ಕನ್ನಡಪ್ರಭ ವಾರ್ತೆ ಬೆಂಗಳೂರು:
ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಸಂಜೆ ನಡೆದ ಭವ್ಯ ಸಮಾರಂಭದಲ್ಲಿ ಪರ್ವ ಗ್ರೂಪ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಎಚ್.ಪಿ.ನೀಲೇಶ್ ಹಾಗೂ ಮಹೇಶ್ ಭೂಪತಿ ಅವರು ಪರಸ್ಪರ ಹಸ್ತಲಾಘವ ಮಾಡುವ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು.
ಸಮಾರಂಭದಲ್ಲಿ ಮಾತನಾಡಿದ ಮಹೇಶ್ ಭೂಪತಿ, ಇದೇ ಆಗಸ್ಟ್ ತಿಂಗಳಲ್ಲಿ ಮುಂಬೈನಲ್ಲಿ ಜರುಗಿದ ಕ್ರೀಡಾಕೂಟದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಪರ್ವ ಗ್ರೂಪ್‌ನ ನೀಲೇಶ್ ಅವರ ಪರಿಚಯವಾಯಿತು. ತಾವು ದುಬೈನಲ್ಲಿ ನೆಲೆಸಿದ್ದು, ನೀಲೇಶ್ ಕಚೇರಿ ಕೂಡ ದುಬೈನಲ್ಲಿದೆ. ಹೀಗಾಗಿ, ಹಲವು ಬಾರಿ ನಾವು ಭೇಟಿಯಾದೆವು. ಈ ವೇಳೆ ತಮ್ಮ ಗ್ರೂಪ್‌ನ ಗುರಿಗಳ ಕುರಿತು ಮಾಹಿತಿ ಹಂಚಿಕೊಂಡರು. ಅವರ ಯೋಜನೆಗಳು ವಿಭಿನ್ನವಾಗಿದೆ ಎನಿಸಿತು. ಹೀಗಾಗಿ, ಪರ್ವ ಗ್ರೂಪ್‌ನ ಪಯಣದಲ್ಲಿ ಪಾಲುದಾರನಾಗಲು ನಿರ್ಧರಿಸಿದೆ ಎಂದರು.ಮುಂಬರುವ ವರ್ಷಗಳಲ್ಲಿ ಒಟ್ಟಾಗಿ ವಿಶೇಷ ಎನಿಸುವ ಕೆಲಸಗಳನ್ನು ಮಾಡುವ ಗುರಿಗಳನ್ನು ಹೊಂದಿದ್ದೇವೆ. ಡಿಸೆಂಬರ್‌ನಲ್ಲಿ ನಗರದಲ್ಲಿ ವರ್ಲ್ಡ್ ಟೆನಿಸ್ ಲೀಗ್ ನಡೆಯಲಿದೆ. ಇದರಲ್ಲಿಯೂ ನೀಲೇಶ್ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಒಟ್ಟಾಗಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಮಹೇಶ್ ಭೂಪತಿ ಹೇಳಿದರು.
ಎಚ್.ಪಿ.ನೀಲೇಶ್ ಮಾತನಾಡಿ, ನಮ್ಮ ಭವಿಷ್ಯದ ಯೋಜನೆಗಳನ್ನು ಸಾಕಾರಗೊಳಿಸಲು ಮಹೇಶ್ ಭೂಪತಿ ಜೊತೆಯಾಗುತ್ತಿರುವುದು ಅತ್ಯಂತ ಸಂತೋಷ ಉಂಟು ಮಾಡಿದೆ. ನಮ್ಮ ಸಂಸ್ಥೆಯ ಗುರಿ, ಉದ್ದೇಶ, ಯೋಜನೆಗಳ ಬಗ್ಗೆ ತಿಳಿದುಕೊಂಡು ಪಾಲುದಾರರಾಗಲು ನಿರ್ಧರಿಸಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿ, ಸ್ವತಃ ಉದ್ಯಮಿಯಾಗಿ ಕೋಚಿಂಗ್ ಕ್ಲಬ್ ಹೊಂದಿರುವ ಅವರು ತಮ್ಮ ಅನುಭವ ನಮ್ಮೊಂದಿಗೆ ಹಂಚಿಕೊಂಡು ಬೆಳೆಯಲು ಮುಂದಾಗಿದ್ದಾರೆ ಎಂದರು.
ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಮಾತನಾಡಿ, ನೀಲೇಶ್ ಅವರು ದೊಡ್ಡ ಕನಸುಗಳನ್ನು ಕಂಡು ಅವುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸುತ್ತಾರೆ. ಸಣ್ಣ ಯೋಜನೆಗಳನ್ನು ಕೂಡ ದೊಡ್ಡದಾಗಿ ಬೆಳೆಸುವುದು ಹೇಗೆ ಎಂದು ಯೋಚಿಸುತ್ತಾರೆ. ಇವರ ಇಂತಹ ಆಲೋಚನೆಗಳ ಕಾರಣದಿಂದಾಗಿ ಟೆನಿಸ್ ತಾರೆ ಮಹೇಶ್ ಭೂಪತಿ ಕೈಜೋಡಿಸಿದ್ದಾರೆ. ಭೂಪತಿ ಜೊತೆಗಿನ ಪಾಲುದಾರಿಕೆಯೊಂದಿಗೆ ಪರ್ವ ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ತುಮಕೂರಿನಿಂದ ದುಬೈಗೆ ತೆರಳಿ ಈಗ ದುಬೈನಿಂದ ಬೆಂಗಳೂರಿಗೆ ಬಂದಿರುವ ನೀಲೇಶ್ ಕನಸುಗಳು ನನಸಾಗಲಿ. ಇವರ ಉದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.