ಭೋವಿ ಜನೋತ್ಸವಕ್ಕೆ ಚಾಲನೆ

KannadaprabhaNewsNetwork |  
Published : Jul 19, 2025, 02:00 AM IST

ಸಾರಾಂಶ

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ, ಉನ್ನತ ಸ್ಥಾನದಲ್ಲಿದ್ದಾಗ ಸಮಾಜ ಹಾಗೂ ಮಠ ಮಾಡಿದ ಸೇವೆಯನ್ನು ಮರೆಯದೇ ಬೇರೆಯವರಿಗೆ ನಿಮ್ಮ ಕೈಲಾದ ಸೇವೆ ಮಾಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳಿ, ಉನ್ನತ ಸ್ಥಾನದಲ್ಲಿದ್ದಾಗ ಸಮಾಜ ಹಾಗೂ ಮಠ ಮಾಡಿದ ಸೇವೆಯನ್ನು ಮರೆಯದೇ ಬೇರೆಯವರಿಗೆ ನಿಮ್ಮ ಕೈಲಾದ ಸೇವೆ ಮಾಡಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಹೊರವಲಯದ ಭೋವಿ ಗುರು ಪೀಠದಲ್ಲಿ ಶುಕ್ರವಾರ ನಡೆದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಯವರ 16ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ ಭೋವಿ ಜನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಇಂದಿನ ದಿನಮಾನದಲ್ಲಿ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡಿ ಸಿಹಿ ಹಂಚಿದರೆ ನಮ್ಮ ಇಮ್ಮಡಿ ಶ್ರೀಗಳು ತಮ್ಮ ಹುಟ್ಟುಹಬ್ಬದಂದು ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಸನ್ಮಾನ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.

ನಮ್ಮ ಸಮಾಜದ ಬಂಧುಗಳು ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆ ನೀಡಬೇಕಿದೆ. ಅಂಬೇಡ್ಕರ್ ಅವರು ನಿಡಿದ ಸಂದೇಶದಂತೆ ಶಿಕ್ಷಣ, ಹೋರಾಟ ಸಂಘಟನೆಯಿಂದ ಮಾತ್ರ ನಮ್ಮ ಅಭೀವೃದ್ಧಿಯಾಗಲು ಸಾಧ್ಯವಿದೆ. ಈ ಹಿಂದೆ ನಮ್ಮಲ್ಲಿ ಸಂಘಟನೆ ಇರಲಿಲ್ಲ ನಮ್ಮ ಬೆನ್ನಿಗೆ ಯಾವ ಮಠಗಳು ಇರಲಿಲ್ಲ. ಆಗ ಅರಿವು, ಹೋರಾಟ, ಶಿಕ್ಷಣದ ಕೊರತೆ ಇತ್ತು, ಈ ಹಿನ್ನಲೆಯಲ್ಲಿ ಮಠವನ್ನು ಸ್ಥಾಪನೆ ಮಾಡುವುದರ ಮೂಲಕ ಸಂಘಟಿತರಾಗಲು ಮುಂದಾಗಿದ್ದೇವೆ. ಆದರೆ ಈಗ ಸಮಾಜ ಸಂಘಟನೆಯ ಜತೆಗೆ ಶಿಕ್ಷಣದ ಅರಿವು ಸಹ ಆಗುತ್ತಿದೆ ಎಂದರು.

ಸಮಾರಂಭದ ಸಾನ್ನುಧ್ಯ ವಹಿಸಿದ್ದ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಭೋವಿ ಗುರು ಪೀಠ ಶಿಕ್ಷಣಕ್ಕೆ ಆದ್ಯತೆ ನೀಡುವುದರ ಮೂಲಕ ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣಕ್ಕೆ ಮುಂದಾಗಿದೆ. ನಮ್ಮ ಸಮಾಜದಿಂದ ಪ್ರತಿಭಾ ಪುರಸ್ಕಾರಕ್ಕೆ ಶೇ.90ರಷ್ಟು ಅಂಕ ಪಡೆದ 600 ಮಕ್ಕಳನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.

ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಯಾರಿಗೆ ಅಕ್ಷರ ಪ್ರಜ್ಞೆ ಇದೆಯೋ ಅವರು ಇತಿಹಾಸವನ್ನು ಬರೆದುಕೊಂಡಿದ್ದಾರೆ. ಕೋಟೆ, ಡ್ಯಾಂ, ಕಟ್ಟಡಗಳನ್ನು ನಿರ್ಮಾಣ ಮಾಡಿದವರು ವಡ್ಡರೇ ಆಗಿದ್ದರೂ ಇತಿಹಾಸವನ್ನು ಉಳಿಸಿಕೊಳ್ಳಲು ಬರೆಸಿಕೊಳ್ಳಲಾಗಿಲ್ಲ. ನಮ್ಮ ಇತಿಹಾಸವನ್ನು ನಾವೇ ಬರೆಯಬೇಕಾದರೆ ನಾವು ಅಕ್ಷರದ ವಾರಸುದಾರಿಕೆ ಪಡೆಯವುದು ಅಗತ್ಯವಾಗಿದೆ ಎಂದರು.

ಇದೇ ವೇಳೆ ದೇವರಾಜು ಅರಸ್ ವಿದ್ಯಾ ಸಂಸ್ಥೆಯ ಸಿಇಒ ರಘುಚಂದನ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಮುಖಂಡರಾದ ರವಿ ಮಾಕಳಿ, ಆನಂದಪ್ಪ ಇದ್ದರು.

PREV

Recommended Stories

ತನಿಖೆ ಮಾಡಿದ್ದೇನೆ, ಬೆಂಗ್ಳೂರು ಗ್ರಾ.ದಲ್ಲಿ ಅಕ್ರಮ ಆಗಿದೆ : ಡಿಕೆಶಿ
ಬಾಲ್ಯ ವಿವಾಹ ತಡೆಗೆ ಸರ್ಕಾರ ಕಠಿಣ ಕ್ರಮ : ಅಪ್ರಾಪ್ತರ ವಿವಾಹ ನಿಶ್ಚಿತಾರ್ಥ ಮಾಡಿದರೆ ಇನ್ನು ಜೈಲು ಶಿಕ್ಷೆ!