಅನುಕೂಲವಾಗಲಿದೆ. ಕೆರೆ ಅಭಿವೃದ್ಧಿ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರು, ಈ ಭಾಗದ ರೈತ ಸಮೂಹದ ಬಹುವರ್ಷಗಳ ಬೇಡಿಕೆಯಾಗಿತ್ತು. ಅದನ್ನು ಈಡೇರಿಸಿದ ತೃಪ್ತಿ ಇದೆ. ತಾಲೂಕಿನಲ್ಲಿ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಕೆರೆಗಳಿವೆ. ಈ ಪೈಕಿ ಬಹುತೇಕ ಕೆರೆಗಳನ್ನು ನಾನಾ ಏತ ನೀರಾವರಿ ಯೋಜನೆಗಳಡಿ ತುಂಬಿಸಿ ನೀರಿನ ಹಾಹಾಕಾರ ತಪ್ಪಿಸಲಾಗಿದ್ದು, ಬತ್ತದ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ. ಅಂತರ್ಜಲ ಮಟ್ಟವೂ ಸುಧಾರಣೆ ಕಂಡಿದೆ. ಉಳಿದ ಕೆರೆಗಳನ್ನೂ ತುಂಬಿಸುವ ನಿಟ್ಟಿನಲ್ಲಿ ಕೆಲವು ಯೋಜನೆಗಳನ್ನು ರೂಪಿಸಲಾಗಿದೆ. ತಾಲೂಕನ್ನು ಸಂಪೂರ್ಣವಾಗಿ ನೀರಾವರಿ ವ್ಯಾಪ್ತಿಗೆ ಒಳಪಡುವ ದೃಷ್ಟಿಯಿಂದ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಗ್ರಾಮಸ್ಥರ ಅಹವಾಲು ಆಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರಕಿಸುವಲ್ಲಿಯೂ ಯಶಸ್ವಿಯಾದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಕೆಪಿಸಿಸಿ ಸದಸ್ಯ ಖ್ವಾಜಾಮೊಹಿದ್ದೀನ್ ಜಮಾದಾರ, ಮುಖಂಡರಾದ ಈರಣ್ಣ ಬೈಲವಾಳ, ಸೋಮಣ್ಣ ದೊಡ್ಡಕುರುಬರ, ಅರ್ಜುನಪ್ಪ ಮಂಚಗಿ, ಪುಟ್ಟಪ್ಪ ಶಿದ್ಲಿ, ಜಗದೀಶ್ ಜನಗೇರಿ, ಗಜೇಂದ್ರ ಬಾವಿಮನಿ, ರೇಖಾ ಕಟ್ಟಿಮನಿ, ನಾಗಪ್ಪ ಚವ್ಹಾಣ, ಗುಡ್ಡಪ್ಪ ದೊಡ್ಡಕುರುಬರ, ಸುರೇಶ ಕಾಲೆದೇರಿ, ರಾಘು ಕಾಲದೇರಿ, ಸಣ್ಣ ನೀರಾವರಿ ಇಲಾಖೆಯ ಕಿರಿಯ ಅಭಿಯಂತರ ರಾಘವೇಂದ್ರ ಇದ್ದರು.