ನಿಷೇಧಾಜ್ಞೆ ನಡುವೆ ಉಡುಪಿ ಕಂಬಳಕ್ಕೆ ಭೂಮಿಪೂಜೆ !

KannadaprabhaNewsNetwork |  
Published : Mar 01, 2026, 03:15 AM IST
ಪ್ರಥಮ ಉಡುಪಿ ಕೋಟಿಚೆನ್ನಯ ಜೋಡುಕರೆ ಕಂಬಳದ ಲಾಂಛನ ಬಿಡುಗಡೆ ನಡೆಸಲಾಯಿತು. | Kannada Prabha

ಸಾರಾಂಶ

ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆಯೇ ಪ್ರಥಮ ಉಡುಪಿ ಕಂಬಳಕ್ಕೆ ಶನಿವಾರ ಇಲ್ಲಿನ ಬಡಗುಬೆಟ್ಟು ಗ್ರಾಪಂನ ತಟ್ಟೂರು ಎಂಬಲ್ಲಿ ಭೂಮಿಪೂಜೆ, ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಕಾಪು:ಜಿಲ್ಲಾಡಳಿತದ ನಿಷೇಧಾಜ್ಞೆಯ ನಡುವೆಯೇ ಪ್ರಥಮ ಉಡುಪಿ ಕಂಬಳಕ್ಕೆ ಶನಿವಾರ ಇಲ್ಲಿನ ಬಡಗುಬೆಟ್ಟು ಗ್ರಾಪಂನ ತಟ್ಟೂರು ಎಂಬಲ್ಲಿ ಭೂಮಿಪೂಜೆ, ಲಾಂಛನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಉಡುಪಿ ಮತ್ತು ದ.ಕ. ಜಿಲ್ಲೆಯ 8 ಮಂದಿ ಶಾಸಕರು ಮತ್ತು ಒಬ್ಬ ಸಂಸದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಿಷೇಧಾಜ್ಞೆ ಉಲ್ಲಂಘಿಸಿದರೂ, ಜಿಲ್ಲಾಡಳಿತ ಅಸಹಾಯಕವಾಗಿ ನಿಂತು ನೋಡುವಂತಾಯಿತು.ಕಾಪು ತಾಲೂಕಿನ ಬಡಗುಬೆಟ್ಟುನಲ್ಲಿ ಈ ಬಾರಿ ಪ್ರಪ್ರಥಮ ಬಾರಿಗೆ ಕೋಟಿ-ಚೆನ್ನಯ ಜೋಡುಕರೆ ಕಂಬಳ ಎಂಬ ಹೆಸರಿನಲ್ಲಿ ಉಡುಪಿ ಕಂಬಳ ಆಯೋಜಿಸಲು ನಿರ್ಧರಿಸಲಾಗಿದೆ, ಅದಕ್ಕಾಗಿ ತಟ್ಟೂರು ಎಂಬಲ್ಲಿ ಜಿಲ್ಲಾಡಳಿತ ಮಂಜೂರು ಮಾಡಿರುವ 6.30 ಎಕ್ರೆ ಸರ್ಕಾರಿ ಜಮೀನಿನಲ್ಲಿ ಕರೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನರೆವೇರಿಸಲಾಯಿತು.

ಸ್ಥಳೀಯ ಬಿಜೆಪಿ ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮುತುವರ್ಜಿಯಲ್ಲಿ ಈ ಕಂಬಳ ನಡೆಸಲಾಗುತ್ತಿದ್ದು, ಶಿಷ್ಟಾಚಾರದಂತೆ ಅವರೆ ಈ ಕಂಬಳ‍ ಸಮಿತಿಯ ಅಧ್ಯಕ್ಷರಾಗಿದ್ದಾರೆ. ವಾರದ ಹಿಂದೆಯೇ ಶನಿವಾರ ಭೂಮಿಪೂಜೆ ನಡೆಸುವುದಾಗಿ ಪ್ರಕಟಿಸಲಾಗಿತ್ತು.

ಅದರಂತೆ ಈ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಭಯ ಜಿಲ್ಲೆಗಳ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್, ಯಶ್‌ಪಾಲ್ ಸುವರ್ಣ, ಕಿರಣ್ ಕೊಡ್ಗಿ, ಗುರುರಾಜ ಶೆಟ್ಟಿ ಗಂಟಿಹೊಳೆ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಈ ನಡುವೆ ಶುಕ್ರವಾರ ಈ ಕೋಟಿಚೆನ್ನಯ ಜೋಡುಕರೆ ಕಂಬಳಕ್ಕೆ ಮಾ. 4ರಂದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಿಸಿತು. ಮಾತ್ರವಲ್ಲ ಜಿಲ್ಲಾಧಿಕಾರಿ ಶನಿವಾರ ಈ ಭೂಮಿ ಪೂಜೆ ನಡೆಯುವ ಪ್ರದೇಶದಲ್ಲಿ ನಿಷೇಧಾಜ್ಞೆ ಘೋಷಿಸಿದರು.ಬಿಜೆಪಿ ಆರೋಪ ಏನು?: ಕಂಬಳ ಎಂದರೆ ಲಕ್ಷಾಂತರ ಮಂದಿ ಭಾಗವಹಿಸುವ ಪ್ರತಿಷ್ಠೆಯ ಸ್ಪರ್ಧೆಯಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅನುದಾನದಲ್ಲಿ ನಡೆಯುವ ಸರ್ಕಾರಿ ಕಂಬಳದ ಹೆಗ್ಗಳಿಕೆ ಬಿಜೆಪಿ ಶಾಸಕರ ಪಾಲಾಗುವುದನ್ನು ತಡೆಯುವುದಕ್ಕಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರು ಜಿಲ್ಲಾಧಿಕಾರಿ ಮೇಲೆ ಒತ್ತಡ ಹೇರಿ ನಿಷೇಧಾಜ್ಞೆ ಜಾರಿಗೊಳಿಸಲಿದ್ದಾರೆ, ಈ ಮೂಲಕ ಬಿಜೆಪಿ ಶಾಸಕರು ಆಯೋಜಿಸಿದ ಭೂಮಿಪೂಜೆ ನಡೆಯದಂತೆ ಮಾಡಿ, ಮಾ. 4ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಅವರ ಮೂಲಕ ಭೂಮಿ ಪೂಜೆ ಮಾಡಿಸಿ, ಈ ಕಂಬಳ‍ದ ಸಂಪೂರ್ಣ ಕ್ರೆಡಿಟನ್ನು ತಾವು ಪಡೆದುಕೊಳ್ಳುವ ಹುನ್ನಾರ ಮಾಡಿದ್ದಾರೆ ಎಂದು ಬಿಜೆಪಿಯ ಶಾಸಕರು ಆರೋಪಿಸಿದ್ದಾರೆ.ಆದರೆ ಜಿದ್ದಿಗೆ ಬಿದ್ದಂತೆ, ಜನರು ಸೇರದಂತೆ ತಡೆದು ನಿಷೇಧಾಜ್ಞೆ ಜಾರಿಗೊಳಿಸಬೇಕಾಗಿದ್ದ ಪೊಲೀಸ್ ಅಧಿಕಾರಿಗಳ ಕಣ್ಣಮುಂದೆಯೇ ಬಿಜೆಪಿ ಶಾಸಕರು ನೂರಾರು ಮಂದಿಗಳ ಉಪಸ್ಥಿತಿಯಲ್ಲಿ ಭೂಮಿ ಪೂಜೆಯನ್ನು ವಿಜೃಂಭಣೆಯಿಂದ ನಡೆಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಾಜ್ಯ ಕಂಬಳ ಸಂಘಟನೆಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಲೋಕೇಶ್‌ ಶೆಟ್ಟಿ ಕಲ್ಕುಡೆ, ಸದಸ್ಯರಾದ ವಿಜಯಕುಮಾರ್ ಕಂಗಿನಮನೆ, ಶ್ರೀಕಾಂತ್ ಭಟ್, ಹರಿಕೃಷ್ಣ ಬಂಟ್ವಾಳ, ರತ್ನಾಕರ ಹೆಗ್ಡೆ ಮಟ್ಟಾರು ಮುಂತಾದವರು ಭಾಗವಹಿಸಿದ್ದರು.

ಯಾರದ್ದೋ ಮಗುನಿಗೆ ಅಪ್ಪ ?: ಈ ಸಂದರ್ಭ ಮಾತನಾಡಿದ ಕಾರ್ಕಳ ಶಾಸಕ ಸುನಿಲ್ ಕುಮಾರ್, ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರತಿ ಕಂಬಳಕ್ಕೆ ಅನುದಾನ ನೀಡಿತ್ತು. ಆದರೆ ಈಗಿನ ಕಾಂಗ್ರೆಸ್ ಸರ್ಕಾರ ಮಾನ ಮರ್ಯಾದೆ ಇದ್ದರೆ ಕಳೆದ 3 ವರ್ಷಗಳಲ್ಲಿ ಕಂಬಳಕ್ಕೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ಬಹಿರಂಗಪಡಿಸಿ, ನಂತರ ಭೂಮಿಪೂಜೆಗೆ ಸಚಿವೆಯನ್ನು ಕರೆತನ್ನಿ ಎಂದು ಸವಾಲು ಹಾಕಿದರು. ಈ ಕಾಂಗ್ರೆಸ್‌ನವರು ಯಾರೋ ಹುಟ್ಟಿಸಿದ ಮಗುವಿಗೆ ತಾನೇ ಅಪ್ಪ ಎನ್ನುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಇದೇನು ದೊಂಬಿ, ಗಲಭೆಯೇ ?: ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಾತಿ ಧರ್ಮಗಳ ಬೇಧ ಇಲ್ಲದೆ ನಡೆಯುವ ಕಂಬಳಕ್ಕೆ ನಿಷೇಧಾಜ್ಞೆ ಹಾಕಿದ್ದು ಇತಿಹಾಸದಲ್ಲಿಯೇ ಪ್ರಥಮ, ಇಲ್ಲಿ ಗಲಭೆ ದೊಂಬಿ ಆಗಿಲ್ಲ, ಅಥವಾ ಕಂಬಳ ನಡೆಸುವುದು ಕಾನೂನುಬಾಹಿರವೂ ಅಲ್ಲ, ಆದರೂ ನಿಷೇಧಾಜ್ಞೆ ಹೇರಿದ್ದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು. ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಜಿಲ್ಲಾಧಿಕಾರಿಗೂ ಗೊತ್ತಿದೆ, ಉಸ್ತುವಾರಿ ಸಚಿವೆಗೂ ಗೊತ್ತಿದೆ, ಹಾಗೇ ಮಾಡುವಂತೆ ಅವರ ಮೇಲೆ ಕಾಂಗ್ರೆಸ್ ನಾಯಕರ ಒತ್ತಡ ಇದೆ, ಆದ್ದರಿಂದ ಅವರೂ ಅಸಹಾಯಕರಾಗಿದ್ದಾರೆ ಎಂದರು. ಸ್ಥಳೀಯ ಶಾಸಕರೇ ಅಧ್ಯಕ್ಷರು: ರಾಜ್ಯ ಕಂಬಳ ಸಂಘಟನೆಯ ಅಧ್ಯಕ್ಷರಾಗಿರುವ ಕಾಂಗ್ರೆಸ್ ನಾಯಕ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು, ಈ ಬಾರಿ ಬಡಗುಬೆಟ್ಟು ಸೇರಿ 3 ಹೊಸ ಕಂಬಳ‍ಗಳಿಗೆ ಅನುಮತಿ ನೀಡಲಾಗಿದೆ. ಇಲ್ಲಿ ಕಂಬಳ ನಡೆಯುವ ಬಗ್ಗೆ ಜಿಲ್ಲಾಡಳಿತಕ್ಕೆ ಪೂರ್ಣ ಮಾಹಿತಿ ನೀಡಲಾಗಿದೆ. ಜಾತಿ ಧರ್ಮವಿಲ್ಲದೆ, ಸರ್ಕಾರದ ಅನುದಾನದಲ್ಲಿ ನಡೆಯುವ ಈ ಕಂಬಳಗಳಿಗೆ ಆಯಾ ಕ್ಷೇತ್ರಗಳ ಶಾಸಕರೆ ಅಧ್ಯಕ್ಷರಾಗಿರುತ್ತಾರೆ. ಇದರಲ್ಲಿಯೂ ರಾಜಕೀಯ ಬೆರೆಸುವುದು ಯಾವ ಪಕ್ಷಕ್ಕೂ ಶೋಭೆಯಲ್ಲ, ಆದ್ದರಿಂದ ಈ ಕಂಬಳಕ್ಕೆ ಯಾರೂ ಅಡ್ಡಿ ಮಾಡಬಾರದು ಎಂದರು. ಮುಖಂಡರ ಸಹಿತ 37 ಮಂದಿ ವಿರುದ್ಧ ಪ್ರಕರಣ: ನಿಷೇಧಾಜ್ಞೆ ಉಲ್ಲಂಘಿಸಿ ಕಂಬಳ ಕರೆಯ ಭೂಮಿ ಪೂಜೆಯಲ್ಲಿ ಭಾಗವಹಿಸಿದ 37 ಮಂದಿ ಮೇಲೆ ಉಡುಪಿ ತಹಸೀಲ್ದಾರ್ ಗುರುರಾಜ್ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಉಡುಪಿ ಮತ್ತು ದ ಕ ಜಿಲ್ಲೆಯ 7 ಮಂದಿ ಶಾಸಕರು ಮತ್ತು ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ರು, ಸದಸ್ಯರು, ಭಾಗವಹಿಸಿದ್ದ ಬಿಜೆಪಿ ಪ್ರಮುಖರು, ಸ್ಥಳೀಯ ಮುಖಂಡರ ಮೇಲೆ ಮಣಿಪಾಲ ಠಾಣೆಯಲ್ಲಿ ನಿಷೇಧಾಜ್ಞೆ ಉಲ್ಲಂಘನೆ ಮತ್ತು ನಿಷೇಧಿತ ಸ್ಥಳ ಪ್ರವೇಶಿಸಿದ ಪ್ರಕರಣಗಳು ದಾಖಲಾಗಿವೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ಸಂಘಟನೆಗೆ ಮತ್ತೊಂದು ಹೆಸರು ಸುಮನಸಾ: ಡಾ. ತಲ್ಲೂರು
ಬ್ರಹ್ಮರ ಕೂಟ್ಲು ಟೋಲ್ ವಿರುದ್ಧ 3ರಂದು ಬೃಹತ್ ಪ್ರತಿಭಟನೆ