ಮಾಗಡಿ: ವೀರೇಗೌಡನ ದೊಡ್ಡಿಯಿಂದ ಮಂಚನಬೆಲೆವರೆಗೂ ರಸ್ತೆ ಅಭಿವೃದ್ಧಿಗೆ 8 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ. ನಾವು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ ಆದರೆ ಚುನಾವಣೆಯಲ್ಲಿ ನಮಗೆ ಮತ ನೀಡುವುದಿಲ್ಲ ಎಂದು ಶಾಸಕ ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು.
ಮಾಗಡಿ-ರಾಮನಗರ ಮುಖ್ಯರಸ್ತೆಯ ನಾಯಕನ ಪಾಳ್ಯಗೇಟ್ ಬಳಿ ಮುತ್ತಯ್ಯಸ್ವಾಮಿ ದೇವಸ್ಥಾನದ ಸಮೀಪ 60 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಜೊತೆಗೆ ಮತ ನೀಡಿದರೆ ನಮಗೂ ಮತ್ತಷ್ಟು ಕೆಲಸ ಮಾಡಲು ಉತ್ಸಾಹ ಬರುತ್ತದೆ. ಸಾವನದುರ್ಗ ಅಭಿವೃದ್ಧಿಗೆ ಏನಾಗಬೇಕೆಂದು ಮಾಹಿತಿ ನೀಡಿದರೆ ಸರ್ಕಾರದ ಜೊತೆ ಚರ್ಚಿಸಿ ಅಭಿವೃದ್ಧಿಪಡಿಸುತ್ತೇನೆ. ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿಚಾರವಾಗಿ ಈಗ ಗೆದ್ದಿರುವ ಸಂಸದರು, ಆ ಭಾಗದ ಜನಗಳ ಮನವೊಲಿಸಿ ಕಾಮಗಾರಿ ಆರಂಭಿಸಬೇಕು. ಮಾಗಡಿ ತಾಲೂಕಿನಲ್ಲಿ 29 ಸಾವಿರ ಹೆಚ್ಚುವರಿ ಮತಗಳು ಬಿದ್ದಿದ್ದು ಅವರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿ ಎಕ್ಸ್‌ಪ್ರೆಸ್ ಕೆನಾಲ್ ಮುಂದುವರಿಸಲು ಕ್ರಮ ವಹಿಸಬೇಕು ಎಂದು ಬಾಲಕೃಷ್ಣ ಹೇಳಿದರು.ಬಡವರಿಗೆ ಅನುಕೂಲ: ಈ ಭಾಗದ ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಿಸಿಲಾಗಿದೆ. ಕಡಿಮೆ ವೆಚ್ಚದಲ್ಲಿ ಶುಭ ಸಮಾರಂಭ ಮಾಡಿಕೊಳ್ಳಬಹುದು. ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾಯಕನ ಪಾಳ್ಯಗೇಟ್ ಬಳಿ ಇರುವ ದಳವಾಯಿ ಕೆರೆಗೆ ಅಭಿವೃದ್ಧಿಗೆ 2 ಕೋಟಿ ಅನುದಾನವನ್ನು ಎಸ್ಟಿಆರ್ಆರ್ ಯೋಜನೆ ಅಡಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆರೆಯ ಅಭಿವೃದ್ಧಿ ಪಡಿಸಲಾಗುತ್ತಿದೆ. ವರ್ಷದ 365 ದಿನವೂ ನೀರು ಉಳಿಯುವ ರೀತಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪೂಜಾರಿಪಾಳ್ಯ ಕೆ.ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ರಂಗನಾಥ್, ಮುಖಂಡರಾದ ಕೃಷ್ಣಪ್ಪ, ಪಂಚಾಕ್ಷರಿ, ಹನುಮಂತರಾಜು, ರಾಮಣ್ಣ ಗುಡ್ಡಹಳ್ಳಿ ರವಿ, ದೊಡ್ಡಿ ವಿಶ್ವನಾಥ್, ರಂಗಸ್ವಾಮಿ ಇತರರು ಭಾಗವಹಿಸಿದ್ದರು.(ಫೋಟೋ ಕ್ಯಾಪ್ಷನ್)
ಮಾಗಡಿ-ರಾಮನಗರ ಮುಖ್ಯರಸ್ತೆಯ ನಾಯಕನ ಪಾಳ್ಯಗೇಟ್ ಬಳಿ ಮುತ್ತಯ್ಯಸ್ವಾಮಿ ದೇವಸ್ಥಾನದ ಸಮೀಪ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಪೂಜಾರಿಪಾಳ್ಯ ಕೆ.ಕೃಷ್ಣಮೂರ್ತಿ, ಗ್ರಾಪಂ ಸದಸ್ಯ ರಂಗನಾಥ್, ಕೃಷ್ಣಪ್ಪ, ಪಂಚಾಕ್ಷರಿ ಇತರರಿದ್ದರು.