ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಕೆಳಭಾಗದ ಕಾಲುವೆಗಳಿಗೆ ಕಟ್ಟು ನೀರು ಕೊಡುವುದಾಗಿ ಹೇಳಿ ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ಸಮುದಾಯಕ್ಕೆ ವಿಷ ಕೊಡಲು ಮುಂದಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.ಪಟ್ಟಣದ ತಾಲೂಕು ಕಚೇರಿ ಎದುರು ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ನೃತೃತ್ವದಲ್ಲಿ ನೂರಾರು ಮಂದಿ ರೈತರು ಸರ್ಕಾರ, ನೀರಾವರಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಕೆಲ ಕಾಲ ಪ್ರತಿಭಟನೆ ನಡೆಸಿದರು.
ಕಾಂಗ್ರೆಸ್ ಸರ್ಕಾರ ನಿರಂತರವಾಗಿ ರೈತ ವಿರೋಧಿ ಕೆಲಸ ಮಾಡುತ್ತಲೇ ಬಂದಿದೆ. ಜನ ಬರಗಾಲ ಮತ್ತು ಅತಿವೃಷ್ಟಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ನೆರವಿಗೆ ಬಾರದೇ ಮೌನವಹಿಸಿದೆ. ದಲಿತ ಹಾಗೂ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.ರಾಜ್ಯದಲ್ಲಿ 1600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನಪರ ಆಡಳಿತಕ್ಕೆ ಗಮನ ಕೊಡದ ಸರ್ಕಾರ ಜನವಿರೋಧಿ, ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.
ಕಟ್ಟು ಪದ್ಧತಿ ನೀರು ಕೊಡುವುದಾಗಿ ಸರ್ಕಾರ ಪ್ರಕಟಣೆ ಹೊರಡಿಸಿರುವುದು ಸರಿಯಲ್ಲ. ಕೂಡಲೇ ಈ ರೈತ ವಿರೋಧಿ ನಿಲುವಿಂದ ಹಿಂದೆ ಸರಿಯದೇ ಹೋದಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಳಿಕ ತಹಸೀಲ್ದಾರ್ ಪರುಶುರಾಂ ಸತ್ತೀಗೇರಿ ಅವರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ವಿ ಕೃಷ್ಣ, ಖಜಾಂಚಿ ಮಹದೇವು, ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜು, ಜಯರಾಮೇಗೌಡ, ಜಗದೀಶ್, ಡಿ.ಎಂ. ಮಹೇಶ್, ಮಾರಸಿಂಗನಹಳ್ಳಿ ತಿಮ್ಮೇಗೌಡ, ಎಮ್ಮೆಗೆ ಕೃಷ್ಣ, ಕಪರನಕೊಪ್ಪಲು ಸುರೇಶ, ಹೊಸಹಳ್ಳಿ ಸ್ವಾಮಿ, ಅಚ್ಚಪ್ಪನಕೊಪ್ಪಲು ಕೃಷ್ಣ, ಕಡಿತನಾಳು ಶ್ರೀಧರ್, ಚಾಮರಾಜು, ಪಾಲಹಳ್ಳಿ ರಾಮಚಂದ್ರು, ಚಿಂದಗಿರಿಕೊಪ್ಪಲು ಕೆಂಪೆಗೌಡ, ಬಲ್ಲೇನಹಳ್ಳಿ ಬಿ.ಟಿ ಮಹೇಶ, ರಾಮಚಂದ್ರ, ಪೈಲ್ವಾನ್ ನಾಗಣ್ಣ ಸೇರಿದಂತೆ ಇತರರು ಇದ್ದರು.