ಕನ್ನಡಪ್ರಭ ವಾರ್ತೆ ಮಡಿಕೇರಿ
ಅ.17ರಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಜರುಗಲಿರುವ ಕಾವೇರಿ ತೀರ್ಥೋದ್ಭವದ ಅಂಗವಾಗಿ ಭಾಗಮಂಡಲದ ಭಗಂಡೇಶ್ವರ ದೇವಾಲಯದ ಹಳೆ ಮುಡಿ ಕಟ್ಟಡದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಬಾರಿ ತಲಕಾವೇರಿಯಲ್ಲಿ ಹಗಲು ವೇಳೆಯಲ್ಲಿ ತೀರ್ಥೋದ್ಭವ ಆಗುವ ಹಿನ್ನೆಲೆ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಜಾತ್ರೆಯ ಸಂದರ್ಭ ಯಾವುದೇ ಲೋಪ ಉಂಟಾಗದಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.ರಾಜ್ಯ ಸೇರಿದಂತೆ ದಕ್ಷಿಣ ಭಾರತಕ್ಕೆ ನೀರುಣಿಸುವ ಕಾವೇರಿ ತೀರ್ಥೋದ್ಭವದ ಪಾವಿತ್ರ್ಯ ಉಳಿಸುವ ನಿಟ್ಟಿನಲ್ಲಿ ಮದ್ಯ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.
ರಸ್ತೆ ಅವ್ಯವಸ್ಥೆ: ಮಡಿಕೇರಿ-ಭಾಗಮಂಡಲ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, ರಸ್ತೆಯನ್ನು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದರು.
ಎ.ಎಸ್. ಪೊನ್ನಣ್ಣ ಪ್ರತಿಕ್ರಿಯಿಸಿ, ಮಳೆ ಇರುವುದರಿಂದ ಟೆಂಡರ್ ನಡೆದರೂ ಕೆಲಸ ಪ್ರಾರಂಭಿಸದಂತೆ ನಾನೇ ಸೂಚಿಸಿದ್ದೇನೆ. ಮಳೆ ಪೂರ್ಣ ಕಡಿಮೆಯಾದ ಮೇಲೆ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ, ಸಂಚಾರ ಹಾಗೂ ಜನದಟ್ಟಣೆ ಆಗದಂತೆ ವ್ಯವಸ್ಥೆಯನ್ನು ಕೈಗೊಳ್ಳಲಾಗುತ್ತದೆ. ತೀರ್ಥ ಕುಂಡಿಕೆ ಹಾಗೂ ದೇವಾಲಯ ಆವರಣದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗುವುದು. ಭದ್ರತಾ ದೃಷ್ಟಿಯಿಂದ ಹೆಚ್ಚಿನ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.
ಕೆಎಸ್ಆರ್ಟಿಸಿ ವ್ಯವಸ್ಥಾಪಕ ಈರಸಪ್ಪ ಮಾತನಾಡಿ, ಕಳೆದ ಬಾರಿ 15 ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಹೆಚ್ಚಿನ ಬೇಡಿಕೆ ಇದ್ದು, ಒದಗಿಸಲಾಗುವುದು ಎಂದರು.
ನೀರಾವರಿ ನಿಗಮ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ, 2 ಕೋಟಿ ರು. ಅನುದಾನ ಕಳೆದ ವರ್ಷದ ಆಚರಣೆಗೆ ಬಿಡುಗಡೆಯಾಗಿತ್ತು. ಈ ಬಾರಿಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಭಾಗಮಂಡಲ ಗ್ರಾಪಂ ಉಪಾಧ್ಯಕ್ಷೆ ಗಂಗಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮತ್ತಿತರರು ಪಾಲ್ಗೊಂಡಿದ್ದರು.