18ರಂದು ಭೋವಿ ಗುರುಪೀಠದಲ್ಲಿ ಭೋವಿ ಜನೋತ್ಸವ

KannadaprabhaNewsNetwork |  
Published : Jul 09, 2026, 02:15 AM IST
ಚಿತ್ರದುರ್ಗ ಎರಡನೇ ಪುಟದಲೀಡ್  | Kannada Prabha

ಸಾರಾಂಶ

ಭೋವಿ ಜನೋತ್ಸವ ಕುರಿತಂದೆ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನೇರಲಗುಂಟೆ ರಾಮಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇಮ್ಮಡಿ ಶ್ರೀಗಳ 17ನೇ ಪಟ್ಟಾಭಿಷೇಕ ಮಹೋತ್ಸವ ಹಿನ್ನಲೆ । ಸಿಎಂ, ಡಿಸಿಎಂ ಆಗಮನ. ಎಂ.ರಾಮಪ್ಪ ಮಾಹಿತಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ 17ನೇ ಪಟ್ಟಾಭಿಷೇಕ ಮಹೋತ್ಸವದ ಹಿನ್ನಲೆ ಜು.18ರಂದು ಗುರುಪೀಠದಲ್ಲಿ ಭೋವಿ ಜನೋತ್ಸವ ಆಚರಿಸಲಾಗುತ್ತಿದೆ ಎಂದು ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ನೇರಲಗುಂಟೆ ರಾಮಪ್ಪ ತಿಳಿಸಿದರು.

ಚಿತ್ರದುರ್ಗ ನಗರದ ಭೋವಿ ವಿದ್ಯಾರ್ಥಿ ನಿಲಯದ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಗಳ ಆಶೀರ್ವಾದ ಹಾಗೂ ಆದೇಶದ ಮೇರೆಗೆ ಜನೋತ್ಸವವನ್ನು ಆಯೋಜಿಸಲಾಗುತ್ತಿದೆ ಎಂದರು.

ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರು ಗುರುಪೀಠದ ಶ್ರೀಗಳಾಗಿ ದೀಕ್ಷಾ ಲಾಂಚನ ಸ್ವೀಕರಿಸಿ 28 ವರ್ಷಗಳಾಗಿವೆ. ಇದಲ್ಲದೇ ಶ್ರೀಗಳ 40ನೇ ಜನ್ಮ ವರ್ಧಂತೋತ್ಸವ ಕೂಡಾ ಅಂದು ನೆರವೇರಲಿದೆ. ಈ ಎಲ್ಲ ಕಾರ್ಯಕ್ರಮದ ಸಂಗಮವಾಗಿ ಜನೋತ್ಸವ ಆಚರಿಸಲಾಗುತ್ತದೆ. ಇದು ಬೋವಿ ಜನಾಂಗದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಭ್ರಮದ ಆಚರಣೆಯಾಗಿಯೂ ಪರಿಗಣಿತವಾಗಲಿದೆ. ಜನೋತ್ಸವಕ್ಕೆ ಅಗತ್ಯ ಸಿದ್ದತೆಗಳು ಭರದಿಂದ ಸಾಗಿವೆ ಎಂದರು.

ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಯಕ್ರಮ ಸಂಘಟಿಸಲಾಗಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಹಾಗೂ ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಮತ್ತು ಯಾವುದೇ ಪದವಿಯಲ್ಲಿ ಈ ವರ್ಷ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಬೋವಿ ಸಮುದಾಯದ ವಿದ್ಯಾರ್ಥಿಗಳ ಸನ್ಮಾನಿಸಲಾಗುವುದು. ಜೊತೆಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆಯ್ಕೆಯಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 5,000 ರು ಆರ್ಥಿಕ ಸಹಾಯಧನ ವಿತರಿಸಲಾಗುವುದು ಎಂದರು.

ಭೋವಿ ಜನೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮುಖಂಡರುಗಳಾದ ಮಲ್ಲೇಶ್ ಬಾಬು,ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಶಿವರಾಜ ತಂಗಡಗಿ ಭಾಗವಹಿಸುವರು. ಶಾಸಕ ಎಂ.ಚಂದ್ರಪ್ಪ ದಿಕ್ಕೂಚಿ ನುಡಿಗಳನ್ನಾಡುವರು. ಪಾವಗಡ ಶಾಸಕ ವಿ ವೆಂಕಟೇಶ ಹಾಗೂ ಪುಲಕೇಶಿ ನಗರದ ಶಾಸಕಎ.ಸಿ ಶ್ರೀನಿವಾಸ, ಸಮಾಜದ ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಅಂತರರಾಜ್ಯ ಮಟ್ಟದ ಭೋವಿ ಜನಾಂಗದ ಪ್ರಮುಖ ಮುಖಂಡರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ರಾಮಪ್ಪ ಹೇಳಿದರು.

ಸಮಾಜದ ಜನರಿಗಾಗಿ ರಕ್ತದಾನ ಶಿಬಿರ ಹಾಗೂ ಸಿದ್ಧರಾಮೇಶ್ವರರ ಕುರಿತು ವಿಶೇಷ ವಿಚಾರ ಸಂಕೀರ್ಣ, ರಾಜಕೀಯ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಾಗಿ ಆಯ್ಕೆಯಾದ ಸಮಾಜದ ನಾಯಕರಿಗೆ ಹಾಗೂ ಭೋವಿ ವಡ್ಡರ ಜನಾಂಗಕ್ಕೆ ವಿಶೇಷವಾಗಿ ಕೊಡುಗೆ ನೀಡಿದ ಸಾಧಕರಿಗೆ ಸನ್ಮಾನ, ಹಸಿರೋತ್ಸವ ಸಮಾಜದ ಯುವಜನತೆಗಾಗಿ ವಧು-ವರರ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ರಾಮಪ್ಪ ಹೇಳಿದರು.

ಭೋವಿ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಉಪಾಧ್ಯಕ್ಷ ಹೆಚ್.ಲಕ್ಷ್ಮಣ್, ಕಾರ್ಯದರ್ಶಿ ಇ.ಮಂಜುನಾಥ್, ಮಠದ ಸಿಇಓ ಗೌನಳ್ಳಿ ಗೋವಿಂದಪ್ಪ, ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ, ಮುಖಂಡರಾದ ಡಿ.ಸಿ.ಮೋಹನ್, ಎಚ್.ನಾಗರಾಜ್, ಕನಕದಾಸ್, ದೇವರಾಜ್, ನಟೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಬೆಳವಣಿಗೆಯತ್ತ ಪೋಷಕರು ಗಮನ ಹರಿಸಿ
ಶಾಸಕರ ನೇತೃತ್ವದಲ್ಲಿ ರಾಣೀಕೆರೆ ತೂಬು ತೆರವಿಗೆ ಕ್ಷಣಗಣನೆ